ಟೀಂ ಇಂಡಿಯಾ ‘ಬಾಜ್‌ಬಾಲ್‌’ ಆಟಕ್ಕೆ ಬೆಚ್ಚಿದ ಇಂಗ್ಲೆಂಡ್‌! ಭಾರತಕ್ಕೆ ಗೆಲ್ಲಲು ಬೇಕಿದೆ 9 ವಿಕೆಟ್

Published : Aug 03, 2025, 09:15 AM IST
Mohammed Siraj

ಸಾರಾಂಶ

ಲಂಡನ್‌ನ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಆಂಡರ್‌ಸನ್‌-ತೆಂಡುಲ್ಕರ್‌ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡಿಗೆ 374 ರನ್‌ಗಳ ಬೃಹತ್‌ ಗುರಿ ನೀಡಿದೆ. ಜೈಸ್ವಾಲ್‌ ಶತಕ, ಆಕಾಶ್‌ದೀಪ್‌ ಅರ್ಧಶತಕ ಸಿಡಿಸಿದರೆ, ಜಡೇಜಾ ಮತ್ತು ವಾಷಿಂಗ್ಟನ್‌ ಸುಂದರ್‌ ಕೂಡ ಅರ್ಧಶತಕ ಬಾರಿಸಿದರು.

ಲಂಡನ್‌: ತೆಂಡುಲ್ಕರ್‌-ಆ್ಯಂಡರ್‌ಸನ್‌ ಟೆಸ್ಟ್‌ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಭಾರತ ದಿಟ್ಟ ಹೋರಾಟ ಮುಂದುವರಿಸಿದ್ದು, 2ನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಬ್ಯಾಟಿಂಗ್‌ ನಡೆಸಿ ಇಂಗ್ಲೆಂಡ್‌ಗೆ ಗೆಲ್ಲಲು 374 ರನ್‌ಗಳ ಬೃಹತ್‌ ಗುರಿ ನೀಡಿದೆ. 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 75 ರನ್‌ ಗಳಿಸಿದ್ದ ಭಾರತ, 3ನೇ ದಿನವಾದ ಶನಿವಾರ ಸ್ಫೋಟಕ ಬ್ಯಾಟಿಂಗ್‌ ನಡೆಸಿ 396 ರನ್‌ಗೆ ಆಲೌಟ್‌ ಆಯಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ಆತಿಥೇಯ ಇಂಗ್ಲೆಂಡ್ ತಂಡವು ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 50 ರನ್ ಕಲೆಹಾಕಿದ್ದು, ಇನ್ನೂ 324 ರನ್ ಗಳಿಸಬೇಕಿದೆ. ದಿನದಾಟದ ಕೊನೆಯಲ್ಲಿ ಜಾಕ್ ಕ್ರಾಲಿಯನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಯಶಸ್ವಿಯಾಗಿದ್ದಾರೆ.

ಶತಕದೊಂದಿಗೆ ಸರಣಿಯನ್ನು ಆರಂಭಿಸಿದ್ದ ಯಶಸ್ವಿ ಜೈಸ್ವಾಲ್‌, ಮತ್ತೊಂದು ಶತಕದೊಂದಿಗೆ ಸರಣಿಯಲ್ಲಿ ತಮ್ಮ ಬ್ಯಾಟಿಂಗ್‌ ಕೊನೆಗೊಳಿಸಿದರೆ, ರಾತ್ರಿ ಕಾವಲುಗಾರನಾಗಿ ಕ್ರೀಸ್‌ಗಿಳಿದಿದ್ದ ಆಕಾಶ್‌ದೀಪ್‌ ಚೊಚ್ಚಲ ಅರ್ಧಶತಕ ಸಿಡಿಸಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದರು. ರವೀಂದ್ರ ಜಡೇಜಾ ಮತ್ತೊಮ್ಮೆ ಆಪದ್ಭಾಂದವರಾದರೆ, ಧೃವ್‌ ಜುರೆಲ್‌ ಉತ್ತಮ ಕೊಡುಗೆ ನೀಡಿ ತಮ್ಮ ಆಯ್ಕೆ ಸಮರ್ಥಿಸಿಕೊಂಡರು. ಇನ್ನು ವಾಷಿಂಗ್ಟನ್‌ ಸುಂದರ್‌ರ ಸ್ಫೋಟಕ ಫಿಫ್ಟಿ, ಭಾರತ ದೊಡ್ಡ ಗುರಿ ನಿಗದಿಪಡಿಸಲು ನೆರವಾಯಿತು.

 

3ನೇ ದಿನದಾಟವನ್ನು ಭಾರತ ಉತ್ತಮವಾಗಿ ಆರಂಭಿಸಿತು. ಜೈಸ್ವಾಲ್‌ ಹಾಗೂ ಆಕಾಶ್‌ದೀಪ್‌ ಹೆಚ್ಚೂ ಕಡಿಮೆ ಭೋಜನ ವಿರಾಮದ ವರೆಗೂ ಬ್ಯಾಟ್‌ ಮಾಡಿದರು. ಆಕಾಶ್‌ದೀಪ್‌ 66 ರನ್‌ ಗಳಿಸಿ, 3ನೇ ವಿಕೆಟ್‌ಗೆ 107 ರನ್‌ ಜೊತೆಯಾಟದಲ್ಲಿ ಭಾಗಿಯಾದರು. ಭೋಜನ ವಿರಾಮಕ್ಕೆ ಕೆಲವೇ ನಿಮಿಷ ಬಾಕಿ ಇದ್ದಾಗ ಆಕಾಶ್‌ ಔಟಾಗಿ ಶುಭ್‌ಮನ್‌ ಗಿಲ್‌ ಕ್ರೀಸ್‌ಗಿಳಿದರು. ಎರಡು ಆಕರ್ಷಕ ಬೌಂಡರಿಗಳೊಂದಿಗೆ ಇನ್ನಿಂಗ್ಸ್‌ ಆರಂಭಿಸಿದ ಗಿಲ್‌ ಮತ್ತೊಂದು ದೊಡ್ಡ ಸ್ಕೋರ್‌ನ ನಿರೀಕ್ಷೆ ಮೂಡಿಸಿದರು. ಆದರೆ, 2ನೇ ಅವಧಿಯ ಮೊದಲ ಎಸೆತದಲ್ಲೇ ಗಿಲ್‌ ಔಟಾಗಿದ್ದು ತಂಡಕ್ಕೆ ತುಸು ಹಿನ್ನಡೆ ಉಂಟು ಮಾಡಿತು.

ಈ ನಡುವೆ ಜೈಸ್ವಾಲ್‌ ಟೆಸ್ಟ್‌ನಲ್ಲಿ 6ನೇ, ಇಂಗ್ಲೆಂಡ್‌ ವಿರುದ್ಧ 4ನೇ ಶತಕ ಪೂರೈಸಿ ಸಂಭ್ರಮಿಸಿದರು. ಕರುಣ್‌ 17 ರನ್‌ಗೆ ಔಟಾದ ಬಳಿಕ ಜೈಸ್ವಾಲ್‌ಗೆ ಜಡೇಜಾ ಜೊತೆಯಾದರು. 118 ರನ್‌ಗೆ ಜೈಸ್ವಾಲ್‌ ಇನ್ನಿಂಗ್ಸ್‌ ಕೊನೆಗೊಂಡಿತು. ಅವರು ಔಟಾದಾಗ ತಂಡದ ಮೊತ್ತ 273ಕ್ಕೆ 6. ಕೊನೆ 4 ವಿಕೆಟ್‌ಗೆ ಭಾರತ 123 ರನ್‌ ಕಲೆಹಾಕಿತು. ಇದಕ್ಕೆ ಕಾರಣ, ಜುರೆಲ್‌ರ ಉಪಯುಕ್ತ 34, ಜಡೇಜಾರ 53 ಹಾಗೂ ವಾಷಿಂಗ್ಟನ್‌ರ 53 ರನ್‌ ಕೊಡುಗೆ.

 

ವಾಷಿಂಗ್ಟನ್‌ ಕೊನೆ ವಿಕೆಟ್‌ಗೆ ಪ್ರಸಿದ್ಧ್‌ರ ಜೊತೆ 39 ರನ್‌ ಸೇರಿಸಿದರು. ಇದರಲ್ಲಿ ಪ್ರಸಿದ್ಧ್‌ರ ಕೊಡುಗೆ ಸೊನ್ನೆ. 15 ಎಸೆತದಲ್ಲಿ 35 ರನ್‌ ಸಿಡಿಸಿದ ವಾಷಿಂಗ್ಟನ್‌, 39 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಟಂಗ್‌ 5, ಆ್ಯಟ್ಕಿನ್ಸನ್‌ 3, ಓವರ್‌ಟನ್‌ 2 ವಿಕೆಟ್‌ ಕಿತ್ತರು.

ಸದ್ಯ 5 ಪಂದ್ಯಗಳ ಆಂಡರ್‌ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 2-1ರ ಮುನ್ನಡೆ ಸಾಧಿಸಿದೆ. ಕೊನೆಯ ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸಿದರೆ 2-2ರೊಂದಿಗೆ ಸರಣಿ ಸಮಬಲದೊಂದಿಗೆ ಕೊನೆಯಾಗಲಿದೆ. ಅಂದಹಾಗೆ ಇಲ್ಲಿನ ಓವಲ್ ಮೈದಾನದಲ್ಲಿ ಯಾವ ತಂಡವು 300 ರನ್ ಚೇಸ್ ಮಾಡಿ ಗೆದ್ದಿಲ್ಲ. ಹೀಗಾಗಿ ಭಾರತ ತಂಡವು ಕೊನೆಯ ಟೆಸ್ಟ್ ಗೆಲ್ಲುವ ವಿಶ್ವಾಸದಲ್ಲಿದೆ. ಸದ್ಯ ಇಂಗ್ಲೆಂಡ್ ಮತ್ತೋರ್ವ ಬ್ಯಾಟರ್ ಬೆನ್ ಡಕೆಟ್ 34 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧನಾ ಮೊದಲ ಪೋಸ್ಟ್: ನಿಶ್ಚಿತಾರ್ಥ ಉಂಗುರ ನಾಪತ್ತೆ! ಏನಾಯ್ತು ಎಂದ ಫ್ಯಾನ್ಸ್
ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?