
ಲಾಹೋರ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡ ಶುಕ್ರವಾರ ಮಹತ್ವದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವೂ 'ಬಿ' ಗುಂಪಿನಿಂದ ಸೆಮಿಫೈನಲ್‌ಗೇರುವ ತಂಡವನ್ನು ನಿರ್ಧರಿಸಲಿದೆ.
ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ದೊಡ್ಡ ಮೊತ್ತ ಚೇಸ್ ಮಾಡಿ ಗೆದ್ದಿದ್ದ ಆಸ್ಟ್ರೇಲಿಯಾ, ದ.ಆಫ್ರಿಕಾ ವಿರುದ್ಧದ ಪಂದ್ಯ ಮಳೆಗೆ ಬಲಿಯಾದ ಕಾರಣ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಆಸೀಸ್ ಬಳಿ 3 ಸೋಲುಂಡರೂ, ಅಂಕಗಳಿದ್ದು ಈ ಪಂದ್ಯದಲ್ಲಿ ಗೆದ್ದರೆ ಸೆಮೀಸ್‌ನಲ್ಲಿ ಸ್ಥಾನ ಪಡೆಯಲಿದೆ. ಮೊದಲ ಪಂದ್ಯದಲ್ಲಿದ ಆಫ್ರಿಕಾ ವಿರುದ್ಧ ಸೋತು 2ನೇ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸೋಲುಣಿಸಿದ ಆಫ್ಘನ್ ತನ್ನ ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಆಸೀಸ್ ವಿರುದ್ಧ ಗೆದ್ದಿದ್ದ ಅಫ್ಘಾನಿಸ್ತಾನ ಮತ್ತೊಮ್ಮೆ ಅಚ್ಚರಿಯ ಫಲಿತಾಂಶ ದಾಖಲಿಸಲು ಎದುರು ನೋಡುತ್ತಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತರೆ, ಆಗ ದ.ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಆಫ್ಘಾನ್ ಗೆಲ್ಲುತ್ತಿದ್ದಂತೆ ತಲೆಕೆಳಗಾದ ಸೆಮೀಸ್ ಲೆಕ್ಕಾಚಾರ! ಗ್ರೂಪ್ ಹಂತದಲ್ಲೇ ಹೊರಬೀಳುತ್ತಾ ಆಸೀಸ್?
ಪಂದ್ಯಕ್ಕೆ ಮಳೆ ಕಾಟ?: ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ 2 ಪಂದ್ಯಗಳು ಮಳೆಗೆ ಬಲಿಯಾದ ಬಳಿಕ ಇದೀಗ ಲಾಹೋರ್‌ನಲ್ಲಿ ನಡೆ ಯಬೇಕಿರುವ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ರದ್ದಾದರೆ, ಆಸೀಸ್ ಸೆಮೀಸ್‌ಗೇರಲಿದೆ. ಅದೇ ರೀತಿ ಆಫ್ಘಾನಿಸ್ತಾನದ ಸೆಮೀಸ್‌ಗೇರುವ ಕನಸು ನುಚ್ಚುನೂರಾಗಲಿದೆ.
ಆಫ್ಘಾನಿಸ್ತಾನ ತಂಡವು ಇದುವರೆಗೂ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಎದುರು ಗೆಲುವು ಸಾಧಿಸಿಲ್ಲ. ಇಂದು ಒಂದು ವೇಳೆ ಗೆದ್ದರೇ ಎರಡು ಇತಿಹಾಸ ನಿರ್ಮಿಸಿದಂತಾಗುತ್ತದೆ. ಮೊದಲನೆಯದ್ದು ಆಸೀಸ್ ಎದುರು ಗೆಲುವು ಹಾಗೂ ಎರಡನೆಯದ್ದು ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೆಮೀಸ್‌ಗೇರಿದ ಸಾಧನೆ ಮಾಡಲಿದೆ. ಇದೆರಡು ಸಾಧ್ಯವಾಗಬೇಕಿದ್ದರೇ ರಶೀದ್ ಖಾನ್, ಮೊಹಮ್ಮದ್ ನಬಿ, ರೆಹಮನುಲ್ಲಾ ಗುರ್ಬಾಜ್, ಕಳೆದ ಪಂದ್ಯದ ಶತಕವೀರ ಇಬ್ರಾಹಿಂ ಜದ್ರಾನ್, ಫಜಲ್‌ಹಕ್ ಫಾರೂಕಿ ಹಾಗೂ ಓಮರ್‌ಝೈ ಅವರಂತಹ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನ ತೋರಬೇಕಿದೆ.
ಇದನ್ನೂ ಓದಿ: ಮುಗ್ಗರಿಸಿ ಬಿದ್ರೂ ಸೊಕ್ಕು ಅಡಗಿಲ್ಲ; ಚಾಂಪಿಯನ್ಸ್ ಟ್ರೋಫಿ ಸೋತ್ರೂ ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್!
ಇನ್ನೊಂದೆಡೆ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಪ್ರಮುಖ ತ್ರಿವಳಿ ವೇಗಿಗಳಾದ ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ಅನುಪಸ್ಥಿತಿಯ ಹೊರತಾಗಿಯೂ ಇಂಗ್ಲೆಂಡ್ ಎದುರು ಗೆದ್ದು ಬೀಗಿತ್ತು. ಮೇಲ್ನೋಟಕ್ಕೆ ಆಸ್ಟ್ರೇಲಿಯಾ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದು, ಇಂದು ಕೂಡಾ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ಆಸೀಸ್ ಬ್ಯಾಟಿಂಗ್‌ನಲ್ಲಿ ಟ್ರ್ಯಾವಿಸ್ ಹೆಡ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಜೋಶ್ ಇಂಗ್ಲಿಶ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.
ಈಗಾಗಲೇ 'ಎ' ಗುಂಪಿನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮೀಸ್ ಪ್ರವೇಶ ಪಡೆದಿದ್ದು, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಸೆಮೀಸ್ ರೇಸ್‌ನಿಂದ ಹೊರಬಿದ್ದಿವೆ.
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.