
ಕೆಲವೊಮ್ಮೆ ನಮ್ಮ ಕನಸುಗಳು ಮುಗಿದೇ ಹೋಯಿತು ಎಂದುಕೊಳ್ಳುವ ಹೊತ್ತಲ್ಲೇ ಬದುಕು ಹೊಸ ದಾರಿಯನ್ನು ತೋರಿಸುತ್ತದೆ. ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಾಂಗರ್ ಪುತ್ರಿ ಅನಯಾ ಬಾಂಗರ್ ಅವರ ಜೀವನವೂ ಈಗ ಅಂತಹದ್ದೇ ಒಂದು ಸುಂದರ ತಿರುವು ಪಡೆದಿದೆ. ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಯ ನಂತರ ನಾನಿನ್ನು ಎಂದಿಗೂ ಕ್ರಿಕೆಟ್ ಆಡಲಾರೆ ಎಂದು ಕಣ್ಣೀರಿಟ್ಟಿದ್ದ ಅನಯಾಗೆ ಈಗ ಆಸ್ಟ್ರೇಲಿಯಾದಲ್ಲಿ ಹೊಸ ಭರವಸೆ ಸಿಕ್ಕಿದೆ.
ಒಂದು ಕಾಲದಲ್ಲಿ ಆರ್ಯನ್ ಬಾಂಗರ್ ಆಗಿ ಗುರುತಿಸಿಕೊಂಡಿದ್ದ ಇವರು, ಮುಂಬೈ ಪರ ವಯೋಮಿತಿ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ ಮತ್ತು ಮುಶೀರ್ ಖಾನ್ ಅವರಂತಹ ದಿಗ್ಗಜರ ಜೊತೆ ಮೈದಾನ ಹಂಚಿಕೊಂಡವರು. ಆದರೆ, ತಮ್ಮ ಅಂತರಾತ್ಮದ ಕರೆಗೆ ಓಗೊಟ್ಟು ಈ ವರ್ಷದ ಮಾರ್ಚ್‌ನಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದರು. ಆ ಕ್ಷಣದಲ್ಲಿ ಅವರಿಗೆ ಎದುರಾದ ದೊಡ್ಡ ಪ್ರಶ್ನೆ ಎಂದರೆ- "ಮತ್ತೆ ಕ್ರಿಕೆಟ್ ಆಡಲು ಸಾಧ್ಯವೇ?".
ತಮ್ಮ ನೋವನ್ನು ಹಂಚಿಕೊಂಡಿರುವ ಅನಯಾ, ನಾನು ಮತ್ತೆ ಕ್ರಿಕೆಟ್ ಆಡುತ್ತೇನೆ ಎಂಬ ನಂಬಿಕೆಯೇ ಇರಲಿಲ್ಲ. ಆಟಕ್ಕೆ ವಿದಾಯ ಹೇಳುವ ಹಂತ ತಲುಪಿದ್ದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ನನಗೆ ಮತ್ತೊಂದು ಅವಕಾಶ ನೀಡಿದೆ. ಇದು ನನ್ನ ಪಾಲಿಗೆ ಅತ್ಯಂತ ಸಂತಸದ ದಿನ ಎಂದು ಭಾವುಕರಾಗಿ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ 'ಕಮ್ಯುನಿಟಿ ಕ್ರಿಕೆಟ್' (ಸ್ಥಳೀಯ ಕ್ರಿಕೆಟ್) ಆಡಲು ಅನಯಾ ಅವರಿಗೆ ಈಗ ಅಧಿಕೃತ ಅನುಮತಿ ಸಿಕ್ಕಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಟ್ರಾನ್ಸ್‌ಜೆಂಡರ್ ಆಟಗಾರರ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿದ್ದರೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಅನಯಾ ಅವರ ಕನಸಿಗೆ ಬೆಂಬಲವಾಗಿ ನಿಂತಿದೆ. ಉನ್ನತ ಮಟ್ಟದ 'ಎಲೈಟ್ ಕ್ರಿಕೆಟ್' (ಬಿಗ್ ಬ್ಯಾಷ್ ಲೀಗ್ ನಂತಹ ಪಂದ್ಯಾವಳಿ) ಆಡಬೇಕೆಂದರೆ ಅವರು ಕೆಲವು ನಿಯಮಗಳನ್ನು ಪಾಲಿಸಬೇಕಿದೆ. 2027ರ ಹೊತ್ತಿಗೆ ಅವರ ದೇಹದಲ್ಲಿನ ಟೆಸ್ಟೋಸ್ಟೆರಾನ್ ಮಟ್ಟವು ನಿಗದಿತ ಪ್ರಮಾಣಕ್ಕಿಂತ (10 nmol/L) ಕಡಿಮೆ ಇರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.
ತನ್ನ ಅಸ್ಮಿತೆಯನ್ನು ಹುಡುಕುತ್ತಲೇ ಪ್ರೀತಿಯ ಕ್ರಿಕೆಟ್ ಅನ್ನು ಉಳಿಸಿಕೊಳ್ಳಲು ಅನಯಾ ನಡೆಸಿದ ಹೋರಾಟ ನಿಜಕ್ಕೂ ಸ್ಫೂರ್ತಿದಾಯಕ. ಸದ್ಯಕ್ಕೆ ಅವರು ಆಸ್ಟ್ರೇಲಿಯಾದ ಕ್ಲಬ್ ಕ್ರಿಕೆಟ್‌ನಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಮಗಳ ಪ್ರತಿ ಹೋರಾಟದಲ್ಲೂ ಬೆನ್ನೆಲುಬಾಗಿ ನಿಂತಿರುವ ತಂದೆ ಸಂಜಯ್ ಬಾಂಗರ್ ಅವರ ಬೆಂಬಲವೂ ಇಲ್ಲಿ ಅನನ್ಯವಾಗಿದೆ. ಅನಯಾರ ಈ ಎರಡನೇ ಇನ್ನಿಂಗ್ಸ್ ಯಶಸ್ವಿಯಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.