
ದೆಹಲಿ(ಫೆ.17): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದರೇ, ಆಸ್ಟ್ರೇಲಿಯಾ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ.
ಹೌದು, ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಅರುಣ್ ಜೇಟ್ಲಿ ಮೈದಾನ ಆತಿಥ್ಯವನ್ನು ವಹಿಸಿದೆ. ಆಸ್ಟ್ರೇಲಿಯಾ ತಂಡದಲ್ಲಿ ಮ್ಯಾಟ್ ರೆನ್‌ಶೋ ಬದಲಿಗೆ ಟ್ರಾವಿಸ್ ಹೆಡ್ ತಂಡ ಕೂಡಿಕೊಂಡಿದ್ದಾರೆ. ಇನ್ನು ವೇಗಿ ಸ್ಕಾಟ್ ಬೋಲೆಂಡ್ ಬದಲಿಗೆ ಸ್ಪಿನ್ನರ್ ಮ್ಯಾಥ್ಯೂ ಕುನ್ಹೇನ್‌ಮನ್ ತಂಡ ಕೂಡಿಕೊಂಡಿದ್ದಾರೆ. ಮೇಲ್ನೋಟಕ್ಕೆ ಸ್ಪಿನ್ ಸ್ನೇಹಿ ಪಿಚ್ ಎನಿಸಿಕೊಂಡಿರುವ ಡೆಲ್ಲಿಯಲ್ಲಿ ಆಸ್ಟ್ರೇಲಿಯಾ ತಂಡವು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಕಳೆದ ಪಂದ್ಯದಲ್ಲಿ ಟೋಡ್ ಮೋರ್ಫಿ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ 7 ವಿಕೆಟ್ ಕಬಳಿಸಿ ಮಿಂಚಿದ್ದರು.
ಒಂದೇ ವೇಗಿ ಮೂವರು ತಜ್ಞ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದ ಆಸ್ಟ್ರೇಲಿಯಾ: ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಭಾರತದ ಸ್ಪಿನ್ ಜಾಲಕ್ಕೆ ಸಿಲುಕಿ ತತ್ತರಿಸಿ ಹೋಗಿತ್ತು. ಹೀಗಾಗಿ ಡೆಲ್ಲಿ ಪಿಚ್ ಸ್ಪಿನ್ ಸ್ನೇಹಿ ಪಿಚ್ ಎನಿಸಿಕೊಂಡಿರುವುದರಿಂದ ಆಸ್ಟ್ರೇಲಿಯಾ ತಂಡವು ಕೇವಲ ಓರ್ವ ವೇಗಿ ಹಾಗೂ ಮೂವರು ತಜ್ಞ ಸ್ಪಿನ್ನರ್‌ಗಳೊಂದಿಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದೆ.
Delhi Test: ಇಂದಿನಿಂದ ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್
ಇನ್ನು ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ತಂಡ ಕೂಡಿಕೊಂಡಿದ್ದಾರೆ. ಇನ್ನುಳಿದಂತೆ ಭಾರತ ತಂಡದಲ್ಲಿ ಮತ್ತೆ ಯಾವ ಬದಲಾವಣೆಯೂ ಆಗಿಲ್ಲ. ಕೆ ಎಲ್ ರಾಹುಲ್ ಬದಲಿಗೆ ಶುಭ್‌ಮನ್ ಗಿಲ್ ಕಣಕ್ಕಿಳಿಯಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ.
ಚೇತೇಶ್ವರ್ ಪೂಜಾರಗೆ 100ನೇ ಟೆಸ್ಟ್ ಸಂಭ್ರಮ!
ಭಾರತದ ಬ್ಯಾಟರ್ ಚೇತೇಶ್ವರ್ ಪೂಜಾರ 100ನೇ ಟೆಸ್ಟ್ ಪಂದ್ಯವಾಡುತ್ತಿದ್ದಾರೆ. ಭಾರತ ಪರ 100 ಟೆಸ್ಟ್ ಆಡಿದ 13ನೇ ಆಟಗಾರ ಎನ್ನುವ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಸದ್ಯ 99 ಟೆಸ್ಟ್‌ಗಳಲ್ಲಿ 44.15ರ ಸರಾಸರಿಯಲ್ಲಿ 7021 ರನ್ ಕಲೆಹಾಕಿದ್ದಾರೆ. 19 ಶತಕ, 34 ಅರ್ಧಶತಕ ದಾಖಲಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ಚೇತೇಶ್ವರ್ ಪೂಜಾರಗೆ ವಿಶೇಷ ಕ್ಯಾಪ್ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಚೇತೇಶ್ವರ್ ಪೂಜಾರ ಕುಟುಂಬಸ್ಥರು ಹಾಜರಿದ್ದರು.
ತಂಡಗಳು ಹೀಗಿವೆ ನೋಡಿ
ಭಾರತ: ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕೆ ಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮದ್ ಶಮಿ, ಮೊಹಮ್ಮದ್ ಸಿರಾಜ್ ಸಿರಾಜ್.
ಆಸ್ಪ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್, ಅಲೆಕ್ಸ್ ಕೇರಿ, ಪ್ಯಾಟ್ ಕಮಿನ್ಸ್(ನಾಯಕ), ಮ್ಯಾಥ್ಯೂ ಕುನ್ಹೇಮನ್, ಟೋಡ್ ಮರ್ಫಿ, ನೇಥನ್ ಲಯನ್.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಚ್
ಪಿಚ್ ಈಗಾಗಲೇ ಬಳಕೆಯಾದಂತೆ ಕಾಣುತ್ತಿದ್ದು, ಮೊದಲ ದಿನದ ಮೊದಲ ಅವಧಿಯಲ್ಲಿ ವೇಗಿಗಳಿಗೆ ನೆರವು ಸಿಗಬಹುದು. ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಚೆಂಡು ಎಷ್ಟುಸ್ಪಿನ್ ಆಗಲಿದೆ, ಎಷ್ಟುಬೇಗ ಸ್ಪಿನ್ನರ್‌ಗಳಿಗೆ ನೆರವು ಸಿಗಲಿದೆ ಎನ್ನುವುದಷ್ಟೇ ಕುತೂಹಲ. ಈ ಪಂದ್ಯವೂ ಮೂರೇ ದಿನಕ್ಕೆ ಮುಗಿದರೆ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.