ಬ್ರಿಸ್ಬೇನ್ ಮೈದಾನದಲ್ಲಿ ಶ್ರೀಲಂಕಾ-ಆಫ್ಘಾನಿಸ್ತಾನ ಸೆಣಸಾಟ
ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಉಭಯ ತಂಡಗಳು
ಇಂದು ಸೋತ ತಂಡ ಅಧಿಕೃತವಾಗಿ ಸೆಮೀಸ್‌ನಿಂದ ಔಟ್
ಬ್ರಿಸ್ಬೇನ್(ನ.01): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 32ನೇ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಳ್ಳುವ ದೃಷ್ಟಿಯಿಂದ ಉಭಯ ತಂಡಗಳ ಪಾಲಿಗೆ ಈ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದ್ದು, ಸೋತ ತಂಡವು ಅಧಿಕೃತವಾಗಿ ಸೆಮೀಸ್ ರೇಸ್‌ನಿಂದ ಹೊರಬೀಳಲಿದೆ.
ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ದ ಗಾಬಾ ಮೈದಾನ ಆತಿಥ್ಯವನ್ನು ವಹಿಸಿದ್ದು, ಆಫ್ಘಾನ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಆರಂಭಿಕ ಬ್ಯಾಟರ್ ಹಝರತ್ತುಲ್ಲಾ ಝಝೈ ಬದಲಿಗೆ ಗುಲ್ಬದ್ದೀನ್ ನೈಬ್ ತಂಡ ಕೂಡಿಕೊಂಡಿದ್ದಾರೆ.
undefined
ಇಂಗ್ಲೆಂಡ್ ವಿರುದ್ಧದ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಆಫ್ಘನ್‌ಗೆ ಬಳಿಕ ಮಳೆರಾಯ ತೀವ್ರವಾಗಿ ಕಾಡಿದ್ದು, ನ್ಯೂಜಿಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಪಂದ್ಯ ರದ್ದಾಗಿದ್ದರಿಂದ ತಂಡ ಸದ್ಯ 2 ಅಂಕಗಳನ್ನಷ್ಟೇ ಹೊಂದಿದೆ. ಹೀಗಾಗಿ ಇನ್ನುಳಿದ ಎರಡೂ ಪಂದ್ಯಗಳನ್ನು ಜಯಿಸಿ, ಇತರೆ ತಂಡಗಳ ಫಲಿತಾಂಶ ಆಫ್ಘಾನಿಸ್ತಾನ ಪರವಾಗಿ ಬಂದರಷ್ಟೇ ಆಫ್ಘಾನ್ ತಂಡವು ಅಂತಿಮ ನಾಲ್ಕರಘಟ್ಟ ಪ್ರವೇಶಿಸಲಿದೆ.
ಇನ್ನು ಶ್ರೀಲಂಕಾ ತಂಡವು ಬ್ಯಾಟಿಂಗ್‌ನಲ್ಲಿ ಧನಂಜಯ್ ಡಿ ಸಿಲ್ವಾ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕಾ ಹಾಗೂ ಭನುಕಾ ರಾಜಪಕ್ಸಾ ಅವರನ್ನು ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್‌ನಲ್ಲಿ ಮತ್ತೊಮ್ಮೆ ಕಮಾಲ್ ಮಾಡಲು ವನಿಂದು ಹಸರಂಗ ಹಾಗೂ ಮಹೀಶ್ ತೀಕ್ಷಣ ಸಜ್ಜಾಗಿದ್ದಾರೆ.
ಸದ್ಯ ಆಫ್ಘಾನಿಸ್ತಾನ ತಂಡವು ಒಂದು ಸೋಲು ಹಾಗೂ ಎರಡು ರದ್ದಾದ ಪಂದ್ಯಗಳ ಸಹಿತ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನೊಂದೆಡೆ ದಶುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡವು ಒಂದು ಗೆಲುವು ಹಾಗೂ 2 ಸೋಲುಗಳೊಂದಿಗೆ 2 ಅಂಕಗಳ ಸಹಿತ ಗ್ರೂಪ್ 1 ವಿಭಾಗದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ತಂಡಗಳು ಹೀಗಿವೆ ನೋಡಿ
ಆಫ್ಘಾನಿಸ್ತಾನ: ಗುಲ್ಬದ್ದೀನ್ ನೈಬ್, ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಉಸ್ಮಾನ್ ಘನಿ, ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್‌ಝೈ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಫರೀದ್ ಅಹಮ್ಮದ್, ಫಜಲ್‌ಹಕ್ ಪಾರೂಕಿ.
ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಶುನ್ ಶನಕಾ, ವನಿಂದು ಹಸರಂಗ, ಪ್ರಮೋದ್ ಮಧುಶನ್, ಮಹೀಶ್ ತೀಕ್ಷಣ, ಕುಸನ್ ರಜಿತಾ, ಲಹಿರು ಕುಮಾರ.
ಪಂದ್ಯ: ಬೆಳಗ್ಗೆ 9.30ಕ್ಕೆ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್