ಆಟಗಾರರು, ಸಿಬ್ಬಂದಿಗಳಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಐಪಿಎಲ್ ಟೂರ್ನಿಯನ್ನು ರದ್ದು ಮಾಡಿದೆ. ಇದರ ಬೆನ್ನಲ್ಲೇ ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಟಿ20 ವಿಶ್ವಕಪ್ ಟೂರ್ನಿ ಆತಿಥ್ಯ ಕೂಡ ಭಾರತದ ಕೈತಪ್ಪು ಭೀತಿ ಎದುರಾಗಿದೆ.
ನವದೆಹಲಿ(ಮೇ.04): ಕೊರೋನಾ ವೈರಸ್ ಇದೀಗ ಸಂಪೂರ್ಣ ಭಾರತವನ್ನೇ ಸ್ಥಬ್ಧ ಮಾಡುತ್ತಿದೆ. ಬಯೋಬಬಲ್ ಸರ್ಕಲ್ ಹಾಗೂ ಕಠಿಣ ಮಾರ್ಗಸೂಚಿ ಮೂಲಕ ನಡೆಯುತ್ತಿದ್ದ ಐಪಿಎಲ್ ಟೂರ್ನಿ ರದ್ದಾಗಿದೆ. ಇದೀಗ ಭಾರತ ಆತಿಥ್ಯ ವಹಿಸಿದ್ದ ಟಿ20 ವಿಶ್ವಕಪ್ ಟೂರ್ನಿ ಕೂಡ ಭಾರತದಿಂದ ಸ್ಥಳಾಂತರಗೊಳ್ಳುವ ಸೂಚನೆಗಳಿವೆ.
ಐಪಿಎಲ್ ರದ್ದು: ಈ ಸಲ ಕಪ್ ಕೊರೋನಾದ್ದು!
ಕೊರೋನಾ ವೈರಸ್ ಕಾರಣ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಬೇಕಿದ್ದ ಟಿ20 ವಿಶ್ವಕಪ್ ಟೂರ್ನಿ ಮುಂದೂಡಲಾಗಿತ್ತು. ದುಬೈನಲ್ಲಿ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ , 2021ರಲ್ಲಿ ಟಿ20 ವಿಶ್ವಕಪ್ ಆಯೋಜಿಸಲು ಆತಿಥ್ಯ ಪಡೆದಿತ್ತು. ಇದೀಗ ಭಾರತದಲ್ಲಿನ ಕೊರೋನಾ ಪರಿಸ್ಥಿತಿ ಗಂಭೀರವಾಗಿರುವ ಕಾರಣ ಭಾರತದಿಂದ ಟಿ20 ವಿಶ್ವಕಪ್ ಟೂರ್ನಿ ದುಬೈಗೆ ಸ್ಥಳಾಂತರವಾಗುವ ಸಾಧ್ಯತೆ ಹೆಚ್ಚಿದೆ.
IPL 2021: ವೃದ್ಧಿಮಾನ್ ಸಾಹ, ಅಮಿತ್ ಮಿಶ್ರಾಗೆ ಕೊರೋನಾ ಪಾಸಿಟೀವ್!...
ಐಸಿಸಿ ಹಾಗೂ ಬಿಸಿಸಿಐ ಈಗಾಗಲೇ ಈ ಕುರಿತು ಮಾತುಕತೆ ನಡೆಸಿದೆ. ದುಬೈಗೆ ಟಿ20 ವಿಶ್ವಕಪ್ ಟೂರ್ನಿ ಸ್ಥಳಾಂತರಿಸಲು ಐಸಿಸಿ ಉತ್ಸಾಹ ತೋರಿದೆ. ಆದರೆ ಬಿಸಿಸಿಐ ಅಕ್ಟೋಬರ್ ವೇಳೆಗೆ ಭಾರತದಲ್ಲಿ ಪರಿಸ್ಥಿತಿ ಸುಧಾರಿಸಿದರೆ, ಆಯೋಜಿಸುವ ಲೆಕ್ಕಾಚಾರದಲ್ಲಿದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಭಾರತದಲ್ಲಿ ಟಿ20 ವಿಶ್ವಕಪ್ ಆಯೋಜನೆ ಕಷ್ಟ. ಇನ್ನು ದುಬೈನಲ್ಲಿ ಆಯೋಜನೆಯಾದರೂ, ಟೀಂ ಇಂಡಿಯಾ ಪಾಲ್ಗೊಳ್ಳುವುದು ಕೂಡ ಸವಾಲಾಗಲಿದೆ.