ಚೇತೇಶ್ವರ್ ಪೂಜಾರ 100ನೇ ಟೆಸ್ಟ್: ಈ ಐತಿಹಾಸಿಕ ಸಾಧನೆ ಮಾಡಲು ಪೂಜಾರಗೆ ಗವಾಸ್ಕರ್ ಶುಭ ಹಾರೈಕೆ

By Naveen KodaseFirst Published Feb 17, 2023, 11:11 AM IST
Highlights

100 ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಚೇತೇಶ್ವರ್ ಪೂಜಾರ
ಡೆಲ್ಲಿಯಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್‌ ಸರಣಿಯ ಎರಡನೇ ಪಂದ್ಯ
ಚೇತೇಶ್ವರ್ ಪೂಜಾರಗೆ ವಿಶೇಷ ಸಂದೇಶ ರವಾನಿಸಿದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್

ದೆಹಲಿ(ಫೆ.17): ಭಾರತ ಕ್ರಿಕೆಟ್‌ ತಂಡದ ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ತಮ್ಮ ಕ್ರಿಕೆಟ್‌ ವೃತ್ತಿಜೀವನದ 100ನೇ ಟೆಸ್ಟ್‌ ಪಂದ್ಯವನ್ನಾಡುತ್ತಿದ್ದಾರೆ. 35 ವರ್ಷದ ಸೌರಾಷ್ಟ್ರ ಮೂಲದ ಪೂಜಾರ, 100 ಟೆಸ್ಟ್‌ ಪಂದ್ಯವನ್ನಾಡಿದ ಭಾರತೀಯ ಆಟಗಾರರ ಪೈಕಿ 13ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಡೆಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಚೇತೇಶ್ವರ್ ಪೂಜಾರ ಅವರಿಗೆ ಕ್ರಿಕೆಟ್‌ ದಿಗ್ಗಜ ಸುನಿಲ್‌ ಗವಾಸ್ಕರ್‌ ವಿಶೇಷ ಕ್ಯಾಪ್ ನೀಡುವ ಮೂಲಕ ಗೌರವಿಸಿದರು.

ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಎರಡನೇ ಪಂದ್ಯವು ಚೇತೇಶ್ವರ್ ಪೂಜಾರ ಪಾಲಿಗೆ 100ನೇ ಟೆಸ್ಟ್‌ ಪಂದ್ಯ ಎನಿಸಿಕೊಂಡಿದೆ. ಕಳೆದ ಒಂದು ದಶಕದಿಂದ ಚೇತೇಶ್ವರ್ ಪೂಜಾರ, ಭಾರತ ಟೆಸ್ಟ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ತವರು ಹಾಗೂ ತವರಿನಾಚೆ ಟೀಂ ಇಂಡಿಯಾದ ಸ್ಮರಣೀಯ ಗೆಲುವಿನಲ್ಲಿ ಚೇತೇಶ್ವರ್ ಪೂಜಾರ ಮಹತ್ತರ ಪಾತ್ರವನ್ನು ನಿಭಾಯಿಸಿದ್ದಾರೆ. 

ಚೇತೇಶ್ವರ್ ಪೂಜಾರ, 100ನೇ ಟೆಸ್ಟ್‌ ಪಂದ್ಯವನ್ನಾಡಲು ಕಣಕ್ಕಿಳಿಯುವ ಮುನ್ನ ಅವರಿಗೆ ಕ್ರಿಕೆಟ್ ದಿಗ್ಗಜ ಸುನಿಲ್‌ ಗವಾಸ್ಕರ್ ವಿಶೇಷ ಕ್ಯಾಪ್ ನೀಡುವ ಮೂಲಕ ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, " ನಾವೆಲ್ಲ ಚಿಕ್ಕವರಿದ್ದಾಗ, ರಸ್ತೆಯ ಗಲ್ಲಿಗಳಲ್ಲಿ ಹಾಗೂ ಮೈದಾನಗಳಲ್ಲಿ ಕ್ರಿಕೆಟ್ ಆಡುವಾಗ, ನಾವೆಲ್ಲರೂ ಒಂದಲ್ಲ ಒಂದು ದಿನ ಭಾರತಕ್ಕಾಗಿ ಆಡಬೇಕು ಎಂದು ಕನಸು ಕಾಣುತ್ತಿದ್ದೆವು. ಇದೊಂದು ರೀತಿ ಅವಿಸ್ಮರಣೀಯ ಕ್ಷಣ. ಯಾಕೆಂದರೆ ನೀವು ಪದೇ ಪದೇ ದೇಶವನ್ನು ಪ್ರತಿನಿಧಿಸುತ್ತಾ ಬಂದಿದ್ದೀರ. ಈ ರೀತಿ ಸಾಧನೆ ಮಾಡಲು ನಿಮಗೆ ಕಠಿಣ ಪರಿಶ್ರಮ, ಕ್ರೀಡೆಯ ಬಗ್ಗೆ ಬದ್ದತೆ, ಆತ್ಮವಿಶ್ವಾಸ ಹಾಗೂ ಏಕಾಗ್ರತೆ ಬೇಕಾಗುತ್ತದೆ. ನೀವು ಬ್ಯಾಟಿಂಗ್‌ ಮಾಡಲು ಮೈದಾನಕ್ಕಿಳಿಯುತ್ತೀರ ಎಂದರೆ, ದೇಶದ ಬಾವುಟವನ್ನು ಕೈಯಲ್ಲಿ ಹಿಡಿದುಕೊಂಡು ಹೋದಂತೆ. ನೀವು ದೇಶಕ್ಕಾಗಿ ಮೈಯೊಡ್ಡಿ ಆಡಿದ್ದೀರಾ ಎಂದು ಗವಾಸ್ಕರ್‌, ಪೂಜಾರ ಗುಣಗಾನ ಮಾಡಿದ್ದಾರೆ.

Delhi Test: ಭಾರತ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ; ಟೀಂ ಇಂಡಿಯಾ ಒಂದು, ಆಸೀಸ್‌ನಲ್ಲಿ 2 ಬದಲಾವಣೆ.

𝗔 𝗺𝗼𝗺𝗲𝗻𝘁 𝘁𝗼 𝗰𝗵𝗲𝗿𝗶𝘀𝗵! 💯

Golden words from the legendary Sunil Gavaskar as he felicitates on his landmark 100th Test 👏🏻👏🏻 | | pic.twitter.com/AqVs6JLO2n

— BCCI (@BCCI)

"ನೀವು ಸಾಕಷ್ಟು ಪೆಟ್ಟು ತಿಂದಿದ್ದೀರ ಹಾಗೆಯೇ ನಿಮ್ಮ ವಿಕೆಟ್ ಪಡೆಯಲು ಬೌಲರ್‌ಗಳು ಸಾಕಷ್ಟು ಪರದಾಡುವಂತೆ ಮಾಡಿದ್ದೀರ. ನೀವು ಗಳಿಸುವ ಪ್ರತಿಯೊಂದು ರನ್‌ ಕೂಡಾ ಭಾರತ ತಂಡದ ಪಾಲಿಗೆ ದೊಡ್ಡ ಅನುಕೂಲ. ಕಠಿಣ ಪರಿಶ್ರಮಗಳಿಗೆ, ದೇಶಕ್ಕಾಗಿ ಆಡುವ ಕನಸು ಕಾಣುವವರಿಗೆ ಹಾಗೂ ತಮ್ಮ ಮೇಲೆ ಸ್ವಯಂ ನಂಬಿಕೆಯಿಟ್ಟು ಆಡುವ ಪ್ರತಿಯೊಬ್ಬ ಯುವ ಪ್ರತಿಭೆಗಳಿಗೆ ನೀವು ರೋಲ್ ಮಾಡೆಲ್ ಆಗಿದ್ದೀರ. 100 ಟೆಸ್ಟ್‌ ಮ್ಯಾಚ್‌ ಕ್ಲಬ್‌ಗೆ ನಿಮಗೆ ಆತ್ಮೀಯ ಸ್ವಾಗತ. ನೀವು 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗರಾಗಿ ಎಂದು ಹಾರೈಸುತ್ತೇನೆ. ಈ ಮೂಲಕ ಭಾರತ ಡೆಲ್ಲಿಯಲ್ಲಿ ಮತ್ತೊಂದು ದೊಡ್ಡ ಗೆಲುವು ಸಾಧಿಸುವಂತಾಗಲಿ" ಎಂದು ಸುನಿಲ್ ಗವಾಸ್ಕರ್ ಶುಭ ಹಾರೈಸಿದ್ದಾರೆ.

ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ರವೀಂದ್ರ ಜಡೇಜಾ, ಕೆ ಎಸ್ ಭರತ್‌, ರವಿಚಂದ್ರನ್ ಅಶ್ವಿನ್‌, ಅಕ್ಷರ್‌ ಪಟೇಲ್, ಮೊಹಮದ್‌ ಶಮಿ, ಮೊಹಮ್ಮದ್ ಸಿರಾಜ್ ಸಿರಾಜ್‌.

ಆಸ್ಪ್ರೇಲಿಯಾ: ಡೇವಿಡ್ ವಾರ್ನರ್‌, ಉಸ್ಮಾನ್‌ ಖವಾಜ, ಮಾರ್ನಸ್‌ ಲಬುಶೇನ್‌, ಸ್ಟೀವ್ ಸ್ಮಿತ್‌, ಪೀಟರ್ ಹ್ಯಾಂಡ್ಸ್‌ಕಂಬ್‌, ಟ್ರಾವಿಸ್ ಹೆಡ್, ಅಲೆಕ್ಸ್ ಕೇರಿ, ಪ್ಯಾಟ್ ಕಮಿನ್ಸ್‌(ನಾಯಕ), ಮ್ಯಾಥ್ಯೂ ಕುನ್ಹೇಮನ್, ಟೋಡ್‌ ಮರ್ಫಿ, ನೇಥನ್ ಲಯನ್‌.
 

click me!