
ಬೆಂಗಳೂರು (ಫೆ.23): ಭಾರತದ ಆತಿಥ್ಯದಲ್ಲಿ ನಡೆದ 2023ರ ಏಕದಿನ ವಿಶ್ವಕಪ್. ಫೈನಲ್‌ನಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ. ಭಾರತದ ಗೆಲುವಿನ ನಿರೀಕ್ಷೆ ಇರಿಸಿಕೊಂಡಿದ್ದ ಎಲ್ಲರಿಗೂ ಶಾಕ್ ನೀಡುವಂತೆ ಆಸೀಸ್ ಟ್ರೋಫಿ ಗೆದ್ದಿತ್ತು. ಆದರೆ, ಟ್ರೋಫಿ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡದ ಅಹಂ ವರ್ತನೆ ಯಾರಿಗೂ ಇಷ್ಟವಾಗಿರಲಿಲ್ಲ. ಡ್ರೆಸಿಂಗ್ ರೂಮ್‌ನಲ್ಲಿ ವಿಶ್ವಕಪ್ ಟ್ರೋಫಿಯನ್ನು ನೆಲದ ಮೇಲೆ ಇಟ್ಟು ಅದರ ಮೇಲೆ ಕಾಲಿಟ್ಟು ಆಟಗಾರರು ಪೋಸ್ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ಸೋಫಾ ಮೇಲೆ ಕುಳಿತಿದ್ದ ಫೋಟೋಗೆ ಸಾಕಷ್ಟು ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು.
ಆದರೆ, ಟ್ರೋಫಿಗೆ ಮಾಡಿದ ಅವಮಾನ ಆಸೀಸ್ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಅನ್ನೋದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಕ್ರಿಕೆಟ್ ಎಷ್ಟು ಲೆಕ್ಕಾಚಾರದ ಆಟವೋ ಅಷ್ಟೇ ಅದೃಷ್ಟದ ಆಟವೂ ಹೌದು. ಟ್ರೋಫಿ ಮೇಲೆ ಕಾಲಿಟ್ಟು ಆಸೀಸ್ ಆಟಗಾರರು ಅಹಂ ತೋರಿದ ದಿನದಿಂದ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಸೋಲು ಕಾಣುವವರೆಗೂ ಆಸೀಸ್ ಸಾಕಷ್ಟು ಸೋಲಿನ ಶಾಪ ಎದುರಿಸಿದೆ.
2023ರ ವಿಶ್ವಕಪ್‌ನ ಸೆಲಬ್ರೇಷನ್ ವಿವಾದ ಆದ ಬೆನ್ನಲ್ಲಿಯೇ ಪಾಕಿಸ್ತಾನ ವಿರುದ್ಧ ಆಸೀಸ್ ಹಿಂದೆಂದೂ ಆಗದ ರೀತಿಯಲ್ಲಿ ವೈಟ್‌ವಾಷ್ ಎದುರಿಸಿತ್ತು. ಆಡಿದ ಮೂರೂ ಪಂದ್ಯಗಳಲ್ಲಿ ತಂಡ ಸೋಲು ಕಂಡಿತು. ಅದಾದ ಬಳಿಕ ಭಾರತ ವಿರುದ್ಧ ತವರಿನಲ್ಲೇ ನಡೆದ ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿತು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ 2-1 ಹಾಗೂ ಶ್ರೀಲಂಕಾ ವಿರುದ್ಧ 2-0 ಅಂತರದಲ್ಲಿ ಏಕದಿನ ಸರಣಿಯಲ್ಲಿ ಸೋಲು ಕಂಡಿತು.
ಗಾಬಾ ಮೈದಾನದಲ್ಲಿ ತಾನೆಂದೂ ಸೋಲು ಕಾಣೋದಿಲ್ಲ ಎಂದೆ ಎದೆ ಬೀಗಿಸಿಕೊಂಡು ತಿರುಗಾಡುತ್ತಿದ್ದ ಆಸೀಸ್, ಅದೇ ನೆಲದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿತು. ಬಳಿಕ ನಡೆದಿದ್ದು ಪಾಕಿಸ್ತಾನ ವಿರುದ್ಧ ತವರಿನ ಏಕದಿನ ಸರಣಿ ಇದರಲ್ಲೂ ಆಸ್ಟ್ರೇಲಿಯಾ 1-2 ಅಂತರದಲ್ಲಿ ಸೋಲು ಕಂಡು ನಿರಾಸೆ ಎದುರಿಸಿತು.
2024ರ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ತಂಡ ಸೋಲು ಕಂಡಿದ್ದು ಮಾತ್ರವಲ್ಲದೆ, ಆ ಟೂರ್ನಿಯಲ್ಲಿ ಕನಿಷ್ಠ ಸೆಮಿಫೈನಲ್‌ಗೇರಲು ಕೂಡ ತಂಡ ವಿಫಲವಾಗಿತ್ತು. ಈಗ 2026ರ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾ ಸೋಲು ಕಂಡಿದೆ. ಅದರೊಂದಿಗೆ 2023ರ ಸೆಲಬ್ರೇಷನ್‌ನಲ್ಲಿ ಆಸೀಸ್ ತೋರಿದ ಅಹಂಕಾರ ಇಂದಿಗೂ ಅವರಿಗೆ ಶಾಪವಾಗಿ ಕಾಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.