T20 World Cup: ನಮ್ಮ ತಂಡದ ಭವಿಷ್ಯ ಆಫ್ಘನ್‌ ಕೈಯಲ್ಲಿದೆ: ರವಿಚಂದ್ರನ್ ಅಶ್ವಿನ್‌!

By Suvarna NewsFirst Published Nov 5, 2021, 12:55 PM IST
Highlights

* ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮೀಸ್‌ಗೇರಲು ಭಾರತ ಹೋರಾಟ

* ಭಾರತ ಸೆಮೀಸ್‌ಗೇರಲು ಬೇಕಿದೆ ಆಫ್ಘಾನ್ ತಂಡದ ನೆರವು

* ಕಿವೀಸ್ ತಂಡವನ್ನು ಆಫ್ಘಾನ್ ಮಣಿಸಲಿ ಎಂದು ಕೋಟ್ಯಾಂತರ ಭಾರತೀಯರ ಪ್ರಾರ್ಥನೆ

ದುಬೈ(ನ.05): ಐಸಿಸಿ ಟಿ20 ವಿಶ್ವಕಪ್‌ನಲ್ಲಿ (ICC T20 World Cup) ನಾವು ಸೆಮಿಫೈನಲ್‌ ಪ್ರವೇಶಿಸಬೇಕಿದ್ದರೆ ನ್ಯೂಜಿಲೆಂಡ್‌ ತಂಡವನ್ನು (New Zealand Cricket Team) ಆಫ್ಘಾನಿಸ್ತಾನ ಸೋಲಿಸಬೇಕು. ನಮ್ಮ ಭವಿಷ್ಯ ಆಫ್ಘನ್‌ ಕೈಯಲ್ಲಿದೆ ಎಂದು ಭಾರತದ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ (Ravichandran Ashwin) ಹೇಳಿದ್ದಾರೆ. 

‘ನ್ಯೂಜಿಲೆಂಡ್‌ ವಿರುದ್ಧ ಆಫ್ಘನ್‌ ಗೆಲ್ಲಬೇಕು ಎಂದರೆ ಆಫ್‌ ಸ್ಪಿನ್ನರ್‌ ಮುಜೀಬ್‌ ಉರ್‌ ರಹಮಾನ್‌ರನ್ನು (Mujeeb Ur Rahman) ಆಡಿಸಬೇಕು. ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಬೇಕಿದ್ದರೆ ನಾವು ನಮ್ಮ ತಂಡದ ಫಿಸಿಯೋ ಕಳುಹಿಸಿ ಚಿಕಿತ್ಸೆ ಕೊಡಿಸುತ್ತೇವೆ. ಆಫ್ಘನ್‌ ಗೆಲುವಿಗೆ ಹಾರೈಸುವುದೊಂದೇ ನಾವು ಮಾಡಲು ಸಾಧ್ಯವಿರುವ ಕೆಲಸ’ ಎಂದಿದ್ದಾರೆ.

T20 world Cup: ಭಾರತಕ್ಕೆ ಮತ್ತೊಂದು ದೊಡ್ಡ ಜಯದ ಗುರಿ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಟೀಂ ಇಂಡಿಯಾ (Team India), ಮೂರನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ಎದುರು 66 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಒಂದು ವೇಳೆ ಆಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ದ ಗೆಲುವು ಸಾಧಿಸಿದರೆ, ಇದೇ ವೇಳೆ ಟೀಂ ಇಂಡಿಯಾ ತನ್ನ ಪಾಲಿನ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ದ ದೊಡ್ಡ ಅಂತರದ ಗೆಲುವು ಸಾಧಿಸಿದರೆ, ಭಾರತ ಸೆಮೀಸ್‌ಗೇರಲಿದೆ.

ನವೆಂಬರ್ 07ರಂದು ಅಬುಧಾಬಿಯ ಶೇಕ್‌ ಜಾಯೆದ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು ಕಿವೀಸ್ ತಂಡವನ್ನು ಮಣಿಸಲಿ ಎಂದು ಕೋಟ್ಯಾಂತರ ಭಾರತೀಯರು ಪ್ರಾರ್ಥಿಸಲಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.

‘ಮೊದಲೆರಡು ಪಂದ್ಯದಲ್ಲಿ ಯೋಜನೆ ಸರಿಯಿರಲಿಲ್ಲ’: ರೋಹಿತ್ ಶರ್ಮಾ

ಅಬುಧಾಬಿ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ತೆಗೆದುಕೊಂಡ ಕೆಲ ನಿರ್ಧಾರಗಳು ಸರಿಯಿರಲಿಲ್ಲ. ಸರಿಯಾದ ಯೋಜನೆಯೊಂದಿಗೆ ಆಡುವಲ್ಲಿ ತಂಡ ಎಡವಿದೆ ಎಂದು ಉಪನಾಯಕ ರೋಹಿತ್‌ ಶರ್ಮಾ (Rohit Sharma) ಒಪ್ಪಿಕೊಂಡಿದ್ದಾರೆ. 

ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ‘ಈ ಪಂದ್ಯದಲ್ಲಿ ನಾವು ಆಡಿದ ರೀತಿ ವಿಭಿನ್ನವಾಗಿತ್ತು. ಮೊದಲೆರಡು ಪಂದ್ಯಗಳಲ್ಲಿ ಇದೇ ರೀತಿ ಆಡಬೇಕಿತ್ತು. ನಾವು ತೆಗೆದುಕೊಂಡ ಕೆಲ ನಿರ್ಧಾರಗಳು ಸರಿಯಿರಲಿಲ್ಲ. ಬಿಡುವಿಲ್ಲದೆ ಕ್ರಿಕೆಟ್‌ ಆಡಿದಾಗ ಇಂತಹ ತಪ್ಪುಗಳು ಆಗುವುದು ಸಹಜ’ ಎಂದರು. ‘2 ಪಂದ್ಯಗಳಲ್ಲಿ ನಾವು ಚೆನ್ನಾಗಿ ಆಡಲಿಲ್ಲ ಎಂದ ಮಾತ್ರಕ್ಕೆ ನಾವು ಕೆಟ್ಟ ಆಟಗಾರರಾಗುವುದಿಲ್ಲ. ತಂಡದ ಕೋಚಿಂಗ್‌ ಸಿಬ್ಬಂದಿ ಅಸಮರ್ಥರು ಎಂದಲ್ಲ’ ಎಂದು ತಂಡವನ್ನು ಸಮರ್ಥಿಸಿಕೊಂಡರು.

T20 World Cup 2021: ಶ್ರೀಲಂಕಾ ವಿರುದ್ಧ ಸೋಲು, ವೆಸ್ಟ್ ಇಂಡೀಸ್ ಕನಸು ಛಿದ್ರ!

ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು 10 ವಿಕೆಟ್‌ಗಳ ಅಂತರದ ಆಘಾತಕಾರಿ ಸೋಲು ಕಂಡಿತ್ತು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಎದುರು ಭಾರತ ಕ್ರಿಕೆಟ್ ತಂಡವು ಸೋಲು ಕಂಡಿತ್ತು. ಇದಾದ ಬಳಿಕ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಸಹಾ ನ್ಯೂಜಿಲೆಂಡ್ ವಿರುದ್ದ ಟೀಂ ಇಂಡಿಯಾ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಈ ಎರಡು ಸೋಲುಗಳಿ ಟೀಂ ಇಂಡಿಯಾ ಸೆಮೀಸ್ ಹಾದಿಯನ್ನು ಸಾಕಷ್ಟು ದುರ್ಗಮಗೊಳಿಸಿದೆ.

click me!