Big Breaking: ಇಂಗ್ಲೆಂಡ್ ಎದುರಿನ ಸಂಪೂರ್ಣ ಟೆಸ್ಟ್‌ ಸರಣಿಯಿಂದ ಕಿಂಗ್ ಕೊಹ್ಲಿ ಔಟ್..!

By Naveen Kodase  |  First Published Feb 10, 2024, 9:25 AM IST

ಇದೇ ಮೊದಲ ಬಾರಿಗೆ ತಮ್ಮ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ತವರಿನಲ್ಲಿ ನಡೆಯುತ್ತಿರುವ ಸಂಪೂರ್ಣ ಟೆಸ್ಟ್ ಸರಣಿಗೆ ಅಲಭ್ಯರಾಗಿರುವುದು. ಇನ್ನು ಟೆಸ್ಟ್ ಸರಣಿ ವಿಚಾರಕ್ಕೆ ಬಂದರೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಉಭಯ ತಂಡಗಳು ತಲಾ 1-1ರ ಸಮಬಲ ಸಾಧಿಸಿವೆ.


ಮುಂಬೈ(ಫೆ.10): ಭಾರತ ಹಾಗೂ ಇಂಗ್ಲೆಂಡ್ ಎದುರಿನ ಇನ್ನುಳಿದ ಮೂರು ಪಂದ್ಯಗಳಿಗೂ ತಾವು ಅಲಭ್ಯರಾಗಿರುವುದಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಿಸಿಸಿಐ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಬಿದ್ದಂತೆ ಆಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳು ಕ್ರಮವಾಗಿ ರಾಜ್‌ಕೋಟ್, ರಾಂಚಿ ಹಾಗೂ ಧರ್ಮಶಾಲಾದಲ್ಲಿ ನಡೆಯಲಿವೆ.

ಟೆಸ್ಟ್ ಸರಣಿಗೆ ತಮ್ಮ ಲಭ್ಯತೆ ಬಗ್ಗೆ ವಿರಾಟ್ ಕೊಹ್ಲಿ ಶುಕ್ರವಾರವಷ್ಟೇ ಬಿಸಿಸಿಐ ಆಯ್ಕೆ ಸಮಿತಿಗೆ ಆನ್‌ಲೈನ್ ಮೂಲಕ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ಮೊದಲು ಇಂಗ್ಲೆಂಡ್ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿಗೆ ಸ್ಥಾನ ನೀಡಲಾಗಿತ್ತು. ಆದರೆ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ದಿಢೀರ್ ಎನ್ನುವಂತೆ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು. ಈ ಬಗ್ಗೆ ಬಿಸಿಸಿಐ "ವಿರಾಟ್ ಕೊಹ್ಲಿ ಈಗಾಗಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೆಲೆಕ್ಟರ್ಸ್‌ ಹಾಗೂ ಮ್ಯಾನೇಜ್‌ಮೆಂಟ್ ಜತೆ ಸಮಾಲೋಚನೆ ನಡೆಸಿದ್ದಾರೆ. ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ಹೆಮ್ಮೆಯ ಸಂಗತಿಯಾಗಿದೆ. ಆದರೆ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಅನಿವಾರ್ಯವಾಗಿ ಹೊರಗುಳಿಯುವ ಸಂದರ್ಭ ಬಂದಿದೆ ಎಂದು ತಿಳಿಸಿದ್ದಾರೆಂದು ಬಿಸಿಸಿಐ ಮೀಡಿಯಾ ರಿಲೀಸ್‌ನಲ್ಲಿ ತಿಳಿಸಿತ್ತು

Latest Videos

undefined

"ಬಿಸಿಸಿಐ ವಿರಾಟ್ ಕೊಹ್ಲಿ ಕೈಗೊಂಡ ನಿರ್ಧಾರವನ್ನು ಗೌರವಿಸುತ್ತದೆ. ಇದೇ ಸಂದರ್ಭದಲ್ಲಿ ಬಿಸಿಸಿಐ ಮಾಧ್ಯಮದವರಿಗೆ ಹಾಗೂ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿಯ ಖಾಸಗಿತನಕ್ಕೆ ಧಕ್ಕೆ ನೀಡಬಾರದೆಂದು ಮನವಿ ಮಾಡಿಕೊಂಡಿದೆ" ಎಂದು ತಿಳಿಸಿತ್ತು. 

ಇದೇ ಮೊದಲ ಬಾರಿಗೆ ತಮ್ಮ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ತವರಿನಲ್ಲಿ ನಡೆಯುತ್ತಿರುವ ಸಂಪೂರ್ಣ ಟೆಸ್ಟ್ ಸರಣಿಗೆ ಅಲಭ್ಯರಾಗಿರುವುದು. ಇನ್ನು ಟೆಸ್ಟ್ ಸರಣಿ ವಿಚಾರಕ್ಕೆ ಬಂದರೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಉಭಯ ತಂಡಗಳು ತಲಾ 1-1ರ ಸಮಬಲ ಸಾಧಿಸಿವೆ. ಹೈದರಾಬಾದ್ ಟೆಸ್ಟ್ ಪಂದ್ಯವನ್ನು ಪ್ರವಾಸಿ ಇಂಗ್ಲೆಂಡ್ ತಂಡವು ಜಯಿಸಿದರೆ, ವೈಜಾಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಇಂಗ್ಲೆಂಡ್‌ಗೆ ತಿರುಗೇಟು ನೀಡಿತ್ತು. ಇನ್ನುಳಿದ ಮೂರು ಪಂದ್ಯಗಳಲ್ಲೂ ಟೀಂ ಇಂಡಿಯಾ ಇಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.
 

click me!