Ind vs WI ವಿಂಡೀಸ್‌ ಎದುರಿನ ಏಕದಿನ ಸರಣಿಯಿಂದ ಟೀಂ ಇಂಡಿಯಾ ಪ್ರಮುಖ ವೇಗಿ ಔಟ್..!

By Naveen KodaseFirst Published Jul 27, 2023, 6:00 PM IST
Highlights

ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೆ ಕ್ಷಣಗಣನೆ
ಏಕದಿನ ಸರಣಿಯಿಂದ ಹೊರಬಿದ್ದ ಟೀಂ ಇಂಡಿಯಾ ಪ್ರಮುಖ ವೇಗಿ
ಮಹತ್ವದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಹೈದರಾಬಾದ್ ಮೂಲದ ವೇಗಿಗೆ ರೆಸ್ಟ್

ಬಾರ್ಬಡೋಸ್(ಜು.27): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಟೀಂ ಇಂಡಿಯಾ ಮಾರಕ ವೇಗಿ ಮೊಹಮ್ಮದ್ ಸಿರಾಜ್‌ಗೆ ದಿಢೀರ್ ಎನ್ನುವಂತೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಮುಂಬರುವ ಮಹತ್ವದ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಹೈದರಾಬಾದ್‌ ಮೂಲದ ವೇಗಿಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿಶ್ರಾಂತಿ ನೀಡಿದ್ದು, ತಂಡದಿಂದ ರಿಲೀಸ್‌ ಮಾಡಿದೆ. ಸದ್ಯ 29 ವರ್ಷದ ವೇಗಿಗೆ ಬದಲಿ ಆಟಗಾರರನ್ನು ಇನ್ನೂ ಹೆಸರಿಸಿಲ್ಲ.

"ಬಲಗೈ ವೇಗದ ಬೌಲರ್ ಪಾದದ ನೋವಿನ ಭೀತಿಯಲ್ಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯು ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ಪಡೆದುಕೊಳ್ಳಲು ಸೂಚಿಸಿದೆ. ಜುಲೈ 27ರಿಂದ ವೆಸ್ಟ್ ಇಂಡೀಸ್ ವಿರುದ್ದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಸಿರಾಜ್‌ ಅವರಿಗೆ ಬದಲಿ ಆಟಗಾರನನ್ನು ಹೆಸರಿಸಿಲ್ಲ" ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Ind vs WI: ಕ್ರಿಕೆಟ್ ಲೆಜೆಂಡ್ಸ್‌ ಸಚಿನ್‌, ಗಂಗೂಲಿ, ಧೋನಿ ದಾಖಲೆ ಮುರಿಯಲು ರೆಡಿಯಾದ ರೋಹಿತ್ ಶರ್ಮಾ..!

ಹೀಗಾಗಿ ಮೊಹಮ್ಮದ್ ಸಿರಾಜ್‌, ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಕೆ ಎಸ್ ಭರತ್, ನವದೀಪ್ ಸೈನಿ ಅವರ ಜತೆ ತವರಿಗೆ ವಾಪಾಸ್ಸಾಗಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 1-0 ಅಂತರದಲ್ಲಿ ಜಯಿಸಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.

ಮೊಹಮ್ಮದ್ ಸಿರಾಜ್‌ಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಿರುವುದು ಭಾರತ ಏಕದಿನ ತಂಡದ ಬೌಲಿಂಗ್ ವಿಭಾಗ ಕೊಂಚ ವೀಕ್‌ ಆದಂತೆ ಕಂಡು ಬರುತ್ತಿದೆ. ಈಗಾಗಲೇ ವಿಂಡೀಸ್ ಸರಣಿಯಿಂದ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದ್ದಾರೆ. ಹೀಗಾಗಿ ಶಾರ್ದೂಲ್ ಠಾಕೂರ್, ಜಯದೇವ್ ಉನಾದ್ಕತ್, ಉಮ್ರಾನ್ ಮಲಿಕ್‌ ಹಾಗೂ ಮುಕೇಶ್ ಕುಮಾರ್ ಒಟ್ಟಾಗಿ ಸೇರಿ 50 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ ಶಾರ್ದೂಲ್ ಠಾಕೂರ್ ಭಾರತ ಏಕದಿನ ಕ್ರಿಕೆಟ್‌ನಲ್ಲಿ 35 ಪಂದ್ಯಗಳನ್ನಾಡಿದ್ದು, ಉಳಿದ ಆಟಗಾರರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅನನುಭವಿಗಳಾಗಿದ್ದಾರೆ. ಇನ್ನು ಮುಕೇಶ್ ಕುಮಾರ್ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಇಯರ್​ಬಡ್ಸ್​​ ಮೇಲೆ ಎಲ್ಲರ ಕಣ್ಣು..! ಏನಿದರ ವಿಶೇಷತೆ? ಬೆಲೆ ಎಷ್ಟು?

ಇನ್ನು ಮೊಹಮ್ಮದ್ ಸಿರಾಜ್, ಈ ಮೊದಲೇ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯಿಂದಲೂ ವಿಶ್ರಾಂತಿ ನೀಡಲಾಗಿತ್ತು. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಬಳಿಕ, ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಭಾರತ ಕ್ರಿಕೆಟ್‌ ತಂಡವು ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಮಹತ್ವದ ಏಷ್ಯಾಕಪ್ ಟೂರ್ನಿಯನ್ನು ಆಡಲಿದೆ. ಇದಾದ ಬಳಿಕ ತವರಿನಲ್ಲಿ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಹೀಗಾಗಿ ಮಹತ್ವದ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಹಾರ್ದಿಕ್‌ ಪಾಂಡ್ಯ, ಸಂಜು ಸ್ಯಾಮ್ಸನ್‌/ಇಶಾನ್ ಕಿಶನ್‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್/ಶಾರ್ದೂಲ್‌ ಠಾಕೂರ್, ಕುಲ್ದೀಪ್‌ ಯಾದವ್, ಉಮ್ರಾನ್‌ ಮಲಿಕ್‌, ಜಯದೇವ್ ಉನಾದ್ಕತ್‌/ಮುಕೇಶ್‌ ಕುಮಾರ್.

ಚಂದನ ವಾಹಿನಿಯಲ್ಲೂ ಪಂದ್ಯ ನೇರಪ್ರಸಾರ!

ಇದೇ ಮೊದಲ ಬಾರಿಗೆ ದೂರದರ್ಶನ ಚಂದನ ವಾಹಿನಿಯಲ್ಲೂ ಕ್ರಿಕೆಟ್‌ ನೇರ ಪ್ರಸಾರವಾಗಲಿದ್ದು, ಕನ್ನಡದಲ್ಲೇ ವೀಕ್ಷಕ ವಿವರಣೆ ಇರಲಿದೆ. ಕನ್ನಡ ಮಾತ್ರವಲ್ಲದೇ ಡಿಡಿ ಹಿಂದಿ, ಇಂಗ್ಲಿಷ್‌, ತಮಿಳು, ತೆಲುಗು, ಬಂಗಾಳಿ ವಾಹಿನಿಗಳಲ್ಲೂ ಆಯಾ ಭಾಷೆಗಳಲ್ಲೇ ವೀಕ್ಷಕ ವಿವರಣೆ ನೀಡುವುದಾಗಿ ದೂರದರ್ಶನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಜಿಯೋ ಸಿನಿಯಾ, ಡಿಡಿ ಚಂದನ, ಡಿಡಿ ಸ್ಪೋರ್ಟ್ಸ್‌.

click me!