ಟೆಸ್ಟ್ ನಂ.1 ಶ್ರೇಯಾಂಕಿತ ಟೀಂ ಇಂಡಿಯಾ ತವರಿನಲ್ಲಿ ಮತ್ತೊಂದು ಟೆಸ್ಟ್ ಸರಣಿ ಗೆಲುವಿನ ಕನವರಿಕೆಯಲ್ಲಿದೆ. ಈಗಾಗಲೇ 11 ಟೆಸ್ಟ್ ಸರಣಿ ಗೆದ್ದು ಬೀಗಿರುವ ಟೀಂ ಇಂಡಿಯಾ ಇದೀಗ ಬಾಂಗ್ಲಾ ವಿರುದ್ಧ ಗೆದ್ದು ಬೀಗುವ ನಿರೀಕ್ಷೆಯಲ್ಲಿದೆ. ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಇಂದೋರ್[ನ.14]:: ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌ಗೆ ಭಾರತೀಯ ಕ್ರಿಕೆಟಿಗರು, ಅಭಿಮಾನಿಗಳು ಕಾಯುತ್ತಿದ್ದು, ಪಿಂಕ್ ಬಾಲ್ ಪಂದ್ಯವನ್ನು ಒಳಗೊಂಡ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಗುರುವಾರ ಚಾಲನೆ ಸಿಕ್ಕಿದೆ. ಮೊದಲ ಟೆಸ್ಟ್ ಇಲ್ಲಿ ಆರಂಭವಾಗಿದ್ದು, ಸಾಂಪ್ರದಾಯಿಕ ಕೆಂಪು ಚೆಂಡನ್ನು ಬಳಕೆ ಮಾಡಲಾಗುತ್ತದೆ. ನ.22ರಿಂದ ಕೋಲ್ಕತಾದಲ್ಲಿ ನಡೆಯಲಿರುವ 2ನೇ ಟೆಸ್ಟ್‌ನಲ್ಲಿ ಪಿಂಕ್ ಬಾಲ್ ಬಳಕೆಯಾಗಲಿದೆ. ಪಿಂಕ್ ಬಾಲ್ ಪಂದ್ಯಕ್ಕಾಗಿ ನಿರೀಕ್ಷೆ ಮಾಡುತ್ತಿರುವ ವಿರಾಟ್ ಕೊಹ್ಲಿ ಪಡೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವ್ಯಾಪ್ತಿಗೆ ಸೇರುವ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಗುರಿಯೂ ಇದೆ. ಈಗಾಗಲೇ 240 ಅಂಕಗಳೊಂದಿಗೆ ವಿಶ್ವ ಚಾಂಪಿಯನ್ಶಿಪ್ ವೇಳಾಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ಈ ಸರಣಿಯನ್ನೂ ತನ್ನ ತೆಕ್ಕೆಗೆ ಹಾಕಿಕೊಂಡು 120 ಅಂಕಗಳನ್ನು ಗಳಿಸುವ ಉತ್ಸಾಹದಲ್ಲಿದೆ.
ಟಿ20 ಸರಣಿಯಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದರೂ, ಪುಟಿದೆದ್ದ ಭಾರತ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಟೆಸ್ಟ್ ಮಾದರಿಯಲ್ಲಿ ಭಾರತ ಎಲ್ಲರಿಗಿಂತಲೂ ಬಲಿಷ್ಠ. ಸದೃಢ ತಂಡವನ್ನು ಹೊಂದಿರುವ ಭಾರತ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.
ಮೊದಲ ಟೆಸ್ಟ್ ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ; ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ
ಭಾರತದ ಅನುಭವಿಗಳು ಮುಂದೆ ಬಾಂಗ್ಲಾ ಹುಲಿಗಳು ದುರ್ಬಲರಾಗಿ ಕಾಣುತ್ತಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಅಬ್ಬರಿಸಿದ್ದ ಆರಂಭಿಕರಾದ ರೋಹಿತ್ ಶರ್ಮಾ, ಮಯಾಂಕ್ ಅಗರ್‌ವಾಲ್ ಮತ್ತೊಮ್ಮೆ ಮಿಂಚಲು ಸಿದ್ಧರಾಗಿದ್ದಾರೆ. ಇಬ್ಬರೂ ಆಕರ್ಷಕ ಲಯದಲ್ಲಿದ್ದಾರೆ. ಮಧ್ಯಮ ಕ್ರಮಾಂಕ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆಯನ್ನು ರನ್ ಗಳಿಸದಂತೆ ನಿಯಂತ್ರಿಸುವುದು ಬಾಂಗ್ಲಾ ಬೌಲರ್‌ಗಳ ಮುಂದಿರುವ ಅತಿದೊಡ್ಡ ಸವಾಲು. ಸದ್ಯ ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್ ಎನಿಸಿಕೊಳ್ಳುತ್ತಿರುವ ವೃದ್ಧಿಮಾನ್ ಸಾಹ, ಆಲ್ರೌಂಡರ್‌ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕೆಳ ಕ್ರಮಾಂಕದಲ್ಲಿ ಉಪಯುಕ್ತ ರನ್ ಕೊಡುಗೆ ನೀಡಬಲ್ಲರು. ಜತೆಗೆ ಅಶ್ವಿನ್ ಹಾಗೂ ಜಡೇಜಾ, ತವರಿನಲ್ಲಿ ಅತ್ಯಂತ ಪರಿಣಾಮಕಾರಿ ಸ್ಪಿನ್ನರ್ಗಳೆನಿಸಿದ್ದು, ಕಳೆದ ಕೆಲ ವರ್ಷಗಳಲ್ಲಿ ರಾಶಿ ರಾಶಿ ವಿಕೆಟ್ ಕಿತ್ತಿದ್ದಾರೆ. ಬಾಂಗ್ಲಾ ಬ್ಯಾಟ್ಸ್‌ಮನ್‌ಗಳಿಗೆ ಭಾರತದ ಸ್ಪಿನ್ ಜೋಡಿ ಕಬ್ಬಿಣದ ಕಡಲೆಯಾಗಿ ಪರಿಣಮಿಸಲಿದೆ.
ಭಾರತ VS ಬಾಂಗ್ಲಾದೇಶ ಮೊದಲ ಟೆಸ್ಟ್; ಇಲ್ಲಿದೆ ಸಂಭವನೀಯ ತಂಡ!
ಜಸ್‌ಪ್ರೀತ್ ಬುಮ್ರಾ ಗಾಯದಿಂದ ಚೇತರಿಸಿಕೊಳ್ಳದ ಕಾರಣ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲೂ ಬುಮ್ರಾ ಅನುಪಸ್ಥಿತಿ ತಂಡವನ್ನು ದೊಡ್ಡ ಮಟ್ಟದಲ್ಲಿ ಕಾಡಿರಲಿಲ್ಲ. ಇಶಾಂತ್ ಶರ್ಮಾ, ಮೊಹಮದ್ ಶಮಿ ಹಾಗೂ ಉಮೇಶ್ ಯಾದವ್, ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕನಸಿನಲ್ಲೂ ಕಾಡಬಲ್ಲರು.
ಬಾಂಗ್ಲಾಕ್ಕೆ ಅನುಭವದ ಕೊರತೆ!
ಪ್ರವಾಸಿ ಬಾಂಗ್ಲಾದೇಶ ಇಬ್ಬರು ಅನುಭವಿ ಹಾಗೂ ತಾರಾ ಆಟಗಾರರಾದ ತಮೀಮ್ ಇಕ್ಬಾಲ್ ಹಾಗೂ ಶಕೀಬ್ ಅಲ್ ಹಸನ್ ಅನುಪಸ್ಥಿತಿ ಬಲವಾಗಿ ಕಾಡಲಿದೆ. ಹೊಸದಾಗಿ ನಾಯಕನಾಗಿರುವ ಮೊಮಿನುಲ್ ಹಕ್‌ಗೆ ಆಯ್ಕೆ ಗೊಂದಲ ಎದುರಾಗಲಿದೆ. ಮುಷ್ಫಿಕುರ್ ರಹೀಂ, ಮಹಮದುಲ್ಲಾ ತಂಡದ ಬ್ಯಾಟಿಂಗ್ ಬಲ ಎನಿಸಿದ್ದಾರೆ. ಆರಂಭಿಕನ ಸ್ಥಾನಕ್ಕೆ ಯುವ ಆಟಗಾರ ಸೈಫ್ ಹಸನ್ ಇಲ್ಲವೇ ಇಮ್ರುಲ್ ಕಯಾಸ್, ವೇಗಿಗಳಾದ ಮುಸ್ತಾಫಿಜುರ್ ರಹಮಾನ್ ಇಲ್ಲವೇ ಇಬಾದತ್ ಹುಸೇನ್ ನಡುವೆ ಸ್ಪರ್ಧೆ ಇದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ, ಆಫ್ಘಾನಿಸ್ತಾನ ವಿರುದ್ಧ ತನ್ನ ತವರಿನಲ್ಲಿ ಟೆಸ್ಟ್ ಪಂದ್ಯ ಸೋತಿತ್ತು ಎನ್ನುವುದನ್ನು ಮರೆಯುವಂತಿಲ್ಲ.
ಬಾಂಗ್ಲಾದೇಶಕ್ಕೆ ಹೋಲಿಸಿದರೆ ಭಾರತ ಎಲ್ಲಾ ಮೂರು ವಿಭಾಗಗಳಲ್ಲಿ ಸಮತೋಲನ ಹೊಂದಿದ್ದು, ಮೂರುವರೆ ನಾಲ್ಕು ದಿನಗಳೊಳಗೆ ಪಂದ್ಯ ಮುಕ್ತಾಯಗೊಂಡರೆ ಅಚ್ಚರಿಯಿಲ್ಲ.
ಭಯ ಹುಟ್ಟಿಸುತ್ತೆ ಭಾರತದ ದಾಖಲೆ!
ಭಾರತದ ದಾಖಲೆಯನ್ನು ನೋಡಿದರೆ ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟದೆ ಇರುವುದಿಲ್ಲ. 2013ರಿಂದ ತವರಿನಲ್ಲಿ ಭಾರತ ತಂಡ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು 26ರಲ್ಲಿ ಗೆಲುವು ಸಾಧಿಸಿದೆ. 5 ಡ್ರಾ ಹಾಗೂ ಕೇವಲ 1ರಲ್ಲಿ ಸೋಲು ಕಂಡಿದೆ. ಕಳೆದ 5 ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿದೆ. ಅನುಭವ ಹಾಗೂ ಲಯ ಎರಡರಲ್ಲೂ ಭಾರತೀಯರು ಮುಂದಿದ್ದಾರೆ. ಇತಿಹಾಸವೂ ಭಾರತದ ಪರವೇ ಇದೆ.