
ಲಂಡನ್: 2023-25ರ ಐಸಿಸಿ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಶುರುವಾಗಿ ಕೇವಲ 2 ದಿನಗಳಲ್ಲೇ ರೋಚಕ ಘಟ್ಟ ತಲುಪಿದೆ. ವೇಗಿಗಳ ಪರಾಕ್ರಮ, ಬ್ಯಾಟರ್‌ಗಳ ಪರದಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಟ್ರೋಫಿ ಗೆಲುವಿಗಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ರಣರೋಚಕ ಪೈಪೋಟಿ ನಡೆಸುತ್ತಿವೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ದಿನವೇ 212 ರನ್‌ಗೆ ಆಲೌಟಾಗಿದ್ದರೆ, ದಕ್ಷಿಣ ಆಫ್ರಿಕಾ ಗುರುವಾರ 138 ರನ್‌ಗೆ ಗಂಟುಮೂಟೆ ಕಟ್ಟಿ 74 ರನ್ ಗಳ ಹಿನ್ನಡೆ ಅನುಭವಿಸಿತು. 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕೂಡಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ದಿನದಂತ್ಯಕ್ಕೆ 8 ವಿಕೆಟ್‌ಗೆ 144 ರನ್ ಗಳಿಸಿದೆ. ತಂಡ ಒಟ್ಟು 218 ರನ್ ಮುನ್ನಡೆಯಲ್ಲಿದೆ.
ಹೋರಾಡಿ ಕುಸಿದ ಆಫ್ರಿಕಾ: ಮೊದಲ ದಿನದಂತ್ಯಕ್ಕೆ ದ.ಆಫ್ರಿಕಾ 4 ವಿಕೆಟ್‌ಗೆ 43 ರನ್ ಗಳಿಸಿತ್ತು. 2ನೇ ದಿನ ನಾಯಕ ತೆಂಬಾ ಬವುಮಾ ಹಾಗೂ ಬೆಡಿಂಗ್‌ಹ್ಯಾಮ್ ಆಸರೆಯಾದರು. ಈ ಜೋಡಿ 5ನೇ ವಿಕೆಟ್‌ಗೆ 64 ರನ್ ಸೇರಿಸಿತು. 36 ರನ್ ಗಳಿಸಿದ್ದ ಬವುಮಾ, ತಂಡದ ಮೊತ್ತ 94 ಆಗಿದ್ದಾಗ ನಿರ್ಗಮಿಸಿದರು. ಕೈಲ್ ವೆರೈನ್ (13) ಔಟಾದಾಗ ತಂಡದ ಮೊತ್ತ 126. ಆ ಬಳಿಕ ದ.ಆಫ್ರಿಕಾ ಇನ್ನಿಂಗ್ಸ್ ಹೆಚ್ಚು ಹೊತ್ತು ನೆಲೆನಿಲ್ಲಲಿಲ್ಲ, ಬೆಡಿಂಗ್‌ಹ್ಯಾಮ್ 45 ರನ್‌ಗೆ ವಿಕೆಟ್ ಒಪ್ಪಿಸಿದರು. ತಂಡದ ಕೊನೆ 5 ವಿಕೆಟ್ 12 ರನ್ ಅಂತರದಲ್ಲಿ ಉರುಳಿತು. ಕಮಿನ್ 6 ವಿಕೆಟ್ ಕಬಳಿಸಿದರು.
ಆಸೀಸ್‌ಗೆ ಆಘಾತ: 2ನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಪೆವಿಲಿಯನ್ ಪರೇಡ್ ನಡೆಸಿತು. ಲಬುಶೇನ್ 22 ರನ್ ಗಳಿಸಿದರೂ, ಉಸ್ಮಾನ್ ಖವಾಜ(6), ಗ್ರೀನ್ (0), ಟ್ರಾವಿಸ್ ಹೆಡ್(9), ಸ್ಟೀವ್ ಸ್ಮಿತ್ (13), ವೆಬ್ ಸ್ಟರ್ (9) ಮಿಂಚಲಿಲ್ಲ. 73ಕ್ಕೆ 7 ವಿಕೆಟ್ ಕಳೆದುಕೊಂಡ ತಂಡಕ್ಕೆ ಆಸರೆಯಾಗಿದ್ದು ಅಲೆಕ್ಸ್ ಕೇರಿ(43). ಸದ್ಯ ಮಿಚೆಲ್ ಸ್ಟಾರ್ಕ್(ಔಟಾಗದೆ 16), ಲಯನ್ (01) 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸ್ಕೋರ್: ಆಸ್ಟ್ರೇಲಿಯಾ 212/10 ಮತ್ತು 144/8 (2ನೇ ದಿನದಂತ್ಯಕ್ಕೆ) (ಕೇರಿ 43, ಎನ್‌ಗಿಡಿ 3-35, ರಬಾಡ 3-44), ದ.ಆಫ್ರಿಕಾ 138/10 (ಬೆಡಿಂಗ್ ಹ್ಯಾಮ್ 45, ಬವುಮಾ 36, ಕಮಿನ್ಸ್ 6-28)
ಬಿಶನ್ ಸಿಂಗ್ ದಾಖಲೆ ಮುರಿದ ವೇಗಿ ಕಮಿನ್ಸ್
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 5+ ವಿಕೆಟ್ ಕಿತ್ತ ನಾಯಕರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 3ನೇ ಸ್ಥಾನಕ್ಕೇರಿದ್ದಾರೆ. ಅವರು 9 ಬಾರಿ (34 ಟೆಸ್ಟ್) ಈ ಸಾಧನೆ ಮಾಡಿದ್ದು, ಭಾರತದ ನಾಯಕರಾಗಿದ್ದ ಬಿಶನ್ ಸಿಂಗ್ ಬೇಡಿ(9 ಬಾರಿ) ಅವರನ್ನು ಹಿಂದಿಕ್ಕಿದರು. ಪಾಕಿಸ್ತಾನದ ಇಮ್ರಾನ್ ಖಾನ್ 12, ಆಸ್ಟ್ರೇಲಿಯಾದ ರಿಚೀ ಬೆನೌಡ್ 9 ಬಾರಿ ಈ ಸಾಧನೆ ಮಾಡಿದ್ದಾರೆ.
300 ವಿಕೆಟ್ ಕಿತ್ತ 8ನೇ ಆಸ್ಟ್ರೇಲಿಯಾ ಬೌಲರ್
ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಪೂರ್ಣ ಗೊಳಿಸಿದರು. ಅವರು ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 8ನೇ ಬೌಲರ್ ಎನಿಸಿಕೊಂಡರು. ಈ ಮೊದಲು ಸ್ಪಿನ್ ದಿಗ್ಗಜ ಶೇನ್ ವಾರ್ನ್ 708, ಗ್ಲೆನ್ ಮೆಗ್ರಾಥ್ 563, ನೇಥನ್ ಲಯನ್ 553, ಮಿಚೆಲ್ ಸ್ಟಾರ್ಕ್ 384, ಡೆನಿಸ್ ಲಿಲ್ಲಿ 355, ಮಿಚೆಲ್ ಜಾನ್ಸನ್ 313, ಬ್ರೆಟ್ ಲೀ 310 ವಿಕೆಟ್ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.