
ಬೆಂಗಳೂರು(ಜೂ.20): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ 5ನೇ ಹಾಗೂ ನಿರ್ಣಾಯಕ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ ಕೇವಲ 3.3 ಓವರ್‌ಗಳನ್ನಷ್ಟೇ ಬೌಲಿಂಗ್ ಮಾಡಲು ಸಾಧ್ಯವಾಯಿತು. ಬೆಂಗಳೂರಿನಲ್ಲಿ ಬಿಟ್ಟೂಬಿಡದೇ ಸುರಿದ ಮಳೆಯಿಂದಾಗಿ ಪಂದ್ಯಗಳನ್ನು ರದ್ದುಗೊಳಿಸುವ ತೀರ್ಮಾನ ಮಾಡಲಾಯಿತು. ಆದರೆ ಇದೇ ಪಂದ್ಯದ ವೇಳೆ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್, ಸೆಲ್ಫಿ ತೆಗೆದುಕೊಳ್ಳಲು ಬಂದ ಮೈದಾನದ ಸಿಬ್ಬಂದಿಯ ಜತೆ ನಡೆದುಕೊಂಡ ರೀತಿಯ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಹೌದು, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಮಳೆಯ ಭೀತಿಯ ನಡುವೆಯೇ ಬ್ಯಾಟಿಂಗ್ ಆರಂಭಿಸಿತು. ಭಾರತ ತಂಡವು 3.3 ಓವರ್‌ಗಳಲ್ಲಿ 28 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಆರಂಭಿಕರಾದ ಇಶಾನ್ ಕಿಶನ್ ಹಾಗೂ ಋತುರಾಜ್ ಗಾಯಕ್ವಾಡ್ ಪೆವಿಲಿಯನ್ ಸೇರಿದ್ದರು. ಈ ವೇಳೆ ಮತ್ತೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಈ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನ ಗ್ರೌಂಡ್ ಸಿಬ್ಬಂದಿಯೊಬ್ಬರು ಡಗೌಟ್‌ನಲ್ಲಿ ವಿಕೆಟ್ ಒಪ್ಪಿಸಿ ಕುಳಿತಿದ್ದ ಋತುರಾಜ್ ಗಾಯಕ್ವಾಡ್ ಜತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಋತುರಾಜ್ ಗಾಯಕ್ವಾಡ್ ಆ ಗ್ರೌಂಡ್ ಸಿಬ್ಬಂದಿಯನ್ನು ದೂರ ಹೋಗುವಂತೆ ತಳ್ಳಿದ್ದಾರೆ ಇದರ ಜತೆಗೆ ಮುಖವನ್ನು ಮತ್ತೊಂದು ಕಡೆ ತಿರುಗಿಸಿಕೊಂಡಿದ್ದಾರೆ, ಗಾಯಕ್ವಾಡ್ ಅವರ ಈ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಕಟು ಟೀಕೆಗೆ ಗುರಿಯಾಗಿದೆ.
ಬಹುತೇಕ ನೆಟ್ಟಿಗರು ಋತುರಾಜ್ ಗಾಯಕ್ವಾಡ್, ಇನ್ನೊಬ್ಬ ವ್ಯಕ್ತಿಗೆ ಸೂಕ್ತ ಮರ್ಯಾದೆ ನೀಡದವ ಉನ್ನತ ಮಟ್ಟದ ಕ್ರಿಕೆಟ್ ಆಡಲು ಯೋಗ್ಯನಲ್ಲ ಎಂದಿದ್ದಾರೆ. ಮೈದಾನದ ಸಿಬ್ಬಂದಿಯ ಜತೆ ಋತುರಾಜ್ ಗಾಯಕ್ವಾಡ್ ಹೀಗೇಕೆ ವರ್ತಿಸಿದರು? ಒಂದು ಸೆಲ್ಫಿ ಕೇಳಿದಕ್ಕೆ ಈ ರೀತಿ ವರ್ತಿಸಬೇಕಿತ್ತೇ? ಜಂಟಲ್‌ಮನ್ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಈ ರೀತಿಯ ವರ್ತನೆ ಸರಿಯಲ್ಲ ಎಂದು ಮಹಾರಾಷ್ಟ್ರ ಮೂಲದ ಕ್ರಿಕೆಟಿಗನ ಕಿವಿ ಹಿಂಡಿದ್ದಾರೆ.
ಋತುರಾಜ್ ಗಾಯಕ್ವಾಡ್, ಗ್ರೌಂಡ್ ಸಿಬ್ಬಂದಿಗೆ ಅವಮಾನ ಮಾಡಿದ್ದಾರೆ. ಈ ರೀತಿಯ ವರ್ತನೆ ಸರಿಯಲ್ಲ. ನೀವು ಮೊದಲು ಇತರರಿಗೆ ಗೌರವ ಕೊಡುವುದನ್ನು ಕಲಿಯಿರಿ. ನೆನಪಿರಲಿ ಈ ಬಾರಿ ಬಯೋಬಬಲ್‌ನಲ್ಲಿ ಈ ಸರಣಿ ಆಯೋಜನೆಗೊಂಡಿಲ್ಲವೆಂದು ಎಂದು ವಿಕಿ ಶಿಂಧೆ ಎನ್ನುವವರು ಟ್ವೀಟ್ ಮಾಡಿದ್ದಾರೆ.
Ind vs SA T20I: ಬೆಂಗಳೂರು ಪಂದ್ಯದ ಟಿಕೆಟ್ ಹಣ 50% ವಾಪಾಸ್..!
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5ನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಕೇವಲ 10 ರನ್ ಗಳಿಸಲಷ್ಟೇ ಶಕ್ತರಾದರು. ಇನಿಂಗ್ಸ್‌ನ 4ನೇ ಓವರ್‌ನಲ್ಲಿ ಲುಂಗಿ ಎಂಗಿಡಿ ಬೌಲಿಂಗ್‌ನಲ್ಲಿ ಋತುರಾಜ್ ಗಾಯಕ್ವಾಡ್ ವಿಕೆಟ್ ಕೈಚೆಲ್ಲಿದ್ದರು. ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಋತುರಾಜ್ ಗಾಯಕ್ವಾಡ್ ಒಂದು ಅರ್ಧಶತಕ ಸಹಿತ ಕೇವಲ 96 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯವನ್ನು ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳಲ್ಲೂ ಗಾಯಕ್ವಾಡ್ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.