ಮ್ಯಾಂಚೆಸ್ಟರ್ ಭದ್ರಕೋಟೆ ಪುಡಿ ಮಾಡುತ್ತಾ ಟೀಂ ಇಂಡಿಯಾ? ಗಿಲ್ ಪಡೆಗೆ ಮಾಡು ಇಲ್ಲವೇ ಮಡಿ ಟೆಸ್ಟ್

Naveen Kodase   | Kannada Prabha
Published : Jul 23, 2025, 08:37 AM IST
Indian Cricket Team

ಸಾರಾಂಶ

ಗಾಯದ ಸಮಸ್ಯೆಗಳ ನಡುವೆಯೂ ಭಾರತ ತಂಡವು ನಿರ್ಣಾಯಕ 4ನೇ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗಿದೆ. ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತಕ್ಕೆ ಮ್ಯಾಂಚೆಸ್ಟರ್‌ನಲ್ಲಿ ಹಲವು ಸವಾಲುಗಳು ಎದುರಾಗಿವೆ. ಮಳೆಯ ಅಡ್ಡಿಯೂ ಪಂದ್ಯದ ಮೇಲೆ ಪರಿಣಾಮ ಬೀರಬಹುದು.

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ ಬಳಿಕ 8 ದಿನಗಳ ವಿಶ್ರಾಂತಿ ಸಮಯದಲ್ಲಿ ಭಾರತ ತಂಡದ ಚಿತ್ರಣವೇ ಬದಲಾಗಿದೆ. ಹಲವರ ಗಾಯ, ಫಿಟ್ನೆಸ್‌ ಸಮಸ್ಯೆಯಿಂದಾಗಿ ತಂಡ ನಲುಗಿ ಹೋಗಿದೆ. ಇದರ ನಡುವೆಯೂ ತಂಡ ಬುಧವಾರದಿಂದ ನಿರ್ಣಾಯಕ 4ನೇ ಟೆಸ್ಟ್‌ ಪಂದ್ಯದಿಂದ ಕಣಕ್ಕಿಳಿಯಲಿದೆ.

ಈ ಟೆಸ್ಟ್‌ 2 ಕಾರಣಗಳಿಂದಾಗಿ ಭಾರತಕ್ಕೆ ಮಹತ್ವದ್ದು. ಒಂದು, ಭಾರತ ಈ ಕ್ರೀಡಾಂಗಣದಲ್ಲಿ 9 ದಶಕದಲ್ಲಿ ಒಮ್ಮೆಯೂ ಟೆಸ್ಟ್‌ ಗೆದ್ದಿಲ್ಲ. ಮತ್ತೊಂದು, ಈ ಟೆಸ್ಟ್‌ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಸರಣಿಯನ್ನೇ ಕಳೆದುಕೊಳ್ಳಲಿದೆ. ಶುಭ್‌ಮನ್‌ ಗಿಲ್ ಸಾರಥ್ಯದ ಭಾರತ ಈ ಬಾರಿ ನೀಡಿರುವ ಪ್ರದರ್ಶನ ಗಮನಿಸಿದರೆ ತಂಡ ಈಗಾಗಲೇ 3-0 ಅಂತರದಲ್ಲಿ ಗೆದ್ದಿರಬೇಕಿತ್ತು. ಲೀಡ್ಸ್‌ನಲ್ಲಿ ತನ್ನದೇ ಹತ್ತಾರು ಎಡವಟ್ಟುಗಳಿಂದ ಸೋತಿದ್ದ ಭಾರತ, ಲಾರ್ಡ್ಸ್‌ನಲ್ಲಿ ಹೋರಾಡಿ ಪಂದ್ಯ ಕೈಚೆಲ್ಲಿತ್ತು. ಆದರೆ ಎಜ್‌ಬಾಸ್ಟನ್‌ನಲ್ಲಿ ಮಾತ್ರ ಐತಿಹಾಸಿಕ ಗೆಲುವು ಸಾಧಿಸಿದೆ. ಅಂಥದ್ದೇ ಮತ್ತೊಂದು ಐತಿಹಾಸಿಕ ಗೆಲುವಿಗಾಗಿ ಭಾರತ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಕಾಯುತ್ತಿದೆ.

ಆಯ್ಕೆ ಗೊಂದಲ: ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದ ರಿಷಭ್‌ ಪಂತ್‌ ವಿಕೆಟ್‌ ಕೀಪಿಂಗ್‌ ಮಾಡುವ ಬಗ್ಗೆ ಗೊಂದಲ ಎದುರಾಗಿತ್ತು. ಈ ಬಗ್ಗೆ ಸ್ವತಃ ನಾಯಕ ಗಿಲ್‌ ಸ್ಪಷ್ಟನೆ ನೀಡಿದ್ದು, ರಿಷಭ್‌ ಕೀಪರ್‌ ಆಗಿಯೇ ಕಣಕ್ಕಿಳಿಯಲಿದ್ದಾರೆ ಎಂದಿದ್ದಾರೆ. ಮತ್ತೊಂದೆಡೆ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ ಆಡುವುದು ಖಚಿತವಾಗಿದೆ. ಗಾಯಾಳು ಆಕಾಶ್‌ದೀಪ್‌ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಗಿಲ್‌ ತಿಳಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಯುವ ವೇಗಿ ಅನ್ಶುಲ್‌ ಕಂಬೋಜ್‌ಗೆ ಪಾದಾರ್ಪಣೆ ಭಾಗ್ಯ ಸಿಗಲಿದೆಯೇ ಅಥವಾ ಕನ್ನಡಿಗ ಪ್ರಸಿದ್ಧ್‌ ಕೃಷ್ಣಗೆ ಅವಕಾಶ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು, ಲಯ ಕಂಡುಕೊಳ್ಳಲು ಪರದಾಡುತ್ತಿರುವ ಕರುಣ್‌ ನಾಯರ್‌ ಮತ್ತೆ ಆಡುವ 11ರ ಬಳಗದಲ್ಲಿ ಕಾಣಸಿಕೊಳ್ಳಲಿದ್ದಾರೊ ಎಂಬುದು ಮತ್ತೊಂದು ಯಕ್ಷ ಪ್ರಶ್ನೆ. ನಿತೀಶ್‌ ರೆಡ್ಡಿ ಹೊರಬಿದ್ದಿದ್ದರಿಂದ ಅವರ ಸ್ಥಾನ ಯಾರ ಪಾಲಾಗಲಿದೆ ಎಂಬುದೂ ಖಚಿತವಾಗಿಲ್ಲ. ಸಾಯಿ ಸುದರ್ಶನ್‌ಗೆ ಅವಕಾಶ, 2ನೇ ಸ್ಪಿನ್ನರ್‌, ಆಲ್ರೌಂಡರ್‌ಗಳ ಆಯ್ಕೆ ಬಗ್ಗೆ ಇರುವ ಗೊಂದಲಗಳಿಗೆ ಟಾಸ್‌ ಸಮಯದಲ್ಲಷ್ಟೇ ಸ್ಪಷ್ಟ ಉತ್ತರ ಸಿಗಲಿದೆ.ಇದೆಲ್ಲರದ ನಡುವೆ ನಾಯಕ ಗಿಲ್‌, ಯಶಸ್ವಿ ಜೈಸ್ವಾಲ್‌, ಕನ್ನಡಿಗ ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಮೋಡಿ ಮಾಡಲು ಕಾಯುತ್ತಿದ್ದಾರೆ.ಸರಣಿ ಗೆಲುವಿನ ತವಕ:

ಇಂಗ್ಲೆಂಡ್‌ ತಂಡ ಆತ್ಮವಿಶ್ವಾದೊಂದಿಗೆ ಈ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದು, ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ತಂಡ ಈಗಾಗಲೇ ಆಡುವ 11ರ ಬಳಗವನ್ನು ಪ್ರಕಟಿಸಿದ್ದು, ಗಾಯಾಳು ಶೋಯೆಬ್‌ ಬಶೀರ್‌ ಬದಲು ಲಿಯಾಮ್‌ ಡಾವ್ಸನ್‌ ಆಡಲಿದ್ದಾರೆ.

ಪಂದ್ಯಕ್ಕೆ ಮಳೆ ಅಡ್ಡಿ ಭೀತಿ

ಮ್ಯಾಂಚೆಸ್ಟರ್‌ನಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆಯಿದೆ. ಮೊದಲ ದಿನ(ಜು.23) ಶೇ.60ರಷ್ಟು ಮಳೆ ನಿರೀಕ್ಷೆಯಿದೆ. ಉಳಿದ 4 ದಿನಗಳಲ್ಲೂ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಟಗಾರರ ಪಟ್ಟಿ

ಭಾರತ(ಸಂಭವನೀಯ): ಕೆ ಎಲ್ ರಾಹುಲ್‌, ಯಶಸ್ವಿ ಜೈಸ್ವಾಲ್‌, ಕರುಣ್‌ ನಾಯರ್, ಶುಭ್‌ಮನ್ ಗಿಲ್‌(ನಾಯಕ), ರಿಷಭ್‌ ಪಂತ್(ವಿಕೆಟ್ ಕೀಪರ್), ಸಾಯಿ ಸುದರ್ಶನ್‌, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್/ಶಾರ್ದೂಲ್‌ ಠಾಕೂರ್, ಅನ್ಶುಲ್‌ ಕಂಬೋಜ್/ಪ್ರಸಿದ್ಧ್‌ ಕೃಷ್ಣ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್‌.

ಇಂಗ್ಲೆಂಡ್‌(ಆಡುವ 11): ಜ್ಯಾಕ್‌ ಕ್ರಾವ್ಲಿ, ಡಕೆಟ್‌, ಓಲಿ ಪೋಪ್‌, ಜೋ ರೂಟ್‌, ಹ್ಯಾರಿ ಬ್ರೂಕ್‌, ಬೆನ್‌ ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್‌. ಡಾವ್ಸನ್‌, ಕ್ರಿಸ್ ವೋಕ್ಸ್‌, ಬ್ರೈಡನ್ ಕಾರ್ಸ್‌, ಜೋಫ್ರಾ ಆರ್ಚರ್‌

ಪಿಚ್‌ ರಿಪೋರ್ಟ್‌

ಮ್ಯಾಂಚೆಸ್ಟರ್‌ ಕ್ರೀಡಾಂಗಣದ ಪಿಚ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದೆ. ಇಲ್ಲಿ ಹೆಚ್ಚಿನ ಬೌನ್ಸರ್‌ಗಳೂ ಕಂಡುಬರಲಿದೆ. ಆದರೆ ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ