ಭಾರತ-ಇಂಗ್ಲೆಂಡ್ ಏಕದಿನ: ಕ್ಲೀನ್‌ ಸ್ವೀಪ್‌ ಕನಸು ಭಗ್ನ !

By Web DeskFirst Published Mar 1, 2019, 9:18 AM IST
Highlights

ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನ ಭಾರತ ಮಹಿಳಾ ತಂಡ 2-1 ಅಂತರದಿಂದ ಕೈವಶ ಮಾಡಿದೆ.  ಅಂತಿಮ ಪಂದ್ಯದಲ್ಲಿ ಸೋಲು ಅನುಭವಿಸೋ ಮೂಲಕ ಭಾರತ ಕ್ಲೀನ್ ಸ್ವೀಪ್ ಕನಸು ಕೈಗೂಡಲಿಲ್ಲ.
 

ಮುಂಬೈ(ಮಾ.01): ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಭಾರತ ಮಹಿಳಾ ಕ್ರಿಕೆಟ್‌ ತಂಡದ ಕನಸು ಈಡೇರಲಿಲ್ಲ. ಗುರುವಾರ ಇಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಭಾರತ, 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: ಮ್ಯಾಕ್ಸ್‌ವೆಲ್ ಶತಕ- ಆಸಿಸ್ ವಿರುದ್ಧದ ಟಿ20 ಸರಣಿ ಸೋತ ಭಾರತ!

ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 49 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತು. ಆದರೆ ಡೇನಿಯಲ್‌ ವ್ಯಾಟ್‌ (82 ಎಸೆತಗಳಲ್ಲಿ 56 ರನ್‌) ಎರಡು ಆಕರ್ಷಕ ಜೊತೆಯಾಟಗಳನ್ನಾಡಿ ತಂಡಕ್ಕೆ ನೆರವಾದರು. ಮೊದಲು ನಾಯಕಿ ಹೀಥರ್‌ ನೈಟ್‌ (63 ಎಸೆತಗಳಲ್ಲಿ 47 ರನ್‌) ಜತೆ 6ನೇ ವಿಕೆಟ್‌ಗೆ 69 ರನ್‌ ಸೇರಿಸಿದ ವ್ಯಾಟ್‌, 7ನೇ ವಿಕೆಟ್‌ಗೆ ಜಾರ್ಜಿಯಾ ಎಲ್ವಿಸ್‌ (53 ಎಸೆತಗಳಲ್ಲಿ ಅಜೇಯ 33 ರನ್‌) ಜತೆ 56 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇಂಗ್ಲೆಂಡ್‌ ಇನ್ನೂ 7 ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ 2 ಅಂಕ ಗಳಿಸಿದ ಇಂಗ್ಲೆಂಡ್‌, ಐಸಿಸಿ ಏಕದಿನ ವಿಶ್ವ ಚಾಂಪಿಯನ್‌ಶಿಪ್‌ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, 2021ರ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಅಗ್ರ 4ರಲ್ಲಿ ಸ್ಥಾನ ಪಡೆಯಬೇಕಿದೆ.

ಇದನ್ನೂ ಓದಿ: ಭದ್ರತಾ ಸಿಬ್ಬಂದಿ ಹುಟ್ಟು ಹಬ್ಬ ಆಚರಿಸಿದ ವಿರಾಟ್ ಕೊಹ್ಲಿ!

ಸ್ಮೃತಿ, ಪೂನಮ್‌ ಅರ್ಧಶತಕ: ಮೊದಲು ಬ್ಯಾಟ್‌ ಮಾಡಿದ ಭಾರತ, ಇನ್ನಿಂಗ್ಸ್‌ನ 2ನೇ ಎಸೆತದಲ್ಲೇ ಜೆಮಿಮಾ ರೋಡ್ರಿಗಸ್‌ ವಿಕೆಟ್‌ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಜತೆಯಾದ ಸ್ಮೃತಿ ಮಂಧನಾ (66) ಹಾಗೂ ಪೂನಮ್‌ ರಾವತ್‌ (56) 129 ರನ್‌ ಜೊತೆಯಾಟವಾಡಿದರು.

129ಕ್ಕೆ 1ರಿಂದ ಭಾರತ ದಿಢೀರ್‌ ಕುಸಿತ ಕಂಡು 150 ರನ್‌ಗೆ 7 ವಿಕೆಟ್‌ ಕಳೆದುಕೊಂಡಿತು. ಶಿಖಾ ಪಾಂಡೆ (26) ಹಾಗೂ ದೀಪ್ತಿ ಶರ್ಮಾ (27) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಇಂಗ್ಲೆಂಡ್‌ ಪರ ಕ್ಯಾಥರೀನ್‌ ಬ್ರಂಟ್‌ 5 ವಿಕೆಟ್‌ ಕಿತ್ತರು.

ಸ್ಕೋರ್‌: ಭಾರತ 205/8(ಸ್ಮೃತಿ 66, ಪೂನಮ್‌ 56, ಬ್ರಂಟ್‌ 5-28), ಇಂಗ್ಲೆಂಡ್‌ 208/8 (ವ್ಯಾಟ್‌ 56, ನೈಟ್‌ 47, ಜೂಲನ್‌ 3-41).

ಸರಣಿ ಶ್ರೇಷ್ಠ: ಸ್ಮೃತಿ ಮಂಧನಾ.

click me!