ಭಾರತ ಹಾಗೂ ನ್ಯೂಜಿಲೆಂಡ್ ತಮ್ಮ ಅಭಿಯಾನವನ್ನು ಬಹಳ ಲೆಕ್ಕಾಚಾರ ಹಾಗೂ ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುತ್ತಿದ್ದು, ಯಾವ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸಲಿದೆ ಎನ್ನುವುದು ಆಯಾ ತಂಡಗಳ ವೇಗಿಗಳ ಪ್ರದರ್ಶನ ಹೇಗಿರಲಿದೆ ಎನ್ನುವುದರ ಮೇಲೆ ನಿರ್ಧಾರವಾಗಲಿದೆ.
ಧರ್ಮಶಾಲಾ(ಅ.22): ವಿಶ್ವಕಪ್ ಯಾರು ಗೆಲ್ಲಬೇಕು ಎಂದು ಭಾರತೀಯ ಅಭಿಮಾನಿಗಳನ್ನು ಕೇಳಿದರೆ ಮೊದಲು ಸಿಗುವ ಉತ್ತರ ಭಾರತ. 2ನೇ ನೆಚ್ಚಿನ ತಂಡ ಯಾವುದೆಂದು ಕೇಳಿದರೆ ಬಹುತೇಕರಿಂದ ಸಿಗುವ ಉತ್ತರ ನ್ಯೂಜಿಲೆಂಡ್. ಐಸಿಸಿ ಟೂರ್ನಿಗಳಲ್ಲಿ ಭಾರತದ ಅತಿದೊಡ್ಡ ಎದುರಾಳಿ ಯಾರು ಎಂದು ಕೇಳಿದಾಗ ಸಿಗುವ ಉತ್ತರವೂ ನ್ಯೂಜಿಲೆಂಡ್ ಎಂದೇ ಆಗಿರಲಿದೆ. ಕಿವೀಸ್‌ಗಿಂತ ಹೆಚ್ಚಾಗಿ ಭಾರತವನ್ನು ಇನ್ಯಾವ ತಂಡವೂ ಕಾಡಿಲ್ಲ.
ಭಾನುವಾರ ಟೀಂ ಇಂಡಿಯಾ, ಐಸಿಸಿ ಟೂರ್ನಿಗಳಲ್ಲಿ ತನ್ನ ‘ಬದ್ಧವೈರಿ’ ಎನಿಸಿರುವ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ವಿಶ್ವದ ಅತಿಸುಂದರ ಕ್ರೀಡಾಂಗಣಗಳಲ್ಲಿ ಒಂದಾದ ಇಲ್ಲಿನ ಎಚ್‌ಪಿಸಿಎ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಪಂದ್ಯ ಕೇವಲ ಗುಂಪು ಹಂತದ ಮತ್ತೊಂದು ಪಂದ್ಯವೆನಿಸದೆ, ಅತಿದೊಡ್ಡ ಇತಿಹಾಸವನ್ನು ಹೊಂದಿರುವ ತಂಡಗಳ ನಡುವಿನ ಮಹಾಕಾಳಗ ಎಂದೇ ಪರಿಗಣಿಸಲ್ಪಟ್ಟಿದೆ. ಈ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆದ್ದಿದ್ದು, ಭಾನುವಾರ ಮಳೆಯಿಂದ ಪಂದ್ಯ ರದ್ದಾಗದಿದ್ದರೆ ಒಂದು ತಂಡದ ಅಜೇಯ ಓಟ ನಿಲ್ಲಲಿದೆ.
World Cup 2023: ಹಾಲಿ ವಿಶ್ವಕಪ್‌ನ ಅತೀದೊಡ್ಡ ಗೆಲುವು ಕಂಡ ದಕ್ಷಿಣ ಆಫ್ರಿಕಾ, ವಿಶ್ವಚಾಂಪಿಯನ್‌ಗೆ ಮತ್ತೊಂದು ಸೋಲು!
ಭಾರತ ಹಾಗೂ ನ್ಯೂಜಿಲೆಂಡ್ ತಮ್ಮ ಅಭಿಯಾನವನ್ನು ಬಹಳ ಲೆಕ್ಕಾಚಾರ ಹಾಗೂ ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುತ್ತಿದ್ದು, ಯಾವ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸಲಿದೆ ಎನ್ನುವುದು ಆಯಾ ತಂಡಗಳ ವೇಗಿಗಳ ಪ್ರದರ್ಶನ ಹೇಗಿರಲಿದೆ ಎನ್ನುವುದರ ಮೇಲೆ ನಿರ್ಧಾರವಾಗಲಿದೆ.
‘ಸ್ವಿಂಗ್’ ಈಸ್ ಕಿಂಗ್!: ಧರ್ಮಶಾಲಾ ಕ್ರೀಡಾಂಗಣವು ಸಮುದ್ರ ಮಟ್ಟಕ್ಕಿಂತ ಬಹಳ ಎತ್ತರದಲ್ಲಿರುವ ಕಾರಣ, ಇದು ವೇಗಿಗಳ ನೆಚ್ಚಿನ ತಾಣವೆನಿಸಿದೆ. ಸದ್ಯ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವ ಕ್ರೀಡಾಂಗಣಗಳ ಪೈಕಿ ಧರ್ಮಶಾಲಾದಲ್ಲಿ ವೇಗಿಗಳಿಗೆ ಹೆಚ್ಚಿನ ನೆರವು ಸಿಕ್ಕಿದೆ. ಇಲ್ಲಿ ಎರಡೂ ಇನ್ನಿಂಗ್ಸ್‌ಗಳ ಮೊದಲ 10 ಓವರ್‌ಗಳಲ್ಲಿ ಚೆಂಡು ಬಹಳಷ್ಟು ಸ್ವಿಂಗ್ ಆಗಲಿದ್ದು, ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್, ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಗಾಯಾಳು ಹಾರ್ದಿಕ್ ಪಾಂಡ್ಯ ಹೊರಗುಳಿಯಲಿರುವ ಕಾರಣ, ಮೊಹಮ್ಮದ್ ಶಮಿಯನ್ನು ಆಡಿಸುವುದು ಉತ್ತಮ ಎನ್ನುವ ಅಭಿಪ್ರಾಯಗಳು ತಜ್ಞರಿಂದ ಕೇಳಿ ಬರುತ್ತಿದೆಯಾದರೂ, ಬ್ಯಾಟಿಂಗ್‌ನಲ್ಲೂ ನೆರವು ನೀಡಬಹುದು ಎನ್ನುವ ನಂಬಿಕೆಯಿಂದ ಶಾರ್ದೂಲ್ ಠಾಕೂರ್‌ರನ್ನೇ ಮುಂದುವರಿಸಿದರೂ ಅಚ್ಚರಿಯುಲ್ಲ.
"ತಂಡಕ್ಕಾಗಿ ಆಡಿ, ದಾಖಲೆಗಾಗಿ ಅಲ್ಲ": ವಿರಾಟ್ ಕೊಹ್ಲಿ ಮೇಲೆ ಗುಡುಗಿದ ಚೇತೇಶ್ವರ್ ಪೂಜಾರ..!
ನ್ಯೂಜಿಲೆಂಡ್ ಸಹ ಪ್ರಚಂಡ ವೇಗಿಗಳನ್ನು ಹೊಂದಿದ್ದು, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್, ಟ್ರೆಂಟ್ ಬೌಲ್ಟ್ ಉತ್ತಮ ಲಯದಲ್ಲೂ ಇದ್ದಾರೆ. ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಕೂಡ ತಮ್ಮ ಐಪಿಎಲ್ ಅನುಭವವನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದು, 11 ವಿಕೆಟ್ ಉರುಳಿಸಿದ್ದಾರೆ. ವಿಲಿಯಮ್ಸನ್ ಅನುಪಸ್ಥಿತಿ ಕಾಡದಂತೆ ಆಡುತ್ತಿರುವ ಕಿವೀಸ್‌ಗೆ ಅನುಭವಿ ಟಿಮ್ ಸೌಥಿಯನ್ನು ಹೊರಗಿಡುವಷ್ಟು ಸೌಕರ್ಯವೂ ಇದೆ ಎಂದರೆ ತಂಡ ಸದೃಢವಾಗಿದೆ ಎಂದರ್ಥ. ಹಿಂದಿನ ಪಂದ್ಯದಲ್ಲಿ ಆಡಿದ ತಂಡದಲ್ಲಿ ಯಾವುದೇ ಬದಲಾವಣೆ ಮಾಡಬೇಕಾದ ಅಗತ್ಯವಿರುವಂತೆ ಕಾಣುತ್ತಿಲ್ಲ.
ಎರಡೂ ತಂಡಗಳ ಬ್ಯಾಟರ್‌ಗಳೂ ಉತ್ಕೃಷ್ಟ ಲಯದಲ್ಲಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ರನ್ ಕಲೆಹಾಕಿರುವವರ ಪಟ್ಟಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಡೆವೊನ್ ಕಾನ್‌ವೇ ಕ್ರಮವಾಗಿ 2, 3 ಹಾಗೂ 4ನೇ ಸ್ಥಾನಗಳಲ್ಲಿದ್ದಾರೆ. ಬ್ಯಾಟಿಂಗ್ ಅಷ್ಟು ಸುಲಭವಲ್ಲದ ಪಿಚ್‌ನಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಒಟ್ಟು ಮುಖಾಮುಖಿ: 116
ಭಾರತ: 58
ನ್ಯೂಜಿಲೆಂಡ್: 50
ಟೈ: 01
ಫಲಿತಾಂಶವಿಲ್ಲ: 07
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್(ನಾಯಕ), ಶುಭ್‌ಮನ್, ಕೊಹ್ಲಿ, ಶ್ರೇಯಸ್, ರಾಹುಲ್, ಸೂರ್ಯ/ಕಿಶನ್, ಜಡೇಜಾ, ಶಾರ್ದೂಲ್/ಶಮಿ, ಬೂಮ್ರಾ, ಕುಲ್ದೀಪ್, ಸಿರಾಜ್.
ನ್ಯೂಜಿಲೆಂಡ್: ಕಾನ್‌ವೇ, ವಿಲ್ ಯಂಗ್, ರಚಿನ್, ಲೇಥಮ್(ನಾಯಕ), ಮಿಚೆಲ್, ಫಿಲಿಪ್ಸ್, ಚಾಪ್ಮನ್, ಸ್ಯಾಂಟ್ನರ್, ಹೆನ್ರಿ, ಫರ್ಗ್ಯೂಸನ್, ಟ್ರೆಂಟ್ ಬೌಲ್ಟ್.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್
ಪಿಚ್ ರಿಪೋರ್ಟ್
ಧರ್ಮಶಾಲಾದ ಪಿಚ್ ಉತ್ತಮ ಬೌನ್ಸ್ ಹೊಂದಿದ್ದು, ವೇಗಿಗಳಿಗೆ ಹೆಚ್ಚು ನೆರವು ಸಿಗಲಿದೆ. ಇಲ್ಲಿ ನಡೆದಿರುವ 7 ಏಕದಿನ ಪಂದ್ಯಗಳಲ್ಲೂ ಟಾಸ್ ಗೆದ್ದ ತಂಡ ಮೊದಲು ಫೀಲ್ಡ್ ಮಾಡಿದೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 260-270 ಇದೆ.
ಸೂರ್ಯ ಮೊಣಕೈಗೆ ಗಾಯ, ಕಿಶನ್‌ಗೆ ಕಚ್ಚಿದ ಜೇನು ಹುಳು!
ಮಹತ್ವದ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಮತ್ತಷ್ಟು ಆತಂಕ ಎದುರಾಗಿದೆ. ಹಾರ್ದಿಕ್ ಈ ಪಂದ್ಯದಿಂದ ಹೊರಬಿದ್ದಿರುವ ಕಾರಣ ಅವರ ಬದಲು ಸೂರ್ಯಕುಮಾರ್ ಅಥವಾ ಇಶಾನ್ ಕಿಶನ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಆದರೆ ಶನಿವಾರ ಅಭ್ಯಾಸದ ವೇಳೆ ಸೂರ್ಯ ಅವರ ಮೊಣಕೈಗೆ ಚೆಂಡು ಬಡಿದ ಪರಿಣಾಮ ಅವರು ನೋವಿನಿಂದ ಬಳಲುತ್ತಾ ಮೈದಾನ ತೊರೆದರು. ಇನ್ನು ಕಿಶನ್‌ಗೆ ಜೇನು ಹುಳು ಕಚ್ಚಿ, ಅವರೂ ನೋವಿನಿಂದ ಒದ್ದಾಡಿದ ಪ್ರಸಂಗವೂ ನಡೆಯಿತು.