ಇಂದು ಭಾರತ vs ಆಸ್ಟ್ರೇಲಿಯಾ ಮೆಗಾ ಫೈನಲ್ ಫೈಟ್..! ಟ್ರೋಫಿಗಾಗಿ ಮದಗಜಗಳ ಕಾಳಗ

Published : Nov 19, 2023, 11:13 AM IST
ಇಂದು ಭಾರತ vs ಆಸ್ಟ್ರೇಲಿಯಾ ಮೆಗಾ ಫೈನಲ್ ಫೈಟ್..! ಟ್ರೋಫಿಗಾಗಿ ಮದಗಜಗಳ ಕಾಳಗ

ಸಾರಾಂಶ

ಅ.5ರಂದು ಇದೇ ಕ್ರೀಡಾಂಗಣದಲ್ಲಿ ಶುರುವಾಗಿದ್ದ ಜಾಗತಿಕ ಕ್ರಿಕೆಟ್ ಹಬ್ಬಕ್ಕೆ ಭಾನುವಾರ ತೆರೆ ಬೀಳಲಿದೆ. ಟೂರ್ನಿಯುದ್ದಕ್ಕೂ ಅಬ್ಬರಿಸಿ ಬೊಬ್ಬರಿದಿರುವ ಟೀಂ ಇಂಡಿಯಾ 4ನೇ ವಿಶ್ವಕಪ್ ಫೈನಲ್ ಆಡುತ್ತಿದ್ದು, 3ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳಲು ಕಾತರಿಸುತ್ತಿದೆ.

ಅಹಮದಾಬಾದ್(ನ.19): ಕೋಟ್ಯಂತರ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ಗೆ ವೇದಿಕೆ ಸಜ್ಜಾಗಿದ್ದು, ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ವಿಶ್ವಕಪ್‌ನ ಶ್ರೇಷ್ಠ ತಂಡವೆನಿಸಿರುವ ಭಾರತ ಹಾಗೂ ವಿಶ್ವಕಪ್ ಇತಿಹಾಸದಲ್ಲೇ ಶ್ರೇಷ್ಠ ತಂಡವೆನಿಸಿರುವ ಆಸ್ಟ್ರೇಲಿಯಾ ಜಿದ್ದಾಜಿದ್ದಿನ ಸೆಣಸಾಟ ನಡೆಸಲಿವೆ. 

ಅ.5ರಂದು ಇದೇ ಕ್ರೀಡಾಂಗಣದಲ್ಲಿ ಶುರುವಾಗಿದ್ದ ಜಾಗತಿಕ ಕ್ರಿಕೆಟ್ ಹಬ್ಬಕ್ಕೆ ಭಾನುವಾರ ತೆರೆ ಬೀಳಲಿದೆ. ಟೂರ್ನಿಯುದ್ದಕ್ಕೂ ಅಬ್ಬರಿಸಿ ಬೊಬ್ಬರಿದಿರುವ ಟೀಂ ಇಂಡಿಯಾ 4ನೇ ವಿಶ್ವಕಪ್ ಫೈನಲ್ ಆಡುತ್ತಿದ್ದು, 3ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳಲು ಕಾತರಿಸುತ್ತಿದೆ. ಮತ್ತೊಂದೆಡೆ 8ನೇ ಸಲ ಫೈನಲ್‌ನಲ್ಲಿ ಕಣಕ್ಕಿಳಿಯಲಿರುವ ವಿಶ್ವ ಕ್ರಿಕೆಟ್‌ನ ಬಾಸ್ ಆಸ್ಟ್ರೇಲಿಯಾ ದಾಖಲೆಯ 6ನೇ ಬಾರಿ ವಿಶ್ವಕಪ್ ಟ್ರೋಫಿಗೆ ಮುತ್ತಿಡಲು ಕಾತರಿಸುತ್ತಿದೆ.

ಭಾರತ-ಆಸ್ಟ್ರೇಲಿಯಾ ಫೈನಲ್‌ ಮ್ಯಾಚ್‌: ರಾಜ್ಯದ ಸ್ಟೇಡಿಯಂಗಳಲ್ಲಿ ಫೈನಲ್ ಪಂದ್ಯದ ಪ್ರಸಾರ

ಭಾರತವೇ ಫೇವರಿಟ್: ಟೂರ್ನಿಯಲ್ಲಿ ಅಬ್ಬರ ಗಮನಿಸಿದರೆ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್. ಮೊದಲು ಬ್ಯಾಟ್ ಮಾಡಿದಾಗ ಭಾರತ ಸರಾಸರಿ 175 ರನ್‌ಗಳಿಂದ ಗೆದ್ದಿದೆ. ಚೇಸ್ ಮಾಡಿದಾಗ ಸರಾಸರಿ 64.4 ಎಸೆತ ಬಾಕಿ ಉಳಿಸಿಕೊಂಡು ಜಯಭೇರಿ ಬಾರಿಸಿದೆ. ಈ ರೀತಿ ಎದುರಾಳಿಗಳನ್ನು 2007ರಲ್ಲಿ ಆಸ್ಟ್ರೇಲಿಯಾ ಹೊಸಕಿ ಹಾಕಿತ್ತು. ಆ ನಂತರ ಈ ಪ್ರಮಾಣದಲ್ಲಿ ಎದುರಾಳಿಗಳ ಮೇಲೆ ಸವಾರಿ ಮಾಡುತ್ತಿರುವುದು ಭಾರತವೇ. ಈ ಅಭಿಯಾನದಲ್ಲಿ ಭಾರತದ ಆಟ ಬಹುತೇಕ ಪರ್ಫೆಕ್ಟ್ ಎನ್ನುವಂತಿದೆ. ಎದುರಾಳಿಗಳನ್ನು ಭಾರತ 2 ಬಾರಿ 80 ರನ್‌ಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದೆ. ಭಾರತ 5 ಬಾರಿ ಮೊದಲು ಬ್ಯಾಟ್ ಮಾಡಿದ್ದು ಈ ಪೈಕಿ 3 ಬಾರಿ 350ಕ್ಕಿಂತ ಹೆಚ್ಚು ರನ್ ಗಳಿಸಿದೆ. ಒಂದು ಪಂದ್ಯದಲ್ಲಿ 326 ರನ್ ಕಲೆಹಾಕಿತ್ತು. ಅಗ್ರ-5 ಬ್ಯಾಟರ್‌ಗಳ ಪೈಕಿ ನಾಲ್ವರು ಕನಿಷ್ಠ ಒಂದು ಶತಕ ಸಿಡಿಸಿದ್ದಾರೆ.

ಶುಭ್‌ಮನ್ ಗಿಲ್ ಶತಕ ಬಾರಿಸದೆ ಇದ್ದರೂ ಅವರ ಬ್ಯಾಟಿಂಗ್ ಸರಾಸರಿ 50, ಸ್ಟ್ರೈಕ್‌ರೇಟ್ 108.02 ಇದೆ. ಇನ್ನು ಇದಕ್ಕೂ ಮುನ್ನ ಭಾರತದ ಬೌಲಿಂಗ್ ಪಡೆ ಎದುರಾಳಿಗಳಲ್ಲಿ ಈ ಮಟ್ಟಕ್ಕೆ ನಡುಕ ಹುಟ್ಟಿಸಿದ್ದು ಯಾರಿಗೂ ನೆನಪಿಲ್ಲ. ತ್ರಿವಳಿ ವೇಗಿಗಳು, ಅವಳಿ ಸ್ಪಿನ್ನರ್‌ಗಳು ಆಸ್ಟ್ರೇಲಿಯಾವನ್ನು ಬಲವಾಗಿ ಕಾಡಲು ಸಜ್ಜಾಗಿದ್ದಾರೆ. ಈ ಪಂದ್ಯದಲ್ಲಿ ಮೊಹಮದ್ ಶಮಿ ಹೊಸ ಚೆಂಡಿನೊಂದಿಗೆ ಬೌಲ್ ಮಾಡಿದರೆ ಅಚ್ಚರಿಯಿಲ್ಲ. ಆಸ್ಟ್ರೇಲಿಯಾದ ಇಬ್ಬರು ಆರಂಭಿಕರೂ ಎಡಗೈ ಬ್ಯಾಟರ್ ಗಳಾಗಿದ್ದು, ಈ ವಿಶ್ವಕಪ್‌ನಲ್ಲಿ ಶಮಿ ಎಡಗೈ ಬ್ಯಾಟರ್‌ಗಳ ವಿರುದ್ಧ 52 ಎಸೆತಗಳಲ್ಲಿ 32 ರನ್ ನೀಡಿ 8 ವಿಕೆಟ್ ಕಿತ್ತಿದ್ದಾರೆ. ಜಸ್‌ಪ್ರೀತ್ ಬುಮ್ರಾ ಮೊದಲ ಪವರ್-ಪ್ಲೇನಲ್ಲಿ ಕೇವಲ 3.13ರ ಎಕಾನಮಿ ರೇಟ್ ಹೊಂದಿದ್ದು, ಅವರ ಒಟ್ಟಾರೆ ಎಕಾನಮಿ 3.84 ಇದೆ. ಇನ್ನು ಕುಲ್ದೀಪ್ ಹಾಗೂ ಜಡೇಜಾ ಸಹ ನಿರ್ಣಾಯಕ ಪಾತ್ರ ವಹಿಸಬಹುದು.

ಭಾರತ-ಆಸ್ಟ್ರೇಲಿಯಾ ಫೈನಲ್‌ ಮ್ಯಾಚ್‌: ರಾಜ್ಯದ ಸ್ಟೇಡಿಯಂಗಳಲ್ಲಿ ಫೈನಲ್ ಪಂದ್ಯದ ಪ್ರಸಾರ

ಶಾಕ್ ನೀಡುತ್ತಾ ಆಸೀಸ್?: ಭಾರತದ ಅಜೇಯ ಓಟ ಗಮನಿಸಿದರೆ ಭಾರತಕ್ಕೆ ವಿಶ್ವಕಪ್ ಟ್ರೋಫಿ ಮಾತ್ರವೇ ಅರ್ಹ ಉಡುಗೊರೆ. ಆದರೆ ವಿಶ್ವ ಶ್ರೇಷ್ಠ ಆಸ್ಟ್ರೇಲಿಯಾವನ್ನು ಎದುರಲ್ಲಿಟ್ಟುಕೊಂಡು ಭಾರತ ಸುಲಭದಲ್ಲಿ ಪ್ರಶಸ್ತಿ ಕನಸು ಕಾಣಲು ಸಾಧ್ಯವಿಲ್ಲ. 10 ಪಂದ್ಯಗಳಲ್ಲಿ 528 ರನ್ ಸಿಡಿಸಿರುವ ಡೇವಿಡ್ ವಾರ್ನರ್ ಜೊತೆ ಸ್ಫೋಟಕ ಬ್ಯಾಟರ್‌ಗಳಾದ ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್ ಭಾರತದ ಬೌಲರ್‌ಗಳನ್ನು ಎದುರಿಸಲು ಸಜ್ಜಾಗಿದ್ದಾರೆ. ಸ್ಟೀವ್ ಸ್ಮಿತ್, ಲಬುಶೇನ್ ಈ ಬಾರಿ ಅಷ್ಟೇನೂ ಸದ್ದು ಮಾಡದಿದ್ದರೂ ದೊಡ್ಡ ಪಂದ್ಯಗಳಲ್ಲಿ ಸಾಮಾನ್ಯವಾಗಿ ತಂಡಕ್ಕೆ ಕೈಕೊಡುವವರಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ ಎಷ್ಟು ಅಪಾಯಕಾರಿ ಎಂಬುದು ಭಾರತದ ಬೌಲರ್‌ಗಳಿಗೆ ಚೆನ್ನಾಗಿ ಗೊತ್ತಿದೆ. ಇನ್ನು ಬೌಲಿಂಗ್ ವಿಭಾಗ ಅತ್ಯುನ್ನತ ದಾಳಿ ಸಂಘಟಿಸುತ್ತಿದ್ದು, ನಾಯಕ ಪ್ಯಾಟ್ ಕಮಿನ್ಸ್ ಜೊತೆ ಮಿಚೆಲ್ ಸ್ಟಾರ್ಕ್, ಹೇಜಲ್ ವುಡ್, ಟೂರ್ನಿಯ ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆ್ಯಡಂ ಜಂಪಾ ಭಾರತದ ಬ್ಯಾಟರ್‌ಗಳನ್ನು ಎಷ್ಟರ ಮಟ್ಟಿಗೆ ಕಟ್ಟಿಹಾಕುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಬಹುದು.

ಸಂಭವನೀಯ ಆಟಗಾರರ ಪಟ್ಟಿ

ಭಾರತ:

ರೋಹಿತ್ ಶರ್ಮಾ(ನಾಯಕ),ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ:

ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಶ್, ಪ್ಯಾಟ್‌ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌