
ನವದೆಹಲಿ (ಆ.2): ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ದುಬೈ ಮತ್ತು ಅಬುಧಾಬಿ ಅಧಿಕೃತ ಸ್ಥಳವಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ದೃಢಪಡಿಸಿದೆ.ಯುಎಇ ಕಾಲಮಾನ ಸಂಜೆ 6ಕ್ಕೆ ಪಂದ್ಯಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಅಂದರೆ ಭಾರತದಲ್ಲಿ ಸಂಜೆ 7:30ಕ್ಕೆ ಪಂದ್ಯ ಆರಂಭಾಗಲಿದ್ದು, ಭಾರತೀಯ ಪ್ರೇಕ್ಷಕರಿಗೆ ಇದು ಪ್ರೈಮ್-ಟೈಮ್ ವೀಕ್ಷಣೆಯಾಗಿದೆ. ಪಂದ್ಯಾವಳಿ ಸೆಪ್ಟೆಂಬರ್ 9 ರಿಂದ 28 ರವರೆಗೆ ನಡೆಯಲಿದೆ.
19 ದಿನಗಳ ಕಾಲ ಟೂರ್ನಿ ನಡೆಯಲಿದ್ದು 19 ಪಂದ್ಯಗಳು ನಡೆಯಲಿದೆ. ತೀರಾ ಅಪರೂಪ ಎನ್ನುವಂತೆ ಪಂದ್ಯಗಳ ಓವರ್‌ಲ್ಯಾಪ್ ಕೂಡ ಆಗಿದೆ. ಸೆ. 15 ರಂದು ಎರಡು ಪಂದ್ಯಗಳು ನಡೆಯಲಿದೆ. ಅಂದು ಯುಎಇ-ಒಮಾನ್ ತಂಡಗಳು ಮುಖಾಮುಖಿಯಾಗಲಿದ್ದರೆ, ಅದೇ ದಿನ ಶ್ರೀಲಂಕಾ ಹಾಗೂ ಹಾಂಕಾಂಗ್ ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಪಂದ್ಯದ ಭಾರತೀಯ ಕಾಲಮಾನ ಸಂಜೆ 6ಕ್ಕೆ ಆರಂಭವಾಗಲಿದ್ದರೆ, ಇನ್ನೊಂದು ಪಂದ್ಯ 7.30ಕ್ಕೆ ಆರಂಭವಾಗಲಿದೆ. ಇದರಿಂದಾಗಿ ಪಂದ್ಯದ ನೇರಪ್ರಸಾರ ಓವರ್‌ಲ್ಯಾಪ್ ಆಗಲಿದೆ.
ಭಾರತದ ಲೀಗ್ ಪಂದ್ಯಗಳು ಕ್ರಮವಾಗಿ ಸೆ. 10, 14 ಹಾಗೂ 19ರಂದು ನಿಗದಿಯಾಗಿದೆ. ಈ ದಿನಗಳಲ್ಲಿ ಯುಎಇ, ಪಾಕಿಸ್ತಾನ ಹಾಗೂ ಓಮಾನ್ ತಂಡಗಳನ್ನು ಭಾರತ ಎದುರಿಸಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ತಮ್ಮ ಗ್ರೂಪ್‌ನಲ್ಲಿ ಮೊದಲ ಎರಡು ಅಗ್ರ ತಂಡಗಳಾಗುವುದು ಬಹುತೇಕ ಖಚಿತವಾಗಿದ್ದು, ಸೂಪರ್-4 ಸ್ಟೇಜ್‌ನಲ್ಲಿ ಸೆ. 21ರಂದು ಮುಖಾಮುಖಿಯಾಗಲಿದೆ. ಭಾರತದ ಸೂಪರ್-4 ಸ್ಟೇಜ್ ಹಂತದ ಉಳಿದ ಪಂದ್ಯಗಳು ಲೀಗ್ ಹಂತದಲ್ಲಿ ತಂಡ ಯಾವ ಸ್ಥಾನ ಪಡೆಯಲಿದೆ ಎನ್ನುವ ಆಧಾರದ ಮೇಲೆ ನಿರ್ಧಾರವಾಗಲಿದೆ.
ಸ್ಥಳಗಳು ಮತ್ತು ಸಮಯಗಳನ್ನು ಘೋಷಿಸಿದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ, "ಎಸಿಸಿ ಟಿ20 ಏಷ್ಯಾ ಕಪ್ ಸ್ಥಳಗಳು ಮತ್ತು ಪಂದ್ಯಗಳ ಸಮಯ ಗೊತ್ತಾಗಿದೆ. ಫುಲ್ ಸ್ಟೇಡಿಯಂನಲ್ಲಿ, ಕೆಲವು ನಿಜವಾಗಿಯೂ ಉಸಿರುಕಟ್ಟುವ ಮುಖಾಮುಖಿಗಳನ್ನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದರು. ಎಸಿಸಿ ಹೇಳಿಕೆಯಲ್ಲಿ, "ಏಷ್ಯನ್ ಕ್ರಿಕೆಟ್ ಆಡುವ ಉನ್ನತ ರಾಷ್ಟ್ರಗಳು ವರ್ಷದ ಅತ್ಯಂತ ನಿರೀಕ್ಷಿತ ಪಂದ್ಯಾವಳಿಗಳಲ್ಲಿ ಒಂದಾದ ಪಂದ್ಯದಲ್ಲಿ ಸೆಣಸಾಡಲು ಸಜ್ಜಾಗಿರುವುದರಿಂದ, ಈ ಘೋಷಣೆಯು ಪಂದ್ಯಾವಳಿಯ ಸಿದ್ಧತೆಗಳಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಸಾಂಪ್ರದಾಯಿಕ ಕ್ರೀಡಾಂಗಣಗಳಿಂದ ಹಿಡಿದು ಉತ್ಸಾಹಭರಿತ ಅಭಿಮಾನಿಗಳವರೆಗೆ, ಖಂಡದಾದ್ಯಂತ ರೋಮಾಂಚಕ ಕ್ರಿಕೆಟ್ ವೇದಿಕೆ ಸಿದ್ಧವಾಗಿದೆ" ಎಂದು ಹೇಳಿದರು.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಯುಎಇ, ಓಮನ್ ಮತ್ತು ಹಾಂಗ್ ಕಾಂಗ್ ತಂಡಗಳು ಟಿ20 ಸ್ವರೂಪದಲ್ಲಿ ನಡೆಯಲಿರುವ ಪಂದ್ಯಾವಳಿಗೆ ಅರ್ಹತೆ ಪಡೆದಿವೆ. ಸೆಪ್ಟೆಂಬರ್ 29 ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಈ ನಡುವೆ, ಏಷ್ಯಾ ಕಪ್‌ಗಾಗಿ ನೇರಪ್ರಸಾರ ವಾಹಿನಿಯನ್ನು ಎಸಿಸಿ ಇನ್ನೂ ಅಂತಿಮಗೊಳಿಸಿಲ್ಲ ಎಂದು ತಿಳಿದುಬಂದಿದೆ. ಹಿಂದಿನ ಆವೃತ್ತಿಗಳಲ್ಲಿ, ಪ್ರಸಾರ ಹಕ್ಕುಗಳನ್ನು ಹೊಂದಿದ್ದ ಸ್ಟಾರ್ ಸ್ಪೋರ್ಟ್ಸ್ ನಿರ್ಮಾಣವನ್ನು ನಿರ್ವಹಿಸಿತು. ಈ ಬಾರಿ, ಸೋನಿ ಸ್ಪೋರ್ಟ್ಸ್ ಹೊಸ ಹಕ್ಕುದಾರರಾಗಿದ್ದು, ಅವರು ಎಂಟು ವರ್ಷಗಳ ಕಾಲ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಅವರಿಗೆ ನಿರ್ಮಾಣ ಕೆಲಸವನ್ನು ಸಹ ವಹಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.