
ಮೆಲ್ಬರ್ನ್(ಮಾ.26): ಈ ವರ್ಷಾಂತ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯ ವೇಳಾಪಟ್ಟಿಯನ್ನು ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ್ದು, ಬರೋಬ್ಬರಿ ಮೂರು ದಶಕಗಳ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 5 ಪಂದ್ಯಗಳ ಟೆಸ್ಟ್ ಸರಣಿಯನ್ಣಾಡಲಿವೆ. 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ನವೆಂಬರ್ 22ರಂದು ಪರ್ತ್‌ನಲ್ಲಿ ಆರಂಭವಾಗಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 1991-92ರಲ್ಲಿ ಕೊನೆಯ ಬಾರಿಗೆ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಿದ್ದವು. ಇದೀಗ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗಮನದಲ್ಲಿಟ್ಟುಕೊಂಡು ಉಭಯ ತಂಡಗಳಿಗೆ ಅನುಕೂಲವಾಗಲಿ ಎಂದು 5 ಪಂದ್ಯಗಳ ಟೆಸ್ಟ್ ಸರಣಿ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.
ಮೊದಲ ಟೆಸ್ಟ್ ಪಂದ್ಯವು ಪರ್ತ್‌ನಲ್ಲಿ ನಡೆದರೆ, ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿರಲಿದೆ. ಇದಾದ ಬಳಿಕ ಬ್ರಿಸ್ಬೇನ್, ಮೆಲ್ಬರ್ನ್ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಸಿಡ್ನಿ ಆತಿಥ್ಯ ವಹಿಸಲಿದೆ. ನವೆಂಬರ್ 22ರಿಂದ ಆರಂಭವಾಗುವ ಈ ಟೆಸ್ಟ್ ಸರಣಿಯು 2025ರ ಜನವರಿ 07ರ ವರೆಗೆ ನಡೆಯಲಿದೆ.
ಕಳೆದ ವರ್ಷ ಇಂಗ್ಲೆಂಡ್‌ನ ದಿ ಓವೆಲ್ ಮೈದಾನದಲ್ಲಿ ನಡೆದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲಿನ ಶಾಕ್ ನೀಡಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಆಸ್ಟ್ರೇಲಿಯಾ ತಂಡದ ಎದುರು ಅವರದ್ದೇ ನೆಲದಲ್ಲಿ ಸೇಡು ತೀರಿಸಿಕೊಳ್ಳಲು ಮತ್ತೊಂದು ಅವಕಾಶ ಒದಗಿ ಬಂದಿದೆ. ಇನ್ನೊಂದೆಡೆ ಭಾರತ ತಂಡವು 2017ರಿಂದಲೂ ತವರು ಹಾಗೂ ತವರಿನಾಚೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಜಯಿಸುತ್ತಲೇ ಬಂದಿದೆ.
RCB ವೇಗಿಯನ್ನು ಕಸಕ್ಕೆ ಹೋಲಿಸಿದ ಮುರಳಿ ಕಾರ್ತಿಕ್..! ಗ್ರಾಚಾರ ಬಿಡಿಸಿದ ನೆಟ್ಟಿಗರು
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ ನೋಡಿ:
ಮೊದಲ ಟೆಸ್ಟ್: ನವೆಂಬರ್ 22-26, ಪರ್ತ್
ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಹಗಲು-ರಾತ್ರಿ ಪಂದ್ಯ)
ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್
ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬರ್ನ್
ಐದನೇ ಟೆಸ್ಟ್: ಜನವರಿ 3-7, ಸಿಡ್ನಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.