
ಮುಂಬೈ(ನ.02): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗಾಗಲೇ ಸೆಮೀಸ್ ಹೊಸ್ತಿಲಲ್ಲಿರುವ ಟೀಂ ಇಂಡಿಯಾ, ಈ ಪಂದ್ಯವನ್ನು ಜಯಿಸುವ ಮೂಲಕ ಅಧಿಕೃತವಾಗಿ ಮೊದಲ ತಂಡವಾಗಿ ಸೆಮೀಸ್ ಪ್ರವೇಶಿಸುವ ಕನವರಿಕೆಯಲ್ಲಿದೆ. ಇನ್ನೊಂದೆಡೆ ಸೆಮೀಸ್ ಆಸೆ ಜೀವಂತವಾಗಿರಿಸಿಕೊಳ್ಳಲು ಲಂಕಾ ಪಡೆ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ.
2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಕಾದಾಡಿದ್ದವು. ಇದೀಗ ಮತ್ತೊಮ್ಮೆ ಉಭಯ ತಂಡಗಳು ಇಲ್ಲಿನ ವಾಂಖೇಡೆ ಮೈದಾನದಲ್ಲಿ ಮುಖಾಮುಖಿಯಾಗಿವೆ. ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಧನಂಜಯ ಡಿ ಸಿಲ್ವಾ ಬದಲಿಗೆ ಹೇಮಂತ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಏಕದಿನ ವಿಶ್ವಕಪ್: ಸಿಕ್ಸರ್ ಸಿಡಿಸುವುದರಲ್ಲೂ ದಾಖಲೆ ಬರೆದ ದಕ್ಷಿಣ ಆಫ್ರಿಕಾ
ರೋಹಿತ್ ಶರ್ಮಾ ನೇತೃತ್ವದಲ್ಲಿ ಆಡಿರುವ ಆರೂ ಪಂದ್ಯಗಳನ್ನು ಗೆದ್ದಿರುವ ಭಾರತ, ಈ ಪಂದ್ಯವನ್ನೂ ಗೆದ್ದರೆ ಸೆಮಿಫೈನಲ್ ಪ್ರವೇಶ ಅಧಿಕೃತಗೊಳ್ಳಲಿದೆ. ಇದಾದ ಮೇಲೆ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸಲಿರುವ ಭಾರತಕ್ಕೆ ಕೊನೆಯ ಪಂದ್ಯದಲ್ಲಿ ನೆದರ್‌ಲೆಂಡ್ಸ್ ಎದುರಾಗಲಿದೆ. ಕೊನೆಯ ಪಂದ್ಯದವರೆಗೂ ಕಾಯದೆ ಲಂಕಾ ವಿರುದ್ಧವೇ ಗೆದ್ದು ಸೆಮೀಸ್ ಸ್ಥಾನ ಖಚಿತಪಡಿಸಿಕೊಳ್ಳಲು ಟೀಂ ಇಂಡಿಯಾ ಎದುರು ನೋಡುತ್ತಿದೆ.
ಮತ್ತೊಂದೆಡೆ ಕುಸಾಲ್ ಮೆಂಡಿಸ್ ನೇತೃತ್ವದ ಲಂಕಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಇದುವರೆಗೂ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿರುವ ಲಂಕಾ ಸೆಮೀಸ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ನ್ಯೂಜಿಲೆಂಡ್ ವಿರುದ್ದ ಸೌತ್ ಆಫ್ರಿಕಾ ಗೆಲುವು ಸಂಭ್ರಮಿಸಿದ ಪಾಕ್, ಸೆಮಿಫೈನಲ್ ಆಸೆ ಜೀವಂತ!
ಶ್ರೀಲಂಕಾ ವಿರುದ್ಧ ಈ ವರ್ಷ 5 ಬಾರಿ ಗೆದ್ದಿದೆ ಟೀಂ ಇಂಡಿಯಾ!
ಈ ವರ್ಷ ಶ್ರೀಲಂಕಾ ವಿರುದ್ಧ 2023ರಲ್ಲಿ ಭಾರತ 5 ಏಕದಿನ ಪಂದ್ಯಗಳನ್ನಾಡಿದ್ದು, ಐದರಲ್ಲೂ ಜಯಭೇರಿ ಬಾರಿಸಿದೆ. ವಿಶ್ವಕಪ್‌ಗೂ ಮುನ್ನ ಲಂಕಾದಲ್ಲೇ ನಡೆದ ಏಷ್ಯಾಕಪ್‌ನ ಫೈನಲ್‌ನಲ್ಲಿ ಲಂಕಾವನ್ನು ಭಾರತ ಕೇವಲ 50 ರನ್‌ಗೆ ಆಲೌಟ್ ಮಾಡಿ, 10 ವಿಕೆಟ್‌ಗಳಿಂದ ಗೆದ್ದಿತ್ತು. ಇದೀಗ ಎದುರು ಮತ್ತೊಮ್ಮೆ ಪ್ರಾಬಲ್ಯ ಮೆರೆಯಲು ರೋಹಿತ್ ಪಡೆ ಸಜ್ಜಾಗಿದೆ.
ಉಭಯ ತಂಡಗಳ ಆಟಗಾರರ ಪಟ್ಟಿ ಹೀಗಿದೆ:
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಶ್ರೀಲಂಕಾ: ಪಥುಮ್ ನಿಸ್ಸಾಂಕ, ದೀಮುತ್ ಕರುಣರತ್ನೆ, ಕುಸಾಲ್ ಮೆಂಡೀಸ್(ನಾಯಕ), ಸಮರವಿಕ್ರಮ, ಚರಿತ್ ಅಸಲಂಕ, ದುಶನ್ ಹೇಮಂತ, ಏಂಜಲೋ ಮ್ಯಾಥ್ಯೂಸ್, ದುಸ್ಮಂತ ಚಮೀರಾ, ಮಹೀಶ್ ತೀಕ್ಷಣ. ಕಸುನ್ ರಜಿತಾ, ಮಧುಶಂಕ.
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.