ಒಂದು ದಶಕದಿಂದಲೂ ಭಾರತಕ್ಕೆ ನಿರಂತರ ಹಾರ್ಟ್‌ ಬ್ರೇಕ್‌! ಸೇಡಿಗೆ ಚಾನ್ಸ್‌ ಕೊಡದ ಆಸೀಸ್‌!

By Kannadaprabha News  |  First Published Nov 20, 2023, 8:59 AM IST

ಭಾರತ ದಶಕದಿಂದಲೂ ಕಾಯುತ್ತಿದ್ದ ಐಸಿಸಿ ಟ್ರೋಫಿ ಈ ಬಾರಿಯೂ ಕೈಗೆಟುಕಲಿಲ್ಲ. 2013ರಲ್ಲಿ ಕೊನೆ ಬಾರಿ ಭಾರತ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. ಆ ಬಳಿಕ ಏಕದಿನ ವಿಶ್ವಕಪ್‌ 2 ಬಾರಿ ಸೆಮಿಫೈನಲ್‌(2015, 2019), ಈ ಬಾರಿ ಫೈನಲ್‌ನಲ್ಲಿ ಸೋತಿದೆ.


ಅಹಮದಾಬಾದ್‌(ನ.20): ಭಾನುವಾರ ಭಾರತ ಕಪ್‌ ಗೆದ್ದಿದ್ದರೆ ಕಿಕ್ಕೇರಿಸಿಕೊಂಡು ಸೋಮವಾರ ಹ್ಯಾಂಗ್‌ ಓವರ್‌ನಲ್ಲಿ ತೇಲಲು ಕಾಯುತ್ತಿದ್ದ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಉಂಟಾದರೂ, ಹೆಡ್ಡೇಕ್‌ (ತಲೆನೋವು) ಇನ್ನೂ ಬಿಟ್ಟಿಲ್ಲ. ಇದಕ್ಕೆ ಟ್ರ್ಯಾವಿಸ್‌ ಹೆಡ್‌ರ ಅತ್ಯಮೋಘ ಆಟ ಕಾರಣ. ಭಾರತವನ್ನು ಫೈನಲ್‌ನಲ್ಲಿ 6 ವಿಕೆಟ್‌ಗಳಿಂದ ಹೊಸಕಿ ಹಾಕಿದ ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಕಪ್‌ ಎತ್ತಿಹಿಡಿದು ಸಂಭ್ರಮಿಸಿದರೆ, ಭಾರತದ 2 ವರ್ಷದ ಪರಿಶ್ರಮ ನೀರಲ್ಲಿ ಹೋಮ ಮಾಡಿದಂತಾಯಿತು.

ಭಾರತ ದಶಕದಿಂದಲೂ ಕಾಯುತ್ತಿದ್ದ ಐಸಿಸಿ ಟ್ರೋಫಿ ಈ ಬಾರಿಯೂ ಕೈಗೆಟುಕಲಿಲ್ಲ. 2013ರಲ್ಲಿ ಕೊನೆ ಬಾರಿ ಭಾರತ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. ಆ ಬಳಿಕ ಏಕದಿನ ವಿಶ್ವಕಪ್‌ 2 ಬಾರಿ ಸೆಮಿಫೈನಲ್‌(2015, 2019), ಈ ಬಾರಿ ಫೈನಲ್‌ನಲ್ಲಿ ಸೋತಿದೆ. 2014ರ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಸೋತ ಟೀಂ ಇಂಡಿಯಾ, 2016, 2022ರಲ್ಲಿ ಸೆಮೀಸ್‌ನಲ್ಲಿ ಮುಗ್ಗರಿಸಿತ್ತು. ಚಾಂಪಿಯನ್ಸ್‌ ಟ್ರೋಫಿಯಲ್ಲಿ 2017ರಲ್ಲಿ ಮತ್ತೆ ರನ್ನರ್‌-ಅಪ್‌ ಆಯಿತು. ಇನ್ನು ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ 2 ಬಾರಿಯೂ ಫೈನಲ್‌ನಲ್ಲಿ ಸೋಲನುಭವಿಸಿದೆ.

Latest Videos

undefined

ಮೋದಿ ಸ್ಟೇಡಿಯಂ ಬಳಿ ಜನಸಾಗರ

ಫೈನಲ್‌ ಪಂದ್ಯದ ವೀಕ್ಷಣೆಗಾಗಿ ಅಪಾರ ಪ್ರಮಾಣದ ಪ್ರೇಕ್ಷಕರು ಮುಂಜಾನೆಯಿಂದಲೇ ಮೋದಿ ಕ್ರೀಡಾಗಣದ ಬಳಿ ಜಮಾಯಿಸಿದ್ದರು. ಭಾರತ ತಂಡಕ್ಕೆ, ತಮ್ಮ ನೆಚ್ಚಿನ ಆಟಗಾರರಿಗೆ ಜೈಕಾರ ಕೂಗುತ್ತಾ ಹುರಿದುಂಬಿಸಿದರು. ಕ್ರೀಡಾಂಗಣದ ಸಮೀಪದ ರಸ್ತೆಗಳು ಕೂಡಾ ನೀಲಿ ಜೆರ್ಸಿ ತೊಟ್ಟ ಭಾರತದ ಅಭಿಮಾನಿಗಳಿಂದ ಕಂಗೊಳಿಸಿತು. ಪಂದ್ಯದ ಆರಂಭದಲ್ಲೇ ಕ್ರೀಡಾಂಗಣ 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಂದ ತುಂಬಿ ತುಳುಕಿ, ನೀಲಿ ಸಮುದ್ರದಂತೆ ಕಂಡುಬಂತು. ಇಡೀ ಅಹಮದಾಬಾದ್‌ ನಗರದಲ್ಲಿ ಹಬ್ಬದ ವಾತಾವರಣ ಕಂಡುಬಂತು. ಆದರೆ ಭಾರತದ ಸೋಲು ಇಡೀ ನಗರ ಮೌನಕ್ಕೆ ಜಾರುವಂತೆ ಮಾಡಿತು.

'ಕುಂಬ್ಳೆ ಇಲ್ಲದೆ 2003ರಲ್ಲಿ ಸೋತ್ವಿ, ಅಶ್ವಿನ್‌ ಇಲ್ಲದೆ ಈ ಬಾರಿ ಸೋತೆವು..' ಸೋಶಿಯಲ್‌ ಮೀಡಿಯಾದಲ್ಲಿ ಶುರು ಫ್ಯಾನ್ಸ್‌ ವಿಮರ್ಶೆ

ಸೇಡಿಗೆ ಚಾನ್ಸ್‌ ಕೊಡದ ಆಸೀಸ್‌!

ಭಾರತ ಈ ಮೊದಲು 2 ಬಾರಿ ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋತಿತ್ತು. 2003ರ ಏಕದಿನ ವಿಶ್ವಕಪ್‌ ಹಾಗೂ 2023ರ ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಆಸೀಸ್‌ ಜಯಗಳಿಸಿದ್ದವು. ಹೀಗಾಗಿ ಭಾರತ ಈ ಬಾರಿ ಸೇಡು ತೀರಿಸಿಕೊಳ್ಳಲು ಕಾಯುತ್ತಿತ್ತು. ಆದರೆ ಇದಕ್ಕೆ ಅವಕಾಶ ಕೊಡದ ಆಸೀಸ್‌, ಭಾರತ ವಿರುದ್ಧ 3ನೇ ಐಸಿಸಿ ಟ್ರೋಫೀ ಜಯಿಸಿತು.

ಕೈಕೊಟ್ಟ ಲಕ್‌ ಲೆಕ್ಕಾಚಾರ!

ಕಳೆದ 3 ವಿಶ್ವಕಪ್‌ಗಳಲ್ಲಿ ಆತಿಥ್ಯ ವಹಿಸಿದ ರಾಷ್ಟ್ರಗಳೇ ಚಾಂಪಿಯನ್‌ ಆಗಿದ್ದವು. ಈ ಬಾರಿಯೂ ಅದೃಷ್ಟ ಭಾರತದ ಪರ ಇರುತ್ತೆ ಎಂಬ ನಂಬಿಕೆ ಅಭಿಮಾನಿಗಳಲ್ಲಿತ್ತು. ಆದರೆ ಭಾರತದ ಕನಸಿಗೆ ಆಸೀಸ್ ಕೊಳ್ಳಿ ಇಟ್ಟಿತು. ಇನ್ನು, ಕಳೆದ 3 ಆವೃತ್ತಿಗಳಲ್ಲಿ ಫೈನಲ್‌ಗೂ ಮುನ್ನ ನಡೆಸಿದ ಫೋಟೋಶೂಟ್‌ನಲ್ಲಿ ಟ್ರೋಫಿಯ ಬಲ ಭಾಗದಲ್ಲಿ ನಿಂತ ನಾಯಕರ ತಂಡವೇ ಪ್ರಶಸ್ತಿ ಎತ್ತಿಹಿಡಿದಿದ್ದವು.

ಇಂದು, ಎಂದೆಂದು ನಿಮ್ಮ ಜೊತೆ ನಾವಿದ್ದೇವೆ; ಟೀಂ ಇಂಡಿಯಾ ಧೈರ್ಯ ತುಂಬಿದ ಪ್ರಧಾನಿ ಮೋದಿ!

ಶನಿವಾರ ಫೋಟೋಶೂಟ್‌ ವೇಳೆ ರೋಹಿತ್‌ ಟ್ರೋಫಿಯ ಬಲಭಾಗದಲ್ಲಿ ನಿಂತಿದ್ದರಿಂದ ಟ್ರೋಫಿ ಭಾರತಕ್ಕೆ ಸಿಗುವ ಆಶಾವಾದ ಭಾರತೀಯರದ್ದಾಗಿತ್ತು. ಅದೂ ಕೈಗೂಡಲಿಲ್ಲ. ಅಲ್ಲದೆ 2003 ಮತ್ತು 2023ರ ವಿಶ್ವಕಪ್‌ ನಡುವಿನ ಸಾಮ್ಯತೆಯಿಂದಲೂ ಟ್ರೋಫಿಯನ್ನು ಟೀಂ ಇಂಡಿಯಾ ಎತ್ತಿಹಿಡಿಯುವ ನಿರೀಕ್ಷೆ ಇದ್ದರೂ, ಹುಸಿಯಾಯಿತು.

ಆಸೀಸ್‌ಗೆ 10ನೇ ಐಸಿಸಿ ಟ್ರೋಫಿ!

ಐಸಿಸಿ ಟೂರ್ನಿಗಳಲ್ಲಿ ತನ್ನ ಅಧಿಪತ್ಯ ಮುಂದುವರಿಸಿದ ಆಸೀಸ್‌ 10ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಏಕದಿನ ವಿಶ್ವಕಪ್‌ನಲ್ಲಿ 6 ಬಾರಿ(1987, 1999, 2003, 2007, 2015, 2023)ರಲ್ಲಿ ಟ್ರೋಫಿ ಗೆದ್ದಿದ್ದು, ಚಾಂಪಿಯನ್ಸ್‌ ಟ್ರೋಫಿಯಲ್ಲಿ 2 ಬಾರಿ(2006, 2009), ಟಿ20 ವಿಶ್ವಕಪ್‌(2021) ಹಾಗೂ ಟೆಸ್ಟ್‌ ವಿಶ್ವಕಪ್‌(2023)ನಲ್ಲಿ ತಲಾ 1 ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಬಹುಮಾನ ಮೊತ್ತ

₹33 ಕೋಟಿ: ಚಾಂಪಿಯನ್‌ ಆಸ್ಟ್ರೇಲಿಯಾಕ್ಕೆ 4 ಮಿಲಿಯನ್‌ ಯುಸ್‌ ಡಾಲರ್‌(ಅಂದಾಜು ₹33.3 ಕೋಟಿ) ನಗದು ಬಹುಮಾನ ಲಭಿಸಿತು.

₹16 ಕೋಟಿ: ರನ್ನರ್‌-ಅಪ್‌ ಭಾರತ ತಂಡ 2 ಮಿಲಿಯನ್‌ ಯುಸ್‌ ಡಾಲರ್‌ ಅಂದರೆ 16.6 ಕೋಟಿ ರು. ನಗದು ಬಹುಮಾನ ಪಡೆಯಿತು.
 

click me!