ತಂಡದಿಂದ ಹೊರಬಿದ್ದ ಸರ್ಫರಾಜ್ ಖಾನ್; ಹಠಕ್ಕೆ ಬಿದ್ದು 17 kg ತೂಕ ಇಳಿಸಿದ ಕ್ರಿಕೆಟರ್! ಡಯಟ್ ಸೀಕ್ರೇಟ್ ಸಿಂಪಲ್

Published : Jul 21, 2025, 05:51 PM IST
Sarfaraz Khan

ಸಾರಾಂಶ

ಭಾರತೀಯ ಕ್ರಿಕೆಟ್ ತಾರೆ ಸರ್ಫರಾಜ್ ಖಾನ್ 17 ಕೆಜಿ ತೂಕ ಇಳಿಸಿಕೊಂಡು ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ತಂಡದಿಂದ ಹೊರಗುಳಿದ ನಂತರ ಕಠಿಣ ತರಬೇತಿ ಮತ್ತು ಆಹಾರಕ್ರಮದ ಮೂಲಕ ಫಿಟ್ನೆಸ್ ಹೆಚ್ಚಿಸಿಕೊಂಡಿದ್ದಾರೆ.  

ಮುಂಬೈ: ಭಾರತೀಯ ಕ್ರಿಕೆಟ್ ತಾರೆ ಸರ್ಫರಾಜ್ ಖಾನ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಹೆಚ್ಚಿನ ತೂಕದ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದ ಸರ್ಫರಾಜ್ ಎರಡು ತಿಂಗಳಲ್ಲಿ 17 ಕೆಜಿ ತೂಕ ಇಳಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಇಂಡಿಯಾ ಎ ತಂಡದ ಪರ ಅನಧಿಕೃತ ಟೆಸ್ಟ್‌ನಲ್ಲಿ ಮಿಂಚಿದ್ದರೂ ಸರ್ಫರಾಜ್‌ಗೆ ಭಾರತೀಯ ಸೀನಿಯರ್ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದರ ಬೆನ್ನಲ್ಲೇ ಕಠಿಣ ಫಿಟ್ನೆಸ್ ತರಬೇತಿ ಮತ್ತು ಆಹಾರಕ್ರಮದ ಮೂಲಕ ತೂಕ ಇಳಿಸಿಕೊಂಡು ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ವರ್ಷಗಳ ಕಾಲ ಉತ್ತಮ ಪ್ರದರ್ಶನ ನೀಡಿದ್ದರೂ ಆಯ್ಕೆದಾರರು ಸರ್ಫರಾಜ್‌ರನ್ನು ಭಾರತ ತಂಡಕ್ಕೆ ಪರಿಗಣಿಸದಿರಲು ಅವರ ಫಿಟ್ನೆಸ್ ಕೊರತೆಯೂ ಒಂದು ಕಾರಣ ಎನ್ನಲಾಗಿತ್ತು.

 

ಕಳೆದ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಸರ್ಫರಾಜ್ ಶತಕ ಬಾರಿಸಿ ಮಿಂಚಿದ್ದರು. ನಂತರ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರೂ ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಪಂದ್ಯದಲ್ಲೂ ಸರ್ಫರಾಜ್‌ರನ್ನು ಆಡುವ ಹನ್ನೊಂದರಲ್ಲಿ ಆಡಿಸಿರಲಿಲ್ಲ. ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆದಾರರು ಸರ್ಫರಾಜ್‌ರನ್ನು ಪರಿಗಣಿಸಲಿಲ್ಲ. ಸರ್ಫರಾಜ್ ಬದಲಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್‌ಗೆ ಆಯ್ಕೆದಾರರು ಅವಕಾಶ ನೀಡಿದ್ದರು. ಆದರೆ ಸರಣಿಯ ಮೊದಲ ಮೂರು ಟೆಸ್ಟ್‌ಗಳಲ್ಲೂ ಕರುಣ್ ಮಿಂಚಲು ಸಾಧ್ಯವಾಗಿಲ್ಲ.

ಸರ್ಫರಾಜ್‌ರನ್ನು ನಿರಂತರವಾಗಿ ಕಡೆಗಣಿಸುವುದರ ವಿರುದ್ಧ ಹರ್ಭಜನ್ ಸಿಂಗ್ ಸೇರಿದಂತೆ ಹಲವು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರೂ, ಆಟಗಾರನ ಫಿಟ್ನೆಸ್ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿತ್ತು. ಐಪಿಎಲ್‌ನಲ್ಲೂ ಯಾವ ತಂಡದಲ್ಲೂ ಸ್ಥಾನ ಪಡೆಯಲು ಸರ್ಫರಾಜ್‌ಗೆ ಸಾಧ್ಯವಾಗಿರಲಿಲ್ಲ. ಇದೆಲ್ಲದರ ನಂತರ ಹೊಸ ಲುಕ್‌ನಲ್ಲಿ ಬಂದು ಸರ್ಫರಾಜ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

 

ಸರ್ಫರಾಜ್ ಖಾನ್ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗದೇ ಇರುವುದಕ್ಕೆ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್, 'ಇದು ನಿಜಕ್ಕೂ ದುರಾದೃಷ್ಟಕರ. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಸರ್ಫರಾಜ್ ಖಾನ್ ಅವರ ಹೆಸರು ಇಲ್ಲದಿರುವುದು ನೋಡಿ ನನಗೆ ಅಚ್ಚರಿಯಾಯಿತು. ಅವರು ಬಲಿಷ್ಠವಾಗಿಯೇ ಕಮ್‌ಬ್ಯಾಕ್ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ. ನೀವು ಆಯ್ಕೆಯಾಗದಿರುವುದಕ್ಕೆ ಎದೆಗುಂದಬೇಡಿ. ಕರುಣ್ ನಾಯರ್‌ಗೆ ಸಿಕ್ಕಂತೆ ನಿಮಗೆ ಇವತ್ತಲ್ಲದಿದ್ದರೂ ನಾಳೆ ಅವಕಾಶ ಸಿಕ್ಕೇ ಸಿಗಲಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದರು.

ಕರುಣ್ ನಾಯರ್ ಅವರನ್ನೇ ನೋಡಿ, ಇಂಗ್ಲೆಂಡ್ ಎದುರು ಅವರು ತ್ರಿಶತಕ ಸಿಡಿಸಿದ್ದರು. ಆದ ಬಳಿಕ ಹೆಚ್ಚಿನ ಅವಕಾಶ ಅವರಿಗೆ ಸಿಗಲಿಲ್ಲ. ಈಗ ಮತ್ತೆ ಅವರು ಇಂಗ್ಲೆಂಡ್ ಎದುರಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಸರ್ಫರಾಜ್ ಖಾನ್‌ಗೆ ಕಿವಿಮಾತು ಹೇಳಿದ್ದಾರೆ.

ಇನ್ನು ಸರ್ಫರಾಜ್ ಖಾನ್ ಅವರ ಈ 17 ಕೆಜಿ ತೂಕ ಇಳಿಕೆಯ ಕ್ರಮದ ಬಗ್ಗೆ ಅವರ ತಂದೆ ನೌಶಾದ್ ಖಾನ್ ಮೇ ತಿಂಗಳಿನಲ್ಲಿ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಮನಬಿಚ್ಚಿ ಮಾತನಾಡಿದ್ದರು.

'ನಾವು ಡಯೆಟ್‌ಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಕಳೆದ ಒಂದೂವರೆ ತಿಂಗಳಿನಿಂದ ಮನೆಯಲ್ಲಿ ರೈಸ್, ರೊಟ್ಟಿಯನ್ನು ತಿಂದಿಲ್ಲ. ನಾವು ಮನೆಯಲ್ಲಿ ಕ್ಯಾರೆಟ್, ಸೌತೆಕಾಯಿ ಸಲಾಡ್, ಹಸಿರು ತರಕಾರಿ ಸಲಾಡ್ ಜತೆಗೆ ಗ್ರಿಲ್ಲಡ್ ಫಿಶ್, ಗ್ರಿಲ್ಲಡ್ ಚಿಕನ್, ಬೇಯಿಸಿದ ಮೊಟ್ಟೆಯನ್ನು ತಿನ್ನುತ್ತಿದ್ದೆವು. ನಾವು ಗ್ರೀನ್ ಟೀ ಹಾಗೂ ಗ್ರೀನ್ ಕಾಫಿ ಕುಡಿಯುತ್ತಿದ್ದೆವು. ಇದರ ಜತೆಗೆ ನಾವು ಅವಕಾಡೋ ತಿನ್ನುತ್ತಿದ್ದೆವು. ಮುಖ್ಯವಾಗಿ ಅನ್ನ ಹಾಗೂ ರೊಟ್ಟಿ ತಿನ್ನುವುದನ್ನು ತ್ಯಜಿಸಿದೆವು. ಇದರ ಜತೆಗೆ ಸಕ್ಕರೆಯನ್ನು ತ್ಯಜಿಸಿದೆವು. ಮುಖ್ಯವಾಗಿ ಮೈದಾ ಉತ್ಫನ್ನಗಳು ಹಾಗೂ ಬೇಕರಿ ಉತ್ಪನ್ನಗಳನ್ನು ತಿನ್ನುವುದನ್ನು ತ್ಯಜಿಸಿದೆವು' ಎಂದು ಸರ್ಫರಾಜ್ ತಂದೆ ನೌಶಾದ್ ಹೇಳಿದ್ದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ