
ಮೆಲ್ಬರ್ನ್(ಅ.23): ಇಫ್ತಿಕಾರ್ ಅಹಮ್ಮದ್, ಶಾನ್ ಮಸೂದ್ ಸ್ಪೋಟಕ ಅರ್ಧಶತಕದ ಹೊರತಾಗಿಯೂ, ಆರ್ಶದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಮಾರಕ ದಾಳಿಗೆ ತತ್ತರಿಸಿ ಪಾಕಿಸ್ತಾನ ತಂಡವು 8 ವಿಕೆಟ್ ಕಳೆದುಕೊಂಡು 159 ರನ್ ಬಾರಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಗೆಲ್ಲಲು ಸ್ಪರ್ಧಾತ್ಮಕ ಗುರಿ ನೀಡಿದೆ. ಚೊಚ್ಚಲ ಟಿ20 ವಿಶ್ವಕಪ್ ಪಂದ್ಯವನ್ನಾಡುತ್ತಿರುವ ಯುವ ಎಡಗೈ ವೇಗಿ ಆರ್ಶದೀಪ್ ಸಿಂಗ್ 32 ರನ್ ನೀಡಿ 3 ವಿಕೆಟ್ ಪಡೆದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಪಾಕ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು.
ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡಕ್ಕೆ ಪವರ್‌ಪ್ಲೇ ನಲ್ಲೇ ಯುವ ವೇಗಿ ಆರ್ಶದೀಪ್ ಸಿಂಗ್ ಶಾಕ್ ನೀಡಿದರು. ಎರಡನೇ ಓವರ್‌ನಲ್ಲಿ ತಾವೆಸೆದ ಮೊದಲ ಎಸೆತದಲ್ಲೇ ಬಾಬರ್ ಅಜಂ ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೆ ಮತ್ತೋರ್ವ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಕೂಡಾ ಆರ್ಶದೀಪ್‌ಗೆ ಎರಡನೇ ಬಲಿಯಾದರು.
ಆಸರೆಯಾದರ ಇಫ್ತಿಕಾರ್-ಮಸೂದ್: ಆರಂಭದಲ್ಲೇ ಬಾಬರ್ ಅಜಂ ಹಾಗೂ ರಿಜ್ವಾನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಶಾನ್ ಮಸೂದ್ ಹಾಗೂ ಇಫ್ತಿಕಾರ್ ಅಹಮ್ಮದ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 76 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ಟೀಂ ಇಂಡಿಯಾ ಪ್ರಮುಖ ಸ್ಪಿನ್ನರ್ ಅಕ್ಷರ್ ಪಟೇಲ್ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಸಹಿತ 21 ರನ್ ಸಿಡಿಸಿದ ಇಫ್ತಿಕಾರ್ ಅಹಮ್ಮದ್ ಕೇವಲ 34 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 51 ರನ್ ಬಾರಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಇಫ್ತಿಕಾರ್ ವಿಕೆಟ್ ಪತನದ ಬಳಿಕ ಶಾನ್ ಮಸೂದ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಶಾನ್ ಮಸೂದ್ 42 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 52 ರನ್ ಬಾರಿಸಿ ಅಜೇಯರಾಗುಳಿದರು.
ಪಾಕ್‌ಗೆ ಶಾಕ್ ನೀಡಿದ ಪಾಂಡ್ಯ: ಆರಂಭಿಕ ಆಘಾತದ ಬಳಿಕ ಚೇತರಿಸಿಕೊಂಡು ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದ್ದ ಪಾಕಿಸ್ತಾನ ತಂಡಕ್ಕೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮೊನಚಾದ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಬ್ಯಾಟರ್‌ಗಳನ್ನು ಕಾಡಿದರು. ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಶಾದಾಬ್ ಖಾನ್, ಹೈದರ್ ಅಲಿ ಹಾಗೂ ಮೊಹಮ್ಮದ್ ನವಾಜ್ ಅವರನ್ನು ಬಲಿ ಪಡೆಯುವ ಮೂಲಕ ಪಾಕ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು.
ಕೈಕೊಟ್ಟ ಪಾಕ್ ಬ್ಯಾಟರ್‌ಗಳು: ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ತಂಡದ ಪರ ಇಫ್ತಿಕಾರ್ ಅಹಮ್ಮದ್(51), ಶಾನ್ ಮಸೂದ್(52*) ಹಾಗೂ ಶಾಹೀನ್ ಅಫ್ರಿದಿ(16) ಹೊರತುಪಡಿಸಿ ಪಾಕಿಸ್ತಾನದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಭಾರತದ ಶಿಸ್ತುಬದ್ದ ದಾಳಿಗೆ ಪಾಕ್ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.