T20 World Cup ಬ್ರಿಸ್ಬೇನ್‌ನಲ್ಲಿಂದು ಇಂಗ್ಲೆಂಡ್-ನ್ಯೂಜಿಲೆಂಡ್ ಹೈವೋಲ್ಟೇಜ್ ಫೈಟ್

By Naveen KodaseFirst Published Nov 1, 2022, 11:16 AM IST
Highlights

ಇಂಗ್ಲೆಂಡ್-ನ್ಯೂಜಿಲೆಂಡ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ
ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಇಂಗ್ಲೆಂಡ್ ಕ್ರಿಕೆಟ್ ತಂಡ
ಸೆಮೀಸ್‌ಗೇರುವ ಕನವರಿಕೆಯಲ್ಲಿದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ

ಬ್ರಿಸ್ಬೇನ್‌(ನ.01): ಈ ಬಾರಿಯ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಸ್ಥಾನ ಖಚಿತಪಡಿಸಿಕೊಳ್ಳುವ ಕಾತರದಲ್ಲಿರುವ ಕಳೆದ ಬಾರಿ ರನ್ನರ್‌-ಅಪ್‌ ನ್ಯೂಜಿಲೆಂಡ್‌, ಮಂಗಳವಾರ ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ. ಈಗಾಗಲೇ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ಹಾಗೂ ಶ್ರೀಲಂಕಾಕ್ಕೆ ಸೋಲುಣಿಸಿರುವ ಕಿವೀಸ್‌ 5 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಫ್ಘನ್‌ ವಿರುದ್ಧದ ಪಂದ್ಯ ಮಳೆಗೆ ಬಲಿಯಾಗಿತ್ತು. ಮತ್ತೊಂದು ಗೆಲುವು ತಂಡವನ್ನು ಅಧಿಕೃತವಾಗಿ ಸೆಮೀಸ್‌ಗೇರಿಸಲಿದೆ. 

ಮತ್ತೊಂದೆಡೆ 2010ರ ಚಾಂಪಿಯನ್‌ ಇಂಗ್ಲೆಂಡ್‌ ನಾಕೌಟ್‌ ರೇಸ್‌ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆಫ್ಘನ್‌ ವಿರುದ್ಧ ಗೆದ್ದರೂ ಬಳಿಕ ಐರ್ಲೆಂಡ್‌ ವಿರುದ್ಧ ಆಘಾತಕಾರಿ ಸೋಲುಂಡಿದ್ದ ಇಂಗ್ಲೆಂಡ್‌ ಈ ಪಂದ್ಯದಲ್ಲೂ ಸೋತರೆ ಸೆಮೀಸ್‌ ಕನಸು ಭಗ್ನಗೊಳ್ಳುವುದು ಬಹುತೇಕ ಖಚಿತ.

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಅಬುದಾಬಿಯಲ್ಲಿ ನಡೆದ 2021ರ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ನ್ಯೂಜಿಲೆಂಡ್ ತಂಡವು ರೋಚಕ ಗೆಲುವು ದಾಖಲಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಇದೀಗ ಕೇನ್‌ ವಿಲಿಯಮ್ಸನ್ ನೇತೃತ್ವದ ಕಿವೀಸ್ ತಂಡವು ಅಂತಹದ್ದೇ ಪ್ರದರ್ಶನ ತೋರುವ ಮೂಲಕ ಮೊದಲ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡುವ ಕನವರಿಕೆಯಲ್ಲಿದೆ.

ಮೇಲ್ನೋಟಕ್ಕೆ ಎರಡೂ ತಂಡಗಳು ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಇಂದಿನ ಪಂದ್ಯದಲ್ಲಿ ಭರಪೂರ ಮನರಂಜನೆ ದೊರೆಯುವ ಸಾಧ್ಯತೆಯಿದೆ. ಫಿನ್ ಅಲೆನ್, ಡೆವೊನ್ ಕಾನ್‌ವೇ, ಕೇನ್‌ ವಿಲಿಯಮ್ಸನ್, ಗ್ಲೆನ್ ಫಿಲಿಫ್ಸ್ ಹಾಗೂ ಡೇರಲ್ ಮಿಚೆಲ್‌ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಇನ್ನೊಂದೆಡೆ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್ ಜತೆಗೆ ಸ್ಪಿನ್ನರ್‌ಗಳಾದ ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟ್ನರ್ ಕರಾರುವಕ್ಕಾದ ದಾಳಿ ನಡೆಸುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

T20 World Cup ಇಂದು ಆಫ್ಘನ್‌-ಲಂಕಾ ಕ್ವಾರ್ಟರ್‌ ಫೈನಲ್‌!

ಇನ್ನೊಂದೆಡೆ ಇಂಗ್ಲೆಂಡ್ ತಂಡದ ಪಾಲಿಗೆ ಒಂದು ರೀತಿ ಮಾಡು ಇಲ್ಲವೇ ಮಡಿ ಎನ್ನುವಂತಾಗಿದ್ದು, ಸೆಮೀಸ್‌ ಪ್ರವೇಶಿಸಬೇಕಿದ್ದರೇ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಕಿವೀಸ್‌ನಂತೆ ಇಂಗ್ಲೆಂಡ್ ತಂಡವು ಕೂಡಾ ಸಾಕಷ್ಟು ಬಲಿಷ್ಠವಾಗಿದ್ದು, ಬ್ಯಾಟಿಂಗ್‌ನಲ್ಲಿ ಜೋಸ್ ಬಟ್ಲರ್, ಅಲೆಕ್ಸ್‌ ಹೇಲ್ಸ್‌, ಬೆನ್ ಸ್ಟೋಕ್ಸ್‌, ಡೇವಿಡ್ ಮಲಾನ್, ಹ್ಯಾರಿ ಬ್ರೂಕ್ಸ್‌ ಹಾಗು ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ನೆಚ್ಚಿಕೊಂಡಿದೆ. ಆಲ್ರೌಂಡರ್‌ಗಳಾದ ಮೋಯಿನ್ ಅಲಿ ಹಾಗೂ ಸ್ಯಾಮ್ ಕರ್ರನ್ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ. ಬೌಲಿಂಗ್‌ನಲ್ಲಿ ಕ್ರಿಸ್ ವೋಕ್ಸ್‌, ಮಾರ್ಕ್‌ ವುಡ್ ಜತೆಗೆ ಆದಿಲ್ ರಶೀದ್ ಮಿಂಚಿನ ದಾಳಿ ನಡೆಸಲು ಎದುರು ನೋಡುತ್ತಿದ್ದಾರೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್‌ವೇ, ಕೇನ್ ವಿಲಿಯಮ್ಸನ್(ನಾಯಕ), ಗ್ಲೆನ್ ಫಿಲಿಫ್ಸ್, ಡೇರಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್, ಟ್ರೆಂಟ್ ಬೌಲ್ಟ್.

ಇಂಗ್ಲೆಂಡ್: ಅಲೆಕ್ಸ್ ಹೇಲ್ಸ್, ಜೋಸ್ ಬಟ್ಲರ್(ನಾಯಕ), ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್‌, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್‌, ಆದಿಲ್ ರಶೀದ್, ಮಾರ್ಕ್‌ ವುಡ್.

ಪಂದ್ಯ: ಮಧ್ಯಾಹ್ನ 1.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

click me!