
ಕೊಲೊಂಬೊ: 2ನೇ ಟೆಸ್ಟ್‌ನಲ್ಲಿ ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ಹೊರತಾಗಿಯೂ, ಪಸಿಂದು ಸೂರ್ಯಬಂಡಾರ ಹಾಗೂ ಸೋನಲ್ ದಿನುಶಾ ಅವರ ಅರ್ಧಶತಕಗಳ ನೆರವಿನಿಂದ, ಶ್ರೀಲಂಕಾ ಫಾಲೋ ಆನ್ ತಪ್ಪಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಭಾರತದ 503 ರನ್‌ಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಲಂಕಾ 3ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 265 ರನ್ ಗಳಿಸಿದ್ದು, ಇನ್ನೂ 238 ರನ್ ಹಿನ್ನಡೆಯಲ್ಲಿದೆ. ಆದರೆ ಫಾಲೋ ಆನ್ ತಪ್ಪಿಸಿಕೊಂಡು ಭಾರತ ಮತ್ತೆ ಬ್ಯಾಟ್ ಮಾಡುವಂತೆ ಮಾಡಲು ಕೇವಲ 39 ರನ್ ಬೇಕಿದೆ. ದಿನುಶಾ ಔಟಾಗದೆ 85 ರನ್ ಗಳಿಸಿದ್ದು, 10ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಲಹಿರು ಕುಮಾರ 8 ರನ್‌ಗೆ 50 ಎಸೆತ ಎದುರಿಸಿ, ದಿನುಶಾಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಮುರಿಯದ 9ನೇ ವಿಕೆಟ್‌ಗೆ ಇವರಿಬ್ಬರ ನಡುವೆ 35 ರನ್ ಜೊತೆಯಾಟ ಮೂಡಿಬಂದಿದೆ.
ಮಂಗಳವಾರವೂ ಆಟಕ್ಕೆ ಮಳೆ ಕಾಡಿತಾದರೂ, ದಿನದಾಟದಲ್ಲಿ 80.4 ಓವರ್ ಬೌಲ್ ಮಾಡಲು ಸಾಧ್ಯವಾಯಿತು. 2ನೇ ದಿನದಾಟದಂತ್ಯಕ್ಕೆ 8 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಲಂಕಾ, ದಿನದ ಆರಂಭದಲ್ಲೇ ಆರಂಭಿಕ ಬ್ಯಾಟರ್ ಕಮಿಲ್ ಮಿಶಾರಾ (19)ರ ವಿಕೆಟ್ ಪತನಗೊಂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿತು.
ಆ ಬಳಿಕ, ಸೂರ್ಯಬಂಡಾರ ಹಾಗೂ ಕಮಿಂಡು ಮೆಂಡಿಸ್ ಕೆಲ ಕಾಲ ಹೋರಾಟ ಪ್ರದರ್ಶಿಸಿದರು. ಮೆಂಡಿಸ್ 32 ರನ್ ಗಳಿಸಿ ಔಟಾದ ಬೆನ್ನಲ್ಲೇ ನಾಯಕ ಧನಂಜಯ ಡಿ ಸಿಲ್ವಾ (8) ಸಹ ಪೆವಿಲಿಯನ್ ಸೇರಿದರು. 80 ರನ್ ಗಳಿಸಿ ಪಸಿಂದು ಔಟಾಗುತ್ತಿದ್ದಂತೆ, ನಿರೋಶನ್ ಡಿಕ್ವೆಲ್ಲಾ (0) ಸಹ ಕ್ರೀಸ್ ತೊರೆದರು. 173 ರನ್‌ಗೆ 7 ವಿಕೆಟ್ ಕಳೆದುಕೊಂಡ ಲಂಕಾ, ತೀವ್ರ ಸಂಕಷ್ಟಕ್ಕೆ ಗುರಿಯಾಯಿತು.
ಈ ಹಂತದಲ್ಲಿ 8ನೇ ವಿಕೆಟ್‌ಗೆ ಕೇಶರ ನುವಾಂತ (18) ಜೊತೆ 8ನೇ ವಿಕೆಟ್‌ಗೆ 57 ರನ್ ಸೇರಿಸಿದ ದಿನುಶಾ, ದಿನದಾಟ ಮುಗಿಯುವ ವರೆಗೂ ಕ್ರೀಸ್‌ನಲ್ಲಿ ನೆಲೆಯೂರಿ ತಂಡಕ್ಕೆ ಚೇತರಿಕೆ ನೀಡಿದರು. ಮಳೆ ಕಾರಣ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲೇ ದಿನದಾಟ ಮುಕ್ತಾಯಗೊಂಡಿತು.
ಪಂದ್ಯದಲ್ಲಿ ಇನ್ನೆರಡು ದಿನ ಬಾಕಿ ಇದ್ದು, ಭಾರತ ಗೆಲುವಿನ ಮೇಲೆ ಕಣ್ಣಿಟ್ಟರೆ, ಲಂಕಾ ಪಂದ್ಯ ಉಳಿಸಿಕೊಳ್ಳಲು ಹೋರಾಟ ಮುಂದುವರಿಸಲಿದೆ.
ಸ್ಕೋರ್: ಭಾರತ 503/9 ಡಿ., ಲಂಕಾ (3ನೇ ದಿನದಂತ್ಯಕ್ಕೆ) 265/8 (ದಿನುಶಾ 85*, ಸೂರ್ಯಬಂಡಾರ 80, ಪ್ರಸಿದ್ಧ್ 3-47, ಸುಥಾರ್ 3-83, ಜಡೇಜಾ 1-45, ಸಿರಾಜ್ 1-33)
ದುಬೈ: ಭಾರತ ವಿರುದ್ಧ 2ನೇ ಟೆಸ್ಟ್‌ನ 2ನೇ ದಿನದಾಟದ ಕೊನೆ ಎಸೆತದಲ್ಲಿ ಔಟಾಗಿ, ಸಿಟ್ಟಿನಿಂದ ಬೌಂಡರಿ ಗೆರೆಯ ಕುಶನ್‌ಗೆ ಬ್ಯಾಟ್‌ನಿಂದ ಹೊಡೆದಿದ್ದ ಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯಗೆ ಐಸಿಸಿ ಛೀಮಾರಿ ಹಾಕಿದೆ. ಜೊತೆಗೆ ಒಂದು ಋಣಾತ್ಮಕ ಅಂಕವನ್ನೂ ನೀಡಿ ಎಚ್ಚರಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.