
ನವದೆಹಲಿ(ಫೆ.17): ಮೊದಲ ಪಂದ್ಯದಲ್ಲೇ ಆಸ್ಪ್ರೇಲಿಯಾವನ್ನು ಹೊಸಕಿ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿರುವ ಭಾರತ, ಶುಕ್ರವಾರದಿಂದ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿ, 2-0 ಮುನ್ನಡೆ ಪಡೆಯುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಕಾತರಿಸುತ್ತಿದೆ.
ಉಭಯ ದೇಶಗಳ ನಡುವೆ ಬಾರ್ಡರ್-ಗವಾಸ್ಕರ್ ಟೂರ್ನಿ ಆರಂಭಗೊಂಡಿದ್ದು ಇದೇ ಮೈದಾನದಲ್ಲಿ. 1996ರಲ್ಲಿ ಮೊದಲ ಪಂದ್ಯ ನಡೆದಿತ್ತು. ಇದೀಗ ದೆಹಲಿಯಲ್ಲೇ ಆಸೀಸ್‌ಗೆ ಮತ್ತೊಂದು ಸೋಲುಣಿಸುವ ಅವಕಾಶ ಭಾರತ ತಂಡಕ್ಕೆ ಸಿಕ್ಕಿದೆ.
ಮೊದಲ ಪಂದ್ಯದಲ್ಲಿ ಭಾರತದ ಪ್ರದರ್ಶನ ಸಹಜವಾಗಿಯೇ ಪ್ರವಾಸಿಗರಲ್ಲಿ ನಡುಕ ಹುಟ್ಟಿಸಿದ್ದು, ಭಯದಲ್ಲೇ ಆಸೀಸ್ ಮತ್ತೊಂದು ಪಂದ್ಯ ಕೈಚೆಲ್ಲಿದರೆ ಆಶ್ಚರ್ಯವಿಲ್ಲ. ನಾಗ್ಪುರದಂತೆಯೇ ಇಲ್ಲಿಯೂ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಸ್ಪ್ರೇಲಿಯಾ ಸಾಹಸ ಪ್ರದರ್ಶಿಸಬೇಕಿದೆ.
ಭಾರತ ತಂಡವೂ ಪರಿಪೂರ್ಣವಾಗಿಲ್ಲ. ಅಗ್ರ ಕ್ರಮಾಂಕದ ಸಮಸ್ಯೆ ಇದ್ದೇ ಇದೆ. ಕೆ.ಎಲ್.ರಾಹುಲ್‌ರ ಬ್ಯಾಟ್‌ನಿಂದ ರನ್ ಬರುತ್ತಿಲ್ಲ. ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಸ್ಥಿರತೆ ಕಾಯ್ದುಕೊಳ್ಳಲು ವಿಫಲರಾಗುತ್ತಿದ್ದಾರೆ. ಹೀಗಿದ್ದರೂ, ರೋಹಿತ್ ಶರ್ಮಾರ ಶತಕ, ಸ್ಪಿನ್ನರ್‌ಗಳ ಭರ್ಜರಿ ಬ್ಯಾಟಿಂಗ್‌ನಿಂದ ಭಾರತ ನಾಗ್ಪುರ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಿತ್ತು. ಈ ಪಂದ್ಯದಲ್ಲಿ ರಾಹುಲ್‌ಗೆ ಮತ್ತೊಂದು ಅವಕಾಶ ಸಿಗುತ್ತದೆಯೇ ಅಥವಾ ಪ್ರಚಂಡ ಲಯದಲ್ಲಿರುವ ಶುಭ್‌ಮನ್ ಗಿಲ್‌ರನ್ನು ಆಡಿಸಲಾಗುತ್ತದೆಯೇ ಎನ್ನುವ ಕುತೂಹಲವಿದೆ.
ಸೂರ್ಯಕುಮಾರ್ ಬದಲಿಗೆ ಶ್ರೇಯಸ್ ಅಯ್ಯರ್ ಹನ್ನೊಂದರ ಬಳಗದಲ್ಲಿ ಆಡುವುದು ಬಹುತೇಕ ಖಚಿತವಾಗಿದ್ದು, ಮಧ್ಯಮ ಕ್ರಮಾಂಕಕ್ಕೆ ಇನ್ನಷ್ಟುಬಲ ನೀಡಲಿದೆ. ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಈ ಮೈದಾನದಲ್ಲಿ ಅಮೋಘ ದಾಖಲೆ ಹೊಂದಿದ್ದಾರೆ. ಇವರಿಬ್ಬರ ತಮ್ಮ ಲಯ ಮುಂದುವರಿಸಿದರೆ, ಆಸ್ಪ್ರೇಲಿಯಾ ಸೋಲಿನಿಂದ ಪಾರಾಗಲು ಪವಾಡ ಸೃಷ್ಟಿಸಬೇಕು.
ಇಲ್ಲಿ ಕೊನೆ ಬಾರಿ 2017ರಲ್ಲಿ ಟೆಸ್ಟ್ ನಡೆದಾಗ, ಶ್ರೀಲಂಕಾ 2ನೇ ಇನ್ನಿಂಗ್ಸಲ್ಲಿ 100 ಓವರ್‌ಗೂ ಹೆಚ್ಚು ಬ್ಯಾಟ್ ಮಾಡಿ ಡ್ರಾ ಸಾಧಿಸಿತ್ತು. ಆಸ್ಪ್ರೇಲಿಯಾಗೆ ಆ ರೀತಿಯ ಸಾಮರ್ಥ್ಯವಿಲ್ಲ ಎಂದೇನಿಲ್ಲ. ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಬುಶೇನ್‌ಗೆ ತಂಡದ ಉಳಿದ ಬ್ಯಾಟರ್‌ಗಳು ಸೂಕ್ತ ಬೆಂಬಲ ನೀಡಬೇಕಿದೆ.
ಇದರ ಜೊತೆಗೆ ತಂಡಕ್ಕೆ ಆಯ್ಕೆ ಗೊಂದಲವೂ ಶುರುವಾಗಿದೆ. ಟ್ರ್ಯಾವಿಸ್ ಹೆಡ್‌ರನ್ನು ಆಡಿಸುವಂತೆ ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗರು ಮಾಧ್ಯಮಗಳ ಮೂಲಕ ಒತ್ತಾಯಿಸುತ್ತಿದ್ದಾರೆ. ವಾರ್ನರ್‌ರನ್ನು ಬಿಟ್ಟು ಟ್ರ್ಯಾವಿಸ್‌ರನ್ನೇ ಆರಂಭಿಕನ್ನನಾಗಿ ಆಡಿಸುವ ಸಾಧ್ಯತೆ ಇದೆ. ಆಲ್ರೌಂಡರ್ ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್ ಸ್ಥಾನ ಪಡೆಯುವ ನಿರೀಕ್ಷೆಯೂ ಇದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್(ನಾಯಕ), ರಾಹುಲ್, ಪೂಜಾರ, ಕೊಹ್ಲಿ, ಶ್ರೇಯಸ್, ಜಡೇಜಾ, ಭರತ್, ಅಶ್ವಿನ್, ಅಕ್ಷರ್, ಮೊಹಮದ್ ಶಮಿ, ಸಿರಾಜ್.
ಆಸ್ಪ್ರೇಲಿಯಾ: ವಾರ್ನರ್, ಖವಾಜ, ಲಬುಶೇನ್, ಸ್ಮಿತ್, ಹ್ಯಾಂಡ್‌್ಸಕಂಬ್, ರೆನ್ಶಾ/ಗ್ರೀನ್, ಕೇರ್ರಿ, ಕಮಿನ್ಸ್(ನಾಯಕ), ಸ್ಟಾರ್ಕ್, ಮರ್ಫಿ, ಲಯನ್.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಚ್
ಪಿಚ್ ಈಗಾಗಲೇ ಬಳಕೆಯಾದಂತೆ ಕಾಣುತ್ತಿದ್ದು, ಮೊದಲ ದಿನದ ಮೊದಲ ಅವಧಿಯಲ್ಲಿ ವೇಗಿಗಳಿಗೆ ನೆರವು ಸಿಗಬಹುದು. ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಚೆಂಡು ಎಷ್ಟುಸ್ಪಿನ್ ಆಗಲಿದೆ, ಎಷ್ಟುಬೇಗ ಸ್ಪಿನ್ನರ್‌ಗಳಿಗೆ ನೆರವು ಸಿಗಲಿದೆ ಎನ್ನುವುದಷ್ಟೇ ಕುತೂಹಲ. ಈ ಪಂದ್ಯವೂ ಮೂರೇ ದಿನಕ್ಕೆ ಮುಗಿದರೆ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಚೇತೇಶ್ವರ್ ಪೂಜಾರಗೆ 100ನೇ ಟೆಸ್ಟ್ ಸಂಭ್ರಮ!
ಭಾರತದ ಬ್ಯಾಟರ್ ಚೇತೇಶ್ವರ್ ಪೂಜಾರ 100ನೇ ಟೆಸ್ಟ್ ಪಂದ್ಯವಾಡಲು ಸಜ್ಜಾಗಿದ್ದಾರೆ. ಭಾರತ ಪರ 100 ಟೆಸ್ಟ್ ಆಡಿದ 13ನೇ ಆಟಗಾರ ಎನ್ನುವ ಹಿರಿಮೆಗೆ ಅವರು ಪಾತ್ರರಾಗಲಿದ್ದಾರೆ. ಸದ್ಯ 99 ಟೆಸ್ಟ್‌ಗಳಲ್ಲಿ 44.15ರ ಸರಾಸರಿಯಲ್ಲಿ 7021 ರನ್ ಕಲೆಹಾಕಿದ್ದಾರೆ. 19 ಶತಕ, 34 ಅರ್ಧಶತಕ ದಾಖಲಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.