Ind vs Eng Test Series: ಮುಂದುವರಿಯುತ್ತಾ ಭಾರತದ ಜಯದ ಓಟ?

By Kannadaprabha NewsFirst Published Jan 24, 2024, 10:13 AM IST
Highlights

ಸದ್ಯ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂ.2 ಸ್ಥಾನದಲ್ಲಿರುವ ಟೀಂ ಇಂಡಿಯಾ ಕಳೆದ 11 ವರ್ಷಗಳಿಂದಲೂ ತವರಿನಲ್ಲಿ ಅಜೇಯವಾಗಿದ್ದು, ಯಾವುದೇ ಟೆಸ್ಟ್‌ ಸರಣಿ ಸೋತಿಲ್ಲ. ಯಾವುದೇ ಸರಣಿ ಡ್ರಾ ಆಗಿಲ್ಲ ಎನ್ನುವುದೂ ಗಮನಾರ್ಹ. ಈ ಅವಧಿಯಲ್ಲಿ ಆಡಿರುವ 16 ಟೆಸ್ಟ್‌ ಸರಣಿಗಳಲ್ಲೂ ಪ್ರವಾಸಿ ತಂಡದ ಸಂಹಾರಗೈದು ಭಾರತವೇ ಗೆದ್ದು ಬೀಗಿದೆ.

ಹೈದರಾಬಾದ್(ಜ.24): ವಿದೇಶಿ ತಂಡಗಳು ಭಾರತಕ್ಕೆ ಬಂದು ಟಿ20, ಏಕದಿನ ಪಂದ್ಯ, ಸರಣಿಗಳನ್ನು ಗೆಲ್ಲಬಹುದು. ಅಷ್ಟೇ ಏಕೆ ವಿಶ್ವಕಪ್‌ ಕೂಡಾ ಗೆದ್ದು ಬೀಗಬಹುದು. ಆದರೆ ಭಾರತದ ವಿರುದ್ಧ ಭಾರತದಲ್ಲೇ ಟೆಸ್ಟ್‌ ಸರಣಿ ಗೆಲ್ಲುವುದು ಮಾತ್ರ ಎಷ್ಟೇ ಬಲಿಷ್ಠ ತಂಡಗಳಿಗೂ ಕನಸಿದ್ದಂತೆ. ಅದನ್ನು ಸಾಧಿಸಲೆಂದು ಕಳೆದೊಂದು ದಶಕದಿಂದ ಭಾರತಕ್ಕೆ ಆಗಮಿಸಿರುವ ತಂಡಗಳೆಲ್ಲಾ ಬರಿಗೈಲಿ ಹಿಂದಿರುಗಿವೆ. ಗುರುವಾರದಿಂದ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿ ಆರಂಭಗೊಳ್ಳಲಿದ್ದು, ಮತ್ತೊಮ್ಮೆ ತವರಿನಲ್ಲಿ ದಿಗ್ವಿಜಯ ಸಾಧಿಸಲು ರೋಹಿತ್‌ ಪಡೆ ಕಾತರದಲ್ಲಿದೆ.

ಸದ್ಯ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂ.2 ಸ್ಥಾನದಲ್ಲಿರುವ ಟೀಂ ಇಂಡಿಯಾ ಕಳೆದ 11 ವರ್ಷಗಳಿಂದಲೂ ತವರಿನಲ್ಲಿ ಅಜೇಯವಾಗಿದ್ದು, ಯಾವುದೇ ಟೆಸ್ಟ್‌ ಸರಣಿ ಸೋತಿಲ್ಲ. ಯಾವುದೇ ಸರಣಿ ಡ್ರಾ ಆಗಿಲ್ಲ ಎನ್ನುವುದೂ ಗಮನಾರ್ಹ. ಈ ಅವಧಿಯಲ್ಲಿ ಆಡಿರುವ 16 ಟೆಸ್ಟ್‌ ಸರಣಿಗಳಲ್ಲೂ ಪ್ರವಾಸಿ ತಂಡದ ಸಂಹಾರಗೈದು ಭಾರತವೇ ಗೆದ್ದು ಬೀಗಿದೆ. ಭಾರತ ಹೊರತುಪಡಿಸಿ ಯಾವುದೇ ತಂಡ ತವರಿನಲ್ಲಿ 10ಕ್ಕಿಂತ ಹೆಚ್ಚು ಸರಣಿಗಳಲ್ಲಿ ಅಜೇಯವಾಗಿ ಉಳಿದ ಚರಿತ್ರೆ ಇಲ್ಲ. 1994-2000 ಹಾಗೂ 2004-2008ರ 2 ಅವಧಿಗಳಲ್ಲಿ ಆಸ್ಟ್ರೇಲಿಯಾ ತವರಿನಲ್ಲಿ ತಲಾ 10 ಸರಣಿಗಳಲ್ಲಿ ಗೆದ್ದಿತ್ತು.

ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳಾಪಟ್ಟಿ ಪ್ರಕಟ: ಬೆಂಗಳೂರು ಕ್ರಿಕೆಟ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್..!

ಇಂಗ್ಲೆಂಡ್‌ ವಿರುದ್ಧವೇ ಸೋಲು: ಭಾರತ ತಂಡ ತವರಿನಲ್ಲಿ ಕೊನೆ ಬಾರಿ ಸರಣಿ ಸೋತಿದ್ದು 2012ರಲ್ಲಿ. ಅದೂ ಕೂಡಾ ಇಂಗ್ಲೆಂಡ್‌ ವಿರುದ್ಧವೇ. 4 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಇಂಗ್ಲೆಂಡ್‌ ಗೆದ್ದುಕೊಂಡಿತ್ತು.ಆ ಬಳಿಕ 2 ಬಾರಿ ಇಂಗ್ಲೆಂಡ್‌ ತಂಡ ಭಾರತದಲ್ಲಿ ಟೆಸ್ಟ್‌ ಸರಣಿ ಆಡಿದ್ದು, 2ರಲ್ಲೂ ಸೋತಿದೆ. ಸದ್ಯ ಇಂಗ್ಲೆಂಡ್‌ ಮತ್ತೆ ಭಾರತ ಪ್ರವಾಸ ಕೈಗೊಂಡಿದ್ದು, ಗುರುವಾರದಿಂದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಣಕ್ಕಿಳಿಯಲಿದೆ. 2012ರ ಸರಣಿಯಂತೆಯೇ ಭಾರತಕ್ಕೆ ಅದರ ತವರಿನಲ್ಲೇ ಶಾಕ್ ನೀಡುವ ಗುರಿ ಇಂಗ್ಲೆಂಡ್‌ನದ್ದು.

ಭಾರತದಲ್ಲಿ 5 ಸರಣಿ ಗೆದ್ದಿರುವ ಇಂಗ್ಲೆಂಡ್‌!

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿಗೆ 9 ದಶಕಗಳ ಇತಿಹಾಸವಿದೆ. ಇತ್ತಂಡಗಳ ನಡುವೆ 1933ರಿಂದ ಭಾರತದಲ್ಲಿ 16 ಟೆಸ್ಟ್‌ ಸರಣಿಗಳು ಆಯೋಜನೆಗೊಂಡಿವೆ. ಈ ಪೈಕಿ ಭಾರತ 8 ಸರಣಿಗಳಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್‌ಗೆ 5ರಲ್ಲಿ ಜಯ ಲಭಿಸಿದೆ. ಉಳಿದ 3 ಸರಣಿಗಳು ಡ್ರಾಗೊಂಡಿವೆ.

ಇಂಡಿಯಾ-ಇಂಗ್ಲೆಂಡ್ ಟೆಸ್ಟ್ ಸಮರ: ಕೊಹ್ಲಿ ಅಲಭ್ಯತೆ ಇಂಗ್ಲೆಂಡ್​ ಪಾಲಿಗೆ ವರ..!

ಯಾರ ವಿರುದ್ಧ ಎಷ್ಟು ಜಯ?

ಭಾರತ ಕಳೆದ 11 ವರ್ಷದಲ್ಲಿ ಒಟ್ಟು 8 ತಂಡಗಳ ವಿರುದ್ಧ 16 ಸರಣಿಗಳಲ್ಲಿ ಜಯಭೇರಿ ಬಾರಿಸಿದೆ. ಈ ಪೈಕಿ ಆಸ್ಟ್ರೇಲಿಯಾ ವಿರುದ್ಧ 3, ಶ್ರೀಲಂಕಾ, ನ್ಯೂಜಿಲೆಂಡ್‌, ಇಂಗ್ಲೆಂಡ್‌, ಬಾಂಗ್ಲಾದೇಶ, ದ.ಆಫ್ರಿಕಾ, ವೆಸ್ಟ್‌ಇಂಡೀಸ್‌ ವಿರುದ್ಧ ತಲಾ 2 ಸರಣಿ, ಅಫ್ಘಾನಿಸ್ತಾನ ವಿರುದ್ಧ 1 ಸರಣಿ ಗೆದ್ದಿದೆ.
 

click me!