ಐರ್ಲೆಂಡ್ ಎದುರು ಶುಭಾರಂಭ ಮಾಡಿದ ಟೀಂ ಇಂಡಿಯಾ
3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 2 ರನ್ ರೋಚಕ ಜಯ
ಮಳೆಯಾಟದಿಂದಾಗಿ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಗೆಲುವು
ಡಬ್ಲಿನ್(ಆ.19): ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಳೆಯಿಂದಾಗಿ ಆಘಾತಕ್ಕೊಳಗಾಗುವುದರಿಂದ ಪಾರಾಗಿದೆ. ಐರ್ಲೆಂಡ್ ನೀಡಿದ್ದ 140 ರನ್ ಗುರಿ ಬೆನ್ನತ್ತಲು ಇಳಿದ ಭಾರತ, 6.5 ಓವರ್ ಬ್ಯಾಟ್ ಮಾಡಿದ್ದಾಗ ಶುರುವಾದ ಮಳೆ ಆಟ ಪುನಾರಂಭಗೊಳ್ಳಲು ಅವಕಾಶ ನೀಡಲಿಲ್ಲ.
7ನೇ ಓವರಲ್ಲಿ 2 ವಿಕೆಟ್ ಕಳೆದುಕೊಂಡ ಹೊರತಾಗಿಯೂ, ಡಕ್ವರ್ತ್ ಲೂಯಿಸ್ ನಿಯಮದನ್ವಯ 6.5 ಓವರ್‌ನಲ್ಲಿ ಭಾರತ 45 ರನ್ ಗಳಿಸಬೇಕಿತ್ತು. ತಂಡ 47 ರನ್ ಗಳಿಸಿದ್ದ ಕಾರಣ 2 ರನ್ ರೋಚಕ ಗೆಲುವು ಭಾರತದ್ದಾಯಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.
undefined
ಭಾರತ ನಿಧಾನಗತಿ ಆರಂಭ ಪಡೆಯಿತು. ಮೊದಲ 4 ಓವರಲ್ಲಿ ಕೇವಲ 3 ಬೌಂಡರಿ ಬಾರಿಸಿದ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್, ಒತ್ತಡಕ್ಕೆ ಸಿಲುಕಿದಂತೆ ಕಂಡಬಂತು. 24 ರನ್‌ಗೆ 23 ಎಸೆದ ಎದುರಿಸಿದ ಜೈಸ್ವಾಲ್, ಕ್ರೇಗ್ ಯಂಗ್‌ಗೆ ವಿಕೆಟ್ ನೀಡಿದರು. ತಿಲಕ್ ವರ್ಮಾ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾದರು. 16 ಎಸೆತದಲ್ಲಿ 19 ರನ್ ಗಳಿಸಿ ಗಾಯಕ್ವಾಡ್ ಔಟಾಗದೆ ಉಳಿದರು.
ಆರಂಭಿಕ ಆಘಾತ: 327 ದಿನಗಳ ಬಳಿಕ ಕ್ರಿಕೆಟ್‌ಗೆ ಮರಳಿದ ಜಸ್‌ಪ್ರೀತ್ ಬೂಮ್ರಾ ಮೊದಲ ಓವರ್‌ನಲ್ಲೇ 2 ವಿಕೆಟ್ ಕಬಳಿಸಿದರು. ರವಿ ಬಿಷ್ಣೋಯ್ ಹಾಗೂ ಪ್ರಸಿದ್ಧ್ ಕೃಷ್ಣರಿಂದಲೂ ಉತ್ತಮ ಬೌಲಿಂಗ್ ಪ್ರದರ್ಶನ ಮೂಡಿಬಂತು. ಪವರ್-ಪ್ಲೇನಲ್ಲೇ 4 ವಿಕೆಟ್ ಕಳೆದುಕೊಂಡ ಐರ್ಲೆಂಡ್, ಚೇತರಿಕೆ ಕಾಣುವ ಲಕ್ಷಣಗಳಿರಲಿಲ್ಲ. 59 ರನ್‌ಗೆ 6 ವಿಕೆಟ್ ಪತನಗೊಂಡಾಗ ತಂಡ 100 ರನ್ ತಲುಪುವುದೂ ಕಷ್ಟ ಎನಿಸಿತ್ತು. 13ನೇ ಓವರಲ್ಲಿ ಐರ್ಲೆಂಡ್ ಮೊದಲ ಸಿಕ್ಸರ್ ದಾಖಲಿಸಿತು.
India Vs Ireland T20: ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದ ಕನ್ನಡಿಗ!
ಮೆಕ್ಕಾರ್ಥಿ ಸ್ಫೋಟಕ ಆಟ: 15 ಓವರ್ ಮುಕ್ತಾಯಕ್ಕೆ ಐರ್ಲೆಂಡ್ 6 ವಿಕೆಟ್‌ಗೆ 86 ರನ್ ಗಳಿಸಿತ್ತು. ಆದರೆ ಕೊನೆಯ 5 ಓವರಲ್ಲಿ 53 ರನ್ ಚಚ್ಚಿ ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. 16ನೇ ಓವರಲ್ಲಿ ಬೂಮ್ರಾ 13 ರನ್ ನೀಡಿದರೆ, 17ನೇ ಓವರಲ್ಲಿ ಪ್ರಸಿದ್ಧ್ 15 ರನ್ ಬಿಟ್ಟುಕೊಟ್ಟರು. 20ನೇ ಓವರಲ್ಲಿ ಅರ್ಶ್‌ದೀಪ್ 22 ರನ್ ಚಚ್ಚಿಸಿಕೊಂಡರು. ಬ್ಯಾರಿ ಮೆಕ್ಕಾರ್ಥಿ 33 ಎಸೆತದಲ್ಲಿ 51 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಕರ್ಟಿಸ್ ಕ್ಯಾಂಫರ್ 39 ರನ್ ಕೊಡುಗೆ ನೀಡಿದರು.
ಸ್ಕೋರ್:
ಐರ್ಲೆಂಡ್ 20 ಓವರಲ್ಲಿ 139/7(ಮೆಕ್ಕಾರ್ಥಿ 51*, ಕ್ಯಾಂಫರ್ 39, ಬಿಷ್ಣೋಯ್ 2-23, ಬೂಮ್ರಾ 2-24, ಪ್ರಸಿದ್ಧ್ 2-32)
ಭಾರತ 6.5 ಓವರಲ್ಲಿ 47/2(ಯಶಸ್ವಿ 27, ಗಾಯಕ್ವಾಡ್ 19*, ಯಂಗ್ 2-2)
ಕ್ರಿಕೆಟ್‌ಗೆ ಬುಮ್ರಾ ಭರ್ಜರಿ ಕಮ್‌ಬ್ಯಾಕ್!
ಡಬ್ಲಿನ್: ಬೆನ್ನು ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸುಮಾರು 1 ವರ್ಷ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತದ ತಾರಾ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ, ಶುಕ್ರವಾರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದರು. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿದ ಬುಮ್ರಾ, ಬರೋಬ್ಬರಿ 327 ದಿನಗಳ ಬಳಿಕ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡರು.
ಈ ಸರಣಿಯಲ್ಲಿ ತಂಡ ಮುನ್ನಡೆಸುತ್ತಿರುವ ಬೂಮ್ರಾ, ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದರು. ತಾವೆಸೆದ ಮೊದಲ ಓವರ್‌ನಲ್ಲೇ 2 ವಿಕೆಟ್ ಕಬಳಿಸಿ ಅಭಿಮಾನಿಗಳಿಗೆ ಖುಷಿ ನೀಡಿದರು. ಶಸ್ತ್ರಚಿಕಿತ್ಸೆ ಬಳಿಕ ಬುಮ್ರಾ ಹಿಂದಿನ ತೀವ್ರತೆಯೊಂದಿಗೆ ಬೌಲ್ ಮಾಡಲು ಸಾಧ್ಯವೇ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಎಕ್ಸ್‌ಪ್ರೆಸ್ ವೇಗಿ ತಮ್ಮ ಎಂದಿನ ಶೈಲಿಯಲ್ಲೇ ಬೌಲ್ ಮಾಡಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದರು.
ಏಕದಿನ ವಿಶ್ವಕಪ್ನಲ್ಲಿ 4ನೇ ಕ್ರಮಾಂಕದಲ್ಲಿ ಆಡ್ತಾರಾ ವಿರಾಟ್ ಕೊಹ್ಲಿ ..? ರವಿಶಾಸ್ತ್ರಿ ಹೇಳಿದ್ದೇನು?
ಬುಮ್ರಾ ಅವರ ಮೊದಲ ಸ್ಪೆಲ್ ಪರಿಣಾಮಕಾರಿಯಾಗಿತ್ತು. ಐರ್ಲೆಂಡ್‌ನ ಅಗ್ರ ಕ್ರಮಾಂಕ, ಭಾರತದ ನಾಯಕನ ಎಸೆತಗಳನ್ನು ಎದುರಿಸಲು ಪರದಾಡಿತು. ಡೆತ್ ಓವರ್‌ಗಳಲ್ಲೂ ಉತ್ತಮ ಬೌಲಿಂಗ್ ನಿರ್ವಹಿಸಿದ ಬುಮ್ರಾ, 4 ಓವರಲ್ಲಿ ಕೇವಲ 24 ರನ್ ನೀಡಿ 2 ವಿಕೆಟ್ ಕಬಳಿಸಿದರು. 4 ಓವರ್‌ಗಳಲ್ಲಿ ಒಟ್ಟು 9 ಡಾಟ್ ಬಾಲ್‌ಗಳನ್ನು ಎಸೆದರು.
ನಾಯಕತ್ವದಲ್ಲೂ ಮಿಂಚು: ಬುಮ್ರಾ ನಾಯಕನಾಗಿಯೂ ಗಮನ ಸೆಳೆದರು. ಬೌಲರ್‌ಗಳ ನಿರ್ವಹಣೆಯಲ್ಲಿ ಅವರು ತೋರಿದ ಪ್ರಬುದ್ಧತೆಯಿಂದಾಗಿ ಅಪಾಯಕಾರಿ ಆಗಬಹುದಾಗಿದ್ದ ಆತಿಥೇಯ ತಂಡವನ್ನು ಭಾರತ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು.
ಭಾರತದ 11ನೇ ಟಿ20 ನಾಯಕ ಬುಮ್ರಾ
ಟಿ20 ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ 11ನೇ ನಾಯಕ ಎನ್ನುವ ಹಿರಿಮೆಗೆ ಬುಮ್ರಾ ಪಾತ್ರರಾಗಿದ್ದಾರೆ. ನಾಯಕತ್ವ ಪಡೆದ ಮೊದಲ ವೇಗದ ಬೌಲರ್ ಎನ್ನುವ ದಾಖಲೆಯನ್ನೂ ಬರೆದಿದ್ದಾರೆ. ಬುಮ್ರಾಗೂ ಮೊದಲು ವೀರೇಂದ್ರ ಸೆಹ್ವಾಗ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಸುರೇಶ್ ರೈನಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಕೆ.ಎಲ್.ರಾಹುಲ್, ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಿದ್ದಾರೆ.