
ಮುಂಬೈ: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೆ ಭಾರತ ಸಜ್ಜಾಗುತ್ತಿದೆ. ಈ ಹೊತ್ತಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಣ್ಣ ಆತಂಕ ಮೂಡಿಸಿದೆ. ಈ ವಿಶ್ವಕಪ್‌ನ ಅತಿದೊಡ್ಡ ಅಚ್ಚರಿಯ ಫಲಿತಾಂಶಗಳಲ್ಲಿ ಒಂದಾದ ಜಿಂಬಾಬ್ವೆ-ಆಸ್ಟ್ರೇಲಿಯಾ ಪಂದ್ಯದ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದ ವ್ಯಕ್ತಿಯೇ ಈಗ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಮಾತನಾಡಿದ್ದಾನೆ.
ನಾಳೆ ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲಲಿದೆ ಎಂದು ಈತ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಫೆಬ್ರವರಿ 15ರಂದು ಮುಂಬೈನಲ್ಲಿ ನಡೆಯುವ ಪಂದ್ಯದಲ್ಲಿ ನೇಪಾಳ ತಂಡ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಅಚ್ಚರಿ ಮೂಡಿಸಲಿದೆ ಎಂದೂ ಭವಿಷ್ಯ ನುಡಿದಿದ್ದಾನೆ. ಈತ ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಗೆಲ್ಲುತ್ತದೆ ಎಂದು ಹೇಳಿದ್ದ. ಆ ಮಾತು ನಿಜವಾದ ಕಾರಣ, ಈತನ ಹೊಸ ವಿಡಿಯೋ ಈಗ ಅಭಿಮಾನಿಗಳ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆದರೆ, ಜಿಂಬಾಬ್ವೆ ವಿರುದ್ಧ ಸೋತರೂ ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವೇ ಚಾಂಪಿಯನ್ ಆಗಲಿದೆ ಎಂದೂ ಈತ ಹೇಳಿದ್ದಾನೆ.
ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಟೀಂ ಇಂಡಿಯಾ ಸತತವಾಗಿ ಗೆಲ್ಲುತ್ತಲೇ ಬಂದಿದೆ. ಆದರೆ 2021ರಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಭಾರತ ಎದುರು 10 ವಿಕೆಟ್‌ಗಳ ಜಯ ದಾಖಲಿಸಿತ್ತು. ಇದನ್ನು ಹೊರತುಪಡಿಸಿ ಉಳಿದೆಲ್ಲಾ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.
ಆದರೆ, ಈ ಭವಿಷ್ಯವಾಣಿಗೆ ಹೆದರಬೇಕಾಗಿಲ್ಲ ಎನ್ನುತ್ತವೆ ಹಳೆಯ ಅಂಕಿಅಂಶಗಳು. ಇತಿಹಾಸವನ್ನು ಕೆದಕಿದರೆ, ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದಾಗಲೆಲ್ಲಾ ಭಾರತ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. 1983ರ ಏಕದಿನ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಆಸ್ಟ್ರೇಲಿಯಾವನ್ನು ಸೋಲಿಸಿದಾಗ, ಭಾರತ ಕಪ್ ಗೆದ್ದಿತ್ತು. 2007ರ ಮೊದಲ ಟಿ20 ವಿಶ್ವಕಪ್‌ನಲ್ಲೂ ಜಿಂಬಾಬ್ವೆ ಆಸ್ಟ್ರೇಲಿಯಾಕ್ಕೆ ಶಾಕ್ ನೀಡಿತ್ತು, ಆಗಲೂ ಭಾರತವೇ ಚಾಂಪಿಯನ್ ಆಗಿತ್ತು. ಈ ಬಾರಿಯೂ ಜಿಂಬಾಬ್ವೆ ಆಸ್ಟ್ರೇಲಿಯಾವನ್ನು ಮಣಿಸಿರುವುದರಿಂದ, ಭಾರತವೇ ಚಾಂಪಿಯನ್ ಆಗಲಿದೆ ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ. ಭವಿಷ್ಯ ಏನೇ ಇರಲಿ, ಫೆಬ್ರವರಿ 15ರಂದು ಕೊಲಂಬೊ ಮೈದಾನದಲ್ಲಿ ಒಂದು ರೋಚಕ ಪಂದ್ಯ ನಡೆಯುವುದಂತೂ ಗ್ಯಾರಂಟಿ.
ಕೊಲಂಬೊ: ಕ್ರಿಕೆಟ್‌ನ ಜಂಬೋ, ಬಲಾಡ್ಯ ತಂಡ ಎಂದೇ ಗುರುತಿಸಿಕೊಳ್ಳುವ ಆಸ್ಟ್ರೇಲಿಯಾ ತಂಡಕ್ಕೆ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಆಘಾತ ನೀಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಆಸೀಸ್ ವಿರುದ್ಧ ಜಿಂಬಾಬ್ವೆ 23 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಜಿಂಬಾಬ್ವೆ ಆಡಿರುವ ಎರಡೂ ಪಂದ್ಯದಲ್ಲಿ ಗೆದ್ದರೆ, ಆಸೀಸ್ 2 ಪಂದ್ಯಗಳಲ್ಲಿ ಮೊದಲ ಸೋಲು ಕಂಡಿತು.
ಜಿಂಬಾಬ್ವೆ ಮೊದಲು ಬ್ಯಾಟ್ ಮಾಡಿ 2 ವಿಕೆಟ್‌ಗೆ 169 ರನ್ ಕಲೆಹಾಕಿತು. ಆರಂಭಿಕರಾದ ಬ್ರಿಯಾನ್ ಬೆನೆಟ್(ಔಟಾಗದೆ 64) ಹಾಗೂ ಮರುಮಾನಿ(35) ತಂಡಕ್ಕೆ ನೆರವಾದರು. ಬಳಿಕ ರ್‍ಯಾನ್ ಬರ್ಲ್(35) ಹಾಗೂ ನಾಯಕ ಸಿಕಂದರ್ ರಝಾ(ಔಟಾಗದೆ 25) ತಂಡದ ಮೊತ್ತವನ್ನು 170ರ ಸನಿಹಕ್ಕೆ ತಲುಪಿಸಿದರು.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸೀಸ್ ತಂಡ ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ತೋರಿತು. ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್ ಸೊನ್ನೆ ಸುತ್ತಿದರೆ, ಟ್ರ್ಯಾವಿಸ್ ಹೆಡ್ 17, ಮ್ಯಾಕ್ಸ್‌ವೆಲ್ 31 ರನ್‌ಗೆ ಔಟಾದರು. ಮ್ಯಾಟ್ ರೆನ್ಶಾ(66) ಏಕಾಂಗಿ ಹೋರಾಟ ನಡೆಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಬ್ಲೆಸಿಂಗ್ ಮುಜರಬಾನಿ 17 ರನ್‌ಗೆ 4, ಬ್ರಾಡ್ ಎವಾನ್ಸ್ 23 ರನ್‌ಗೆ 3 ವಿಕೆಟ್ ಕಿತ್ತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.