ಇಂಗ್ಲೆಂಡ್ ಎದುರಿನ ಕೊನೆಯ 3 ಟೆಸ್ಟ್‌ಗೆ ಟೀಂ ಇಂಡಿಯಾ ಪ್ರಕಟ; ಕೊಹ್ಲಿ, ಅಯ್ಯರ್ ಔಟ್, RCB ಕ್ರಿಕೆಟಿಗನಿಗೆ ಜಾಕ್‌ಪಾಟ್

Published : Feb 10, 2024, 11:48 AM IST
ಇಂಗ್ಲೆಂಡ್ ಎದುರಿನ ಕೊನೆಯ 3 ಟೆಸ್ಟ್‌ಗೆ ಟೀಂ ಇಂಡಿಯಾ ಪ್ರಕಟ; ಕೊಹ್ಲಿ, ಅಯ್ಯರ್ ಔಟ್, RCB ಕ್ರಿಕೆಟಿಗನಿಗೆ ಜಾಕ್‌ಪಾಟ್

ಸಾರಾಂಶ

ವಿರಾಟ್ ಕೊಹ್ಲಿ ಆರಂಭದಲ್ಲಿ ಇಂಗ್ಲೆಂಡ್ ಎದುರಿನ ಮೊದಲೆರಡು ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ದಿಢೀರ್ ಎನ್ನುವಂತೆ ತಾವು ಮೊದಲೆರಡು ಟೆಸ್ಟ್‌ ಪಂದ್ಯಗಳಿಗೆ ಲಭ್ಯವಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದರು.

ಮುಂಬೈ(ಫೆ.10): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಮೂರು ಟೆಸ್ಟ್‌ ಪಂದ್ಯಗಳಿಗೆ ಬಿಸಿಸಿಐ ಆಯ್ಕೆ ಸಮಿತಿ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಹೊರಬಿದ್ದಿದ್ದಾರೆ. ವೈಯುಕ್ತಿಕ ಕಾರಣ ನೀಡಿ ಇಂಗ್ಲೆಂಡ್ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ, ಇದೀಗ ಇನ್ನುಳಿದ ಮೂರು ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ತವರಿನಲ್ಲಿ ನಡೆದ ಸಂಪೂರ್ಣ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ ಬದಲಿಗೆ ಆರ್‌ಸಿಬಿ ಕ್ರಿಕೆಟಿಗ ವೇಗಿ ಆಕಾಶ್ ದೀಪ್‌ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

"ಇನ್ನುಳಿದ ಮೂರು ಪಂದ್ಯಗಳಿಗೂ ವೈಯುಕ್ತಿಕ ಕಾರಣದಿಂದಾಗಿ ವಿರಾಟ್ ಕೊಹ್ಲಿ ಆಯ್ಕೆಗೆ ಅಲಭ್ಯರಾಗಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಮಂಡಳಿಯು ವಿರಾಟ್ ಕೊಹ್ಲಿಯವರ ಈ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತದೆ ಹಾಗೂ ಬೆಂಬಲಿಸುತ್ತದೆ" ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ವಿರಾಟ್ ಕೊಹ್ಲಿ ಆರಂಭದಲ್ಲಿ ಇಂಗ್ಲೆಂಡ್ ಎದುರಿನ ಮೊದಲೆರಡು ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ದಿಢೀರ್ ಎನ್ನುವಂತೆ ತಾವು ಮೊದಲೆರಡು ಟೆಸ್ಟ್‌ ಪಂದ್ಯಗಳಿಗೆ ಲಭ್ಯವಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಹೈದರಾಬಾದ್ ಹಾಗೂ ವೈಜಾಗ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳು ಕ್ರಮವಾಗಿ ರಾಜ್‌ಕೋಟ್, ರಾಂಚಿ ಹಾಗೂ ಧರ್ಮಶಾಲಾದಲ್ಲಿ ನಡೆಯಲಿವೆ.

Big Breaking: ಇಂಗ್ಲೆಂಡ್ ಎದುರಿನ ಸಂಪೂರ್ಣ ಟೆಸ್ಟ್‌ ಸರಣಿಯಿಂದ ಕಿಂಗ್ ಕೊಹ್ಲಿ ಔಟ್..!

ಶ್ರೇಯಸ್ ಅಯ್ಯರ್ ಔಟ್: ಬೆನ್ನು ಮತ್ತು ತೊಡೆ ನೋವಿನ ಕಾರಣದಿಂದ ಪ್ರಮುಖ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಕೊನೆ 3 ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಕಳೆದ ವರ್ಷವಷ್ಟೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರಿಗೆ ತೊಂದರೆ ಮರುಕಳಿಸುವ ಸಂಭವವಿದೆ. ಕಳೆದ 2 ಟೆಸ್ಟ್‌ ಪಂದ್ಯಗಳಲ್ಲಿ ಅವರಿಂದ ಅಷ್ಟೇನು ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ. 4 ಇನ್ನಿಂಗ್ಸ್‌ಗಳಲ್ಲಿ 35, 13, 27, 29 ರನ್‌ ಕಲೆಹಾಕಿದ್ದರು. ಇನ್ನು ಶ್ರೇಯಸ್ ಅಯ್ಯರ್ ಬದಲಿಗೆ ಬಿಹಾರ ಮೂಲದ ವೇಗಿ ಆಕಾಶ್‌ ದೀಪ್‌ಗೆ ಭಾರತ ತಂಡದಿಂದ ಬುಲಾವ್ ಬಂದಿದೆ. ಆಕಾಶ್ ದೀಪ್ ಇಂಗ್ಲೆಂಡ್ ಎ ವಿರುದ್ದ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು.

ಫಿಟ್ನೆಸ್ ಸಾಧಿಸಿದರಷ್ಟೇ ರಾಹುಲ್-ಜಡೇಜಾಗೆ ಸ್ಥಾನ: ಇನ್ನು ಇಂಗ್ಲೆಂಡ್ ಎದುರಿನ ಉಳಿದ ಟೆಸ್ಟ್ ಸರಣಿಗೆ ಕೆ ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾಗೆ ಸ್ಥಾನ ನೀಡಲಾಗಿದೆ. ಆದರೆ ಅವರು ಸಂಪೂರ್ಣ ಫಿಟ್ ಆದರೆ ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲು ಆಯ್ಕೆ ಸಮಿತಿ ತೀರ್ಮಾನಿಸಿದೆ. ಇನ್ನುಳಿದಂತೆ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡ ಕೂಡಿಕೊಂಡಿದ್ದ ರಜತ್ ಪಾಟೀದಾರ್ ಹಾಗೂ ಸರ್ಫರಾಜ್ ಖಾನ್ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

Ranji Trophy: ಕರ್ನಾಟಕ ತಂಡಕ್ಕೆ ದೇವದತ್ ಪಡಿಕ್ಕಲ್ ಶತಕದ ಬಲ

5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಉಭಯ ತಂಡಗಳು ತಲಾ 1-1ರ ಸಮಬಲ ಸಾಧಿಸಿವೆ. ಹೈದರಾಬಾದ್ ಟೆಸ್ಟ್ ಪಂದ್ಯವನ್ನು ಪ್ರವಾಸಿ ಇಂಗ್ಲೆಂಡ್ ತಂಡವು ಜಯಿಸಿದರೆ, ವೈಜಾಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಇಂಗ್ಲೆಂಡ್‌ಗೆ ತಿರುಗೇಟು ನೀಡಿತ್ತು. ಇದೀಗ ಮೂರನೇ ಟೆಸ್ಟ್ ಪಂದ್ಯವು ಫೆಬ್ರವರಿ 15ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದ್ದು, ಈ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಇಂಗ್ಲೆಂಡ್ ಎದುರಿನ ಕೊನೆಯ 3 ಪಂದ್ಯಕ್ಕೆ ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬುಮ್ರಾ(ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ಕೆ ಎಲ್ ರಾಹುಲ್*, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧೃವ್ ಜುರೆಲ್(ವಿಕೆಟ್ ಕೀಪರ್), ಕೆ ಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!
ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!