
ಲಂಡನ್: ನಾವು ತ್ಯಾಗ ಮಾಡಿದರೆ, ಹೋರಾಟ ಬಿಡದಿದ್ದರೆ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಸ್ಮರಣೀಯಗೊಳಿಸಬಹುದು ಎಂದು ಭಾರತದ ಕೋಚ್ ಗೌತಮ್ ಗಂಭೀರ್, ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಗುರುವಾರ ಅಭ್ಯಾಸ ಶಿಬಿರ ವೇಳೆ ಆಟಗಾರರ ಜೊತೆ ಮಾತನಾಡಿದ ಗಂಭೀರ್, 'ಈ ಸರಣಿ ಯನ್ನು ನಾವು 2 ವಿಧದಲ್ಲಿ ನೋಡಬಹುದು. ಅತ್ಯಂತ ಅನುಭವಿಗಳಾದ ಮೂವರು ಆಟಗಾರರಿಲ್ಲದೆ ನಾವು ಈ ಸರಣಿ ಆಡುತ್ತಿದ್ದೇವೆ ಮತ್ತು ದೇಶಕ್ಕಾಗಿ ಏನಾದರೂ ಸಾಧಿಸಲು ನಮಗೆ ಸಿಕ್ಕ ಉತ್ತಮ ಅವಕಾಶ ಇದು. ಈ ತಂಡವನ್ನು ನೋಡುವಾಗ ಬದ್ಧತೆ, ಉದ್ವೇಗ ಕಂಡುಬರುತ್ತದೆ. ನಾವು ಏನಾದರೂ ತ್ಯಾಗ ಮಾಡಲು ಸಿದ್ದವಿದ್ದರೆ, ನಮ್ಮ ಆರಾಮದಾಯಕ ಬದುಕಿನಿಂದ ಆಚೆ ಬಂದರೆ, ಹೋರಾಡಿದರೆ ಈ ಸರಣಿ ಸ್ಮರಣೀಯ ಗೊಳಿಸಬಹುದು. ಪ್ರತಿ ದಿನ ಅಲ್ಲ, ಪ್ರತಿ ಅವಧಿ, ಪ್ರತಿ ಓವರ್, ಪ್ರತಿ ಎಸೆತದಲ್ಲೂ ನಾವು ಹೋರಾಡಬೇಕು ಎಂದು ಗಂಭೀರ್ ಹೇಳಿದ್ದಾರೆ.
ಟೀಂ ಇಂಡಿಯಾ ದಿಗ್ಗಜ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯ ಮಧ್ಯದಲ್ಲಿಯೇ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇನ್ನು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅನುಭವಿ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಹೀಗಾಗಿ ಮೂವರು ದಿಗ್ಗಜ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ.
ಭಾರತ vs ಭಾರತ ಎ ತಂಡ ನಡುವೆ ಇಂದಿನಿಂದ 4 ದಿನದ ಅಭ್ಯಾಸ ಪಂದ್ಯ
ಬೆಕೆನ್‌ಹ್ಯಾಮ್ (ಇಂಗ್ಲೆಂಡ್): ಇಂಗ್ಲೆಂಡ್ ಟೆಸ್ಟ್ ಸರಣಿಗೆ ಕಠಿಣ ಸಿದ್ಧತೆ ನಡೆಸುತ್ತಿರುವ ಭಾರತ ತಂಡ ಶುಕ್ರವಾರದಿಂದ ಭಾರತ 'ಎ' ತಂಡದ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇದು ಜೂ.20ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ಸರಣಿಗೆ ಮುನ್ನ ಭಾರತದ ಏಕೈಕ ಅಭ್ಯಾಸ ಪಂದ್ಯ.
ಶುಭಮನ್ ಗಿಲ್ ನಾಯಕತ್ವದ ಭಾರತ ಕೆಲ ದಿನಗಳಿಂದ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದೆ. ಆದರೆ ಮಹತ್ವದ ಸರಣಿಗೂ ಮುನ್ನ ತಂಡವನ್ನು ಸಜ್ಜುಗೊಳಿಸಲು ಈ ಅಭ್ಯಾಸ ಪಂದ್ಯ ನೆರವಾಗಲಿದೆ. ವೇಗಿಗಳು, ಸ್ಪಿನ್ನರ್‌ಗಳ ಆಯ್ಕೆ, ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಎದುರಾಗಿರುವ ಗೊಂದಲಗಳನ್ನು ತಂಡ ನಿವಾರಿಸಬೇಕಿದೆ. ಅಲ್ಲದೆ, ನಾಯಕತ್ವದ ಹೊಣೆಗಾರಿಕೆ ಪಡೆದಿರುವ ಶುಭಮನ್ ಗಿಲ್ ಸರಣಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಕಾತರದಲ್ಲಿದ್ದಾರೆ.
ಪಂದ್ಯ : ಮಧ್ಯಾಹ್ನ 3.30ಕ್ಕೆ :
ಕರುಣ್ ಕಮ್‌ಬ್ಯಾಕ್ ನಮ್ಮಂಥ ಸ್ನೇಹಿತರಿಗೆ ವಿಶೇಷ ಕ್ಷಣ: ರಾಹುಲ್
ಲಂಡನ್: 8 ವರ್ಷಗಳ ಬಳಿಕ ಭಾರತ ಪರ ಟೆಸ್ಟ್ ಆಡಲು ಸಜ್ಜಾಗಿರುವ ಸಹ ಆಟಗಾರ ಕರುಣ್ ನಾಯರ್ ಬಗ್ಗೆ ಕೆ.ಎಲ್. ರಾಹುಲ್ ಮಾತನಾಡಿದ್ದು, ಇದು ವಿಶೇಷ ಕ್ಷಣ ಎಂದಿದ್ದಾರೆ.
ಈ ಬಗ್ಗೆ ಬಿಸಿಸಿಐ ವಿಶೇಷ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ. ಅದರಲ್ಲಿ ಮಾತನಾಡಿರುವ ರಾಹುಲ್, 'ಕರುಣ್ ನನಗೆ ಬಹಳ ಸಮಯದಿಂದ ಗೊತ್ತು. ಇಂಗ್ಲೆಂಡ್ ನಲ್ಲಿ ಆಡುತ್ತಾ ಕಳೆದ ಒಂದು ತಿಂಗಳು, ಏಕಾಂಗಿಯಾಗಿದ್ದ ಕ್ಷಣ ಹಾಗೂ ಭಾರತ ತಂಡಕ್ಕೆ ಮರಳಲು ಸಾಧ್ಯವಾದದ್ದು ಎಲ್ಲವೂ ವಿಶೇಷ. ಕರುಣ್ ಕಮ್‌ಬ್ಯಾಕ್, ಅವರ ಪ್ರಯಾಣ ನೋಡಿದ ನಮ್ಮಂಥಾ ಸ್ನೇಹಿತರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಇದು ವಿಶೇಷ ಕ್ಷಣ' ಎಂದು ಹೇಳಿದ್ದಾರೆ. ಕರುಣ್ ಕೊನೆ ಬಾರಿ 2017ರಲ್ಲಿ ಟೆಸ್ಟ್ ಆಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.