
ಶಾರ್ಜಾ(ನ.05): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿಂದು ನ್ಯೂಜಿಲೆಂಡ್ ಹಾಗೂ ನಮೀಬಿಯಾ ತಂಡಗಳು (Namibia Cricket Team) ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನಮೀಬಿಯಾ ತಂಡ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ಈ ಪಂದ್ಯಕ್ಕೆ ಇಲ್ಲಿನ ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ (Sharjah Cricket Stadium) ಆತಿಥ್ಯವನ್ನು ವಹಿಸಿದೆ. ಟಿ20 ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ಹಾಗೂ ನಮೀಬಿಯಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ನಿರೀಕ್ಷೆಯಂತೆಯೇ ನಮೀಬಿಯಾ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.
T20 World Cup: ನ್ಯೂಜಿಲೆಂಡ್‌ಗೆ ಶಾಕ್ ನೀಡುತ್ತಾ ನಮೀಬಿಯಾ?
ಸೆಮೀಸ್ ಪ್ರವೇಶಿಸುವ ದೃಷ್ಠಿಯಿಂದ ಈ ಪಂದ್ಯದಲ್ಲಿನ ಗೆಲುವು ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ (New Zealand Cricket Team) ಸಾಕಷ್ಟು ಮಹತ್ವದ್ದಾಗಿದೆ. ಸದ್ಯ ಸೂಪರ್ 12 ಹಂತದ ಗ್ರೂಪ್ 2ನಲ್ಲಿ ನ್ಯೂಜಿಲೆಂಡ್ ತಂಡವು 3 ಪಂದ್ಯಗಳನ್ನಾಡಿ 2 ಗೆಲುವು ಹಾಗೂ ಒಂದು ಸೋಲು ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಕಿವೀಸ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ.
ಇನ್ನೊಂದೆಡೆ ಗೆಹಾರ್ಡ್ ಎರಾಸ್‌ಮಸ್ ನೇತೃತ್ವದ ನಮೀಬಿಯಾ ತಂಡವು 3 ಪಂದ್ಯಗಳನ್ನಾಡಿ 1 ಗೆಲುವು ಹಾಗೂ 2 ಸೋಲುಗಳೊಂದಿಗೆ 2 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ನಮೀಬಿಯಾ ತಂಡವು ಸೆಮೀಸ್ ಪ್ರವೇಶಿಸಬೇಕಿದ್ದರೆ ಪವಾಡವೇ ನಡೆಯಬೇಕಿದೆ.
Ind vs NZ Test: ಟೀಂ ಇಂಡಿಯಾ ಎದುರಿನ ಟೆಸ್ಟ್ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ
ಇಲ್ಲಿನ ಶಾರ್ಜಾ ಮೈದಾನದಲ್ಲಿ ನಡೆದ ಕಳೆದ 6 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವಿನ ನಗೆ ಬೀರಿದೆ. ಸ್ಕಾಟ್ಲೆಂಡ್ ಎದುರು ನಡೆದ ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವು 16 ರನ್‌ಗಳ ರೋಚಕ ಜಯ ಸಾಧಿಸಿತ್ತು. ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿದ್ದರು. ಇನ್ನೊಂದೆಡೆ ನಮೀಬಿಯಾ ತಂಡವು ಸ್ಕಾಟ್ಲೆಂಡ್‌ಗೆ ಸೋಲುಣಿಸಿತ್ತು. ಹೀಗಾಗಿ ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೆ ಶಾಕ್ ನೀಡಲು ನಮೀಬಿಯಾ ಎದುರು ನೋಡುತ್ತಿದೆ.
ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್, ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಬ್ಯಾಟಿಂಗ್‌ನಲ್ಲಿ ಹೆಚ್ಚಾಗಿ ನೆಚ್ಚಿಕೊಂಡಿದ್ದರೆ, ಬೌಲಿಂಗ್‌ನಲ್ಲಿ ಇಶ್ ಸೋಧಿ ಹಾಗೂ ಟ್ರೆಂಟ್ ಬೌಲ್ಟ್ ಮೇಲೆ ಹೆಚ್ಚಾಗಿ ಅವಲಂಭಿತವಾಗಿದೆ. ಇನ್ನೊಂದೆಡೆ ಯುವ ಆಟಗಾರರನ್ನೊಳಗೊಂಡ ನಮೀಬಿಯಾ ಯಾವ ರೀತಿ ಪೈಪೋಟಿ ಕೊಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ತಂಡಗಳು ಹೀಗಿವೆ:
ನ್ಯೂಜಿಲೆಂಡ್ ಕ್ರಿಕೆಟ್ ತಂಡ:
ಮಾರ್ಟಿನ್ ಗಪ್ಟಿಲ್, ಡೇರಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಜೇಮ್ಸ್ ನೀಶಮ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ಗ್ಲೆನ್ ಫಿಲಿಫ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಆಡಂ ಮಿಲ್ನೆ, ಟ್ರೆಂಟ್ ಬೌಲ್ಟ್
ನಮೀಬಿಯಾ ತಂಡ:
ಸ್ಟಿಫನ್ ಬಾರ್ಡ್, ಮಿಚೆಲ್ ವ್ಯಾನ್ ಲಿಂಗೆನ್, ಕ್ರೆಗ್ ವಿಲಿಯಮ್ಸ್, ಗೆಹಾರ್ಡ್ ಎರಾಸ್‌ಮಸ್ (ನಾಯಕ), ಜಾನ್ ನಿಕೋಲ್ ಲೋಫ್ಟಿ-ಈಟನ್, ಜೇನ್ ಗ್ರೀನ್ (ವಿಕೆಟ್ ಕೀಪರ್), ಡೇವಿಡ್ ವೀಸಾ, ಜೆಜೆ ಸ್ಮಿತ್, ಜಾನ್ ಫ್ರೈಲಿಂಕ್, ರುಬೀನ್ ಟ್ರಂಪಲ್‌ಮ್ಯಾನ್, ಬೆನ್ ಶಿಕೊಂಗೊ.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.