ಚಿನ್ನಸ್ವಾಮಿಯಲ್ಲಿಂದು ಇಂಡೋ-ಆಸೀಸ್ ಕ್ಲೈಮ್ಯಾಕ್ಸ್‌ ಕದನ!

By Kannadaprabha NewsFirst Published Jan 19, 2020, 10:45 AM IST
Highlights

ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಿದೆ. ಈ ಪಂದ್ಯವನ್ನು ಗೆಲ್ಲುವುದರ ಮೂಲಕ ಕಳೆದ ವರ್ಷದ ಸರಣಿ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ವಿರಾಟ್ ಪಡೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಬೆಂಗಳೂರು(ಜ.19): ವಿಶ್ವ ಕ್ರಿಕೆಟ್‌ನ ಎರಡು ಬಲಿಷ್ಠ ತಂಡಗಳಾಗಿರುವ ಭಾರತ ಹಾಗೂ ಆಸ್ಪ್ರೇಲಿಯಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ರೋಚಕ ಅಂತ್ಯಕ್ಕೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆ ಸಿದ್ಧವಾಗಿದೆ. ಮುಂಬೈನಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕಾಂಗರೂಗಳು ಗೆದ್ದರೆ, ರಾಜ್‌ಕೋಟ್‌ನಲ್ಲಿ ಭಾರತ ಪರಾಕ್ರಮ ಮೆರೆದಿತ್ತು. ಇದರೊಂದಿಗೆ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು, ಭಾನುವಾರ ನಡೆಯಲಿರುವ 3ನೇ ಹಾಗೂ ಅಂತಿಮ ಪಂದ್ಯ ಫೈನಲ್‌ ರೂಪ ಪಡೆದಿದೆ.

ಬ್ಯಾನರ್ to ಹೆಡ್‌ಫೋನ್: INDvAUS ಬೆಂಗಳೂರು ಪಂದ್ಯಕ್ಕೆ ಈ ವಸ್ತುಗಳು ಬ್ಯಾನ್!

ಮೊದಲ ಪಂದ್ಯದಲ್ಲಿ ಆಸೀಸ್‌ ಆಟಗಾರರು ಸಂಪೂರ್ಣ ಮೇಲುಗೈ ಸಾಧಿಸಿದ್ದರೂ 2ನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಪಡೆ ಕೊಟ್ಟ ತಿರುಗೇಟು ಕೂಡ ಅಷ್ಟೇ ಪ್ರಬಲವಾಗಿತ್ತು. ಜತೆಗೆ ಎರಡನೇ ಪಂದ್ಯದಲ್ಲಿ ಭಾರತ ತಂಡದ ಯೋಜನೆಗಳೆಲ್ಲವೂ ಯಶ ಕಂಡಿತ್ತು. ಹೀಗಾಗಿ ಚಿನ್ನಾಸ್ವಾಮಿಯಲ್ಲೂ ಅದೇ ಮಾದರಿಯ ಕಾರ್ಯತಂತ್ರದೊಂದಿಗೆ ಮತ್ತು 2ನೇ ಪಂದ್ಯವಾಡಿದ್ದ ಅಂತಿಮ 11ರ ಬಳಗವೇ ಕಣಕ್ಕಿಳಿಯುವ ಸಾಧ್ಯತೆ ಇದೆ. ರಾಜ್‌ಕೋಟ್‌ ಪಂದ್ಯದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಿದ್ದರು. ಕುಲ್ದೀಪ್‌ ಹಾಗೂ ಜಡೇಜಾ ತಲಾ 2 ವಿಕೆಟ್‌ ಪಡೆದು, ಆಸೀಸ್‌ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಿದ್ದರು. ಆಲ್ರೌಂಡರ್‌ ಆಗಿ ಜಡೇಜಾ ಸ್ಥಾನ ಪಡೆದರೆ, ಮತ್ತೊಬ್ಬ ಸ್ಪಿನ್ನರ್‌ ಆಗಿ ಯಜುವೇಂದ್ರ ಚಹಲ್‌ಗೆ ಸ್ಥಾನ ದೊರೆಯಬಹುದು. ಐಪಿಎಲ್‌ನಲ್ಲಿ ಚಹಲ್‌ ಅವರ ತವರು ಅಂಗಳ ಇದಾಗಿದೆ.

ರೋಹಿತ್‌-ಧವನ್‌ಗೆ ಗಾಯ:

ರಾಜ್‌ಕೋಟ್‌ ಪಂದ್ಯದಲ್ಲಿ ಭಾರತದ ಆರಂಭಿಕರಾದ ರೋಹಿತ್‌ ಶರ್ಮಾ ಹಾಗೂ ಶಿಖರ್‌ ಧವನ್‌ ಗಾಯಗೊಂಡಿದ್ದರು. ಧವನ್‌ ಪಕ್ಕೆಲುಬಿಗೆ ಚೆಂಡು ಬಡಿದರೆ, ಬೌಂಡರಿ ಗೆರೆಯ ಬಳಿ ಚೆಂಡು ತಡೆಯಲು ಹೋಗಿ ರೋಹಿತ್‌ ಎಡ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಇವರಿಬ್ಬರಿಗೂ ತೀವ್ರ ತರದ ಗಾಯವಾಗಿಲ್ಲ ಎಂದಾದರೆ ಅವರು ಆಡಲು ಇಳಿಯಬಹುದು. ರಿಷಭ್‌ ಗೈರು ಹಾಜರಿಯಲ್ಲಿ ಅವಕಾಶ ಪಡೆದಿರುವ ಮನೀಶ್‌ಗೆ ತವರು ಮೈದಾನದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಮತ್ತೊಂದು ಅವಕಾಶವಿದೆ. ಶ್ರೇಯಸ್‌ ಅಯ್ಯರ್‌ ಲಯ ಕಂಡುಕೊಳ್ಳಬೇಕಿದೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಮುಂಬೈ ಪಂದ್ಯಕ್ಕೆ ಹೋಲಿಸಿದರೆ, 2ನೇ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಸಾಕಷ್ಟು ಚೇತೋಹಾರಿ ಪ್ರದರ್ಶನ ಮೂಡಿಬಂದಿತ್ತು. ಇದೀಗ ನಿರ್ಣಾಯಕ ಪಂದ್ಯದಲ್ಲೂ ಕೊಹ್ಲಿ ಪಡೆಯ ಬೌಲಿಂಗ್‌ ವಿಭಾಗ ಅಂತಹದ್ದೇ ಪ್ರದರ್ಶನ ತೋರುವ ಒತ್ತಡದಲ್ಲಿದೆ. ಅಲ್ಲದೇ ಕಳೆದ ವರ್ಷ ಆಸ್ಪ್ರೇಲಿಯಾ ವಿರುದ್ಧ ನಡೆದಿದ್ದ 5 ಪಂದ್ಯಗಳ ಸರಣಿಯಲ್ಲಿ ಮೊದಲ 2 ಪಂದ್ಯ ಗೆದ್ದಿದ್ದರೂ, ಕೊನೆಯ 3 ಪಂದ್ಯಗಳಲ್ಲಿ ಸೋಲುಂಡು ಸರಣಿ ಬಿಟ್ಟುಕೊಟ್ಟಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ಸೋತಿತ್ತು. ಇದೀಗ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಿವ ತವಕದಲ್ಲಿ ಕೊಹ್ಲಿ ಪಡೆ ಇದೆ.

ಪ್ರವಾಸಿಗರಿಗೆ ಅದೃಷ್ಟದ ಮೈದಾನ:

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಪ್ರವಾಸಿ ಆಸ್ಪ್ರೇಲಿಯಾ ತಂಡದ ಪಾಲಿಗೆ ಅದೃಷ್ಟದ ಮೈದಾನವಾಗಿದೆ. ಈ ಹಿಂದೆ ಭಾರತದ ವಿರುದ್ಧ ಇಲ್ಲಿ ಆಡಿದ ಮೂರು ಪಂದ್ಯದಲ್ಲೂ ಆಸ್ಪ್ರೇಲಿಯಾ ತಂಡ ಜಯಭೇರಿ ಬಾರಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಕೊಹ್ಲಿ ಪಡೆಗೆ, ಆಸ್ಪ್ರೇಲಿಯಾ ತಂಡ ಕಬ್ಬಿಣದ ಕಡಲೆಯಾದರೂ ಅಚ್ಚರಿ ಪಡಬೇಕಿಲ್ಲ. ಅಲ್ಲದೇ ಐಪಿಎಲ್‌ನಲ್ಲಿ ಆಡುವ ಆಟಗಾರರು ಆಸೀಸ್‌ ತಂಡದಲ್ಲಿ ಇರುವ ಕಾರಣ ಬೆಂಗಳೂರಿನ ಪಿಚ್‌ ಬಗ್ಗೆ ಅರಿವು ಹೊಂದಿದ್ದಾರೆ.

ಪಿಚ್‌ ರಿಪೋರ್ಟ್‌

ಬೆಂಗಳೂರಿನ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಬ್ಯಾಟ್ಸ್‌ಮನ್‌ಗಳ ಪಾಲಿನ ಸ್ವರ್ಗ ಎನಿಸಿದೆ. ಆಸ್ಪ್ರೇಲಿಯಾ ಹಾಗೂ ಭಾರತ ನಡುವೆ ಈ ಹಿಂದೆ ನಡೆದ ಎರಡು ಪಂದ್ಯಗಳಲ್ಲಿ ಎರಡು ತಂಡಗಳು ಸೇರಿ ಅನುಕ್ರಮವಾಗಿ 709 ಹಾಗೂ 647 ರನ್‌ ಕಲೆಹಾಕಿವೆ. ಹೀಗಾಗಿ ಪಿಚ್‌ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲವಾಗಲಿದೆ.

ರಾಹುಲ್‌-ಪಾಂಡೆ ಮೇಲೆ ಹೆಚ್ಚಿನ ನಿರೀಕ್ಷೆ:

ಭಾರತ ತಂಡದ ಆಟಗಾರರಾದ ಕೆ.ಎಲ್‌. ರಾಹುಲ್‌ ಹಾಗೂ ಮನೀಶ್‌ ಪಾಂಡೆ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಈ ಇಬ್ಬರೂ ಆಟಗಾರರಿಗೆ ಇದು ತವರಿನ ಅಂಗಳವಾಗಿದೆ. ಹೀಗಾಗಿ ರಾಹುಲ್‌ ಮತ್ತು ಮನೀಶ್‌ ಬ್ಯಾಟಿಂಗ್‌ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೇ ರಾಹುಲ್‌ ಅದ್ಭುತ ಲಯದಲ್ಲಿದ್ದು, ತವರಲ್ಲಿ ಭರ್ಜರಿ ಆಟವಾಡುವ ಉತ್ಸಾಹ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ಮನೀಶ್‌ ಪಾಂಡೆ, ರವೀಂದ್ರ ಜಡೇಜಾ, ಮೊಹಮದ್‌ ಶಮಿ, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬೂಮ್ರಾ, ನವದೀಪ್‌ ಸೈನಿ.

ಆಸ್ಪ್ರೇಲಿಯಾ: ಡೇವಿಡ್‌ ವಾರ್ನರ್‌, ಆ್ಯರೋನ್‌ ಫಿಂಚ್‌(ನಾಯಕ), ಮಾರ್ನಸ್‌ ಲಬುಶೇನ್‌, ಸ್ಟೀವ್‌ ಸ್ಮಿತ್‌, ಆ್ಯಸ್ಟನ್‌ ಟರ್ನರ್‌, ಅಲೆಕ್ಸ್‌ ಕಾರಿ, ಆಸ್ಟನ್‌ ಅಗರ್‌, ಮಿಚೆಲ್‌ ಸ್ಟಾರ್ಕ್, ಪ್ಯಾಟ್‌ ಕಮಿನ್ಸ್‌, ಕೇನ್‌ ರಿಚರ್ಡ್‌ಸನ್‌, ಆ್ಯಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

 

 

click me!