
ಹೋಬರ್ಟ್(ಅ.23): ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಕೋವಿಡ್ 19 ಪ್ರಕರಣ ಪತ್ತೆಯಾಗಿದೆ. ಶ್ರೀಲಂಕಾ ಎದುರಿನ ಸೂಪರ್ 12 ಪಂದ್ಯಕ್ಕೂ ಮುನ್ನ ಐರ್ಲೆಂಡ್ ಆಲ್ರೌಂಡರ್ ಜಾರ್ಜ್ ಡಾಕ್ರೆಲ್‌ಗೆ ಕೋವಿಡ್ 19 ವೈರಸ್ ತಗುಲಿರುವುದು ಮತ್ತೆಯಾಗಿತ್ತು. ಕೋವಿಡ್ ಮಂದ ಲಕ್ಷಣಗಳು ಕಾಣಿಸಿಕೊಂಡಿದ್ದವು, ಡಾಕ್ರೆಲ್‌ಗೆ ಕೋವಿಡ್ ತಗುಲಿದ್ದರೂ ಲಂಕಾ ವಿರುದ್ದ ಕಣಕ್ಕಿಳಿಯುವ ಮೂಲಕ ಗಮನ ಸೆಳೆದರು.
ಜಾರ್ಜ್ ಡಾಕ್ರೆಲ್ ಅವರಿಗೆ ಕೋವಿಡ್ 19 ವೈರಸ್ ತಗುಲಿದ ಹೊರತಾಗಿಯೂ ಲಂಕಾ ವಿರುದ್ದ ಕಣಕ್ಕಿಳಿದು 16 ಎಸೆತಗಳನ್ನು ಎದುರಿಸಿ 14 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರು. ಐಸಿಸಿ ನಿಯಮಾವಳಿಗಳ ಪ್ರಕಾರವೇ ಜಾರ್ಜ್ ಡಾಕ್ರೆಲ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಯಿತು.
ಐಸಿಸಿ ಹೊಸ ಕೋವಿಡ್ ನಿಯಮಾವಳಿಗಳ ಪ್ರಕಾರ, ಒಂದು ವೇಳೆ ಆಟಗಾರನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದರೂ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಾವಳಿಯಲ್ಲಿ ಹಾಗೂ ಸಹ ಆಟಗಾರರ ಜತೆ ಅಭ್ಯಾಸ ನೀಡಲು ಅವಕಾಶ ಒದಗಿಸಲಾಗಿದೆ. ಆದರೆ ಕೋವಿಡ್ ದೃಢಪಟ್ಟ ಆಟಗಾರರನು ಪಂದ್ಯದ ವೇಳೆ ಹಾಗೂ ಅಭ್ಯಾಸದ ವೇಳೆ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಬೇಕಷ್ಟೆ.
ಜಾರ್ಜ್ ಡಾಕ್ರೆಲ್‌ಗೆ ಕೋವಿಡ್‌ನ ಮಂದ ಲಕ್ಷಣಗಳಿದ್ದವು. ಇದರ ಹೊರತಾಗಿಯೂ ತಂಡದ ವೈದ್ಯಕೀಯ ಸಿಬ್ಬಂದಿಯು ಡಾಕ್ರೆಲ್ ಜತೆ ಹಾಗೂ ಟೂರ್ನಮೆಂಟ್ ಮತ್ತು ಆಯೋಜಕರ ಜತೆ ಮಾತುಕತೆ ನಡೆಸಿ ಲಂಕಾ ವಿರುದ್ದದ ಪಂದ್ಯಕ್ಕೆ ಕಣಕ್ಕಿಳಿಸಲಾಯಿತು ಎಂದು ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
T20 World Cup: ಸುಲಭವಾಗಿ ಐರ್ಲೆಂಡ್ ಬೇಟೆಯಾಡಿದ ಲಂಕಾ ಸಿಂಹಗಳು...!
ಲಂಕಾ ಎದುರಿನ ಪಂದ್ಯಕ್ಕೂ ಮುನ್ನ ಐಸಿಸಿ ಮುಖ್ಯ ವೈದ್ಯಕೀಯ ಅಧಿಕಾರಿಗೆ, ಎದುರಾಳಿ ತಂಡಕ್ಕೆ ಹಾಗೂ ಮೈದಾನದ ಸಿಬ್ಬಂದಿಗಳಿಗೆ ಮೊದಲೇ ಈ ವಿಚಾರವನ್ನು ತಿಳಿಸಲಾಗಿತ್ತು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 30 ವರ್ಷದ ಜಾರ್ಜ್ ಡಾಕ್ರೆಲ್, ಸ್ಕಾಟ್ಲೆಂಡ್ ಎದುರಿನ ಪಂದ್ಯದಲ್ಲಿ 39 ಎಸೆತಗಳಲ್ಲಿ ಅಜೇಯ 27 ರನ್ ಬಾರಿಸಿದ್ದರು. ಆ ಪಂದ್ಯದಲ್ಲಿ ಐರ್ಲೆಂಡ್ ತಂಡವು ಸ್ಕಾಟ್ಲೆಂಡ್ ಎದುರು 6 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು.
ಸೂಪರ್ 12 ಹಂತದಲ್ಲಿ ಹೀನಾಯ ಸೋಲು ಕಂಡ ಐರ್ಲೆಂಡ್
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಲಂಕಾ ಪಾಲಿನ ಮೊದಲ ಪಂದ್ಯದಲ್ಲಿ ದಶುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡವು ಐರ್ಲೆಂಡ್ ವಿರುದ್ದ 9 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಐರ್ಲೆಂಡ್ ನೀಡಿದ್ದ 129 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಲಂಕಾದ ಸಿಂಹಗಳು ಸುಲಭ ಗೆಲುವು ದಾಖಲಿಸಿದೆ. ವಿಕೆಟ್ ಕೀಪರ್ ಬ್ಯಾಟರ್ ಕುಸಾಲ್ ಮೆಂಡಿಸ್ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.