ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ! ಕನ್ನಡಿಗನಿಗೆ ನಿರಾಸೆ

Published : Jan 18, 2025, 03:07 PM ISTUpdated : Jan 18, 2025, 03:23 PM IST
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ! ಕನ್ನಡಿಗನಿಗೆ ನಿರಾಸೆ

ಸಾರಾಂಶ

ರೋಹಿತ್ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ. ಶುಭ್‌ಮನ್ ಗಿಲ್ ಉಪನಾಯಕ. ಕರುಣ್ ನಾಯರ್‌ಗೆ ಸ್ಥಾನವಿಲ್ಲ. ಪಾಕಿಸ್ತಾನ ಆತಿಥ್ಯ ವಹಿಸಿದರೂ, ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಫೆಬ್ರವರಿ ೧೯ ರಿಂದ ಟೂರ್ನಿ ಆರಂಭ.

ಮುಂಬೈ: ಮಿನಿ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ಆದರೆ ವಿಜಯ್ ಹಜಾರೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಾ ಬಂದಿದ್ದ ಕನ್ನಡಿಗ ಕರುಣ್ ನಾಯರ್‌ಗೆ ಮತ್ತೊಮ್ಮೆ ನಿರಾಸೆ ಎದುರಾಗಿದ್ದು, ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾಟಗಳು ನಡೆಯಲಿವೆ. ಫೆಬ್ರವರಿ 19ರಿಂದ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಭಾರತ ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ಹೌದು,  2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದ ಭಾರತ ತಂಡವು ಇದೀಗ ಮತ್ತೊಮ್ಮೆ ಕಪ್ ಗೆಲ್ಲುವ ಕನವರಿಕೆಯಲ್ಲಿದೆ. ಕಳೆದ ವರ್ಷ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಜಯಿಸಿದ್ದ ಟೀಂ ಇಂಡಿಯಾ, ಇದೀಗ ಮಿನಿ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸಜ್ಜಾಗಿದೆ.

ಸೊಕ್ಕು ಮಾಡಿದ ಸಂಜು ಸ್ಯಾಮ್ಸನ್‌ಗೆ ಬಿಗ್ ಶಾಕ್? ತನಿಖೆಗೆ ಮುಂದಾದ ಬಿಸಿಸಿಐ!

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅಜಿತ್‌ ಅಗರ್‌ಕರ್ ನೇತೃತ್ವದ ಆಯ್ಕೆ ಸಮಿತಿಯು ಸಾಕಷ್ಟು ಅಳೆದುತೂಗಿ ತಂಡವನ್ನು ಆಯ್ಕೆ ಮಾಡಿದೆ. ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಜತೆಗೆ ಬ್ಯಾಕ್‌ಅಪ್ ಓಪನ್ನರ್ ಆಗಿ ಯಶಸ್ವಿ ಜೈಸ್ವಾಲ್‌ಗೆ ತಂಡದಲ್ಲಿ ಮಣೆ ಹಾಕಲಾಗಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ. 

ಇನ್ನು ಆಲ್ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಜತೆಗೆ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಕೂಡಾ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ವೇಗದ ಬೌಲರ್‌ಗಳ ರೂಪದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಆರ್ಶದೀಪ್ ಸಿಂಗ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕುಲ್ದೀಪ್ ಯಾದವ್ ಭಾರತ ತಂಡದಲ್ಲಿ ಸ್ಥಾನ ಪಡೆದ ಏಕೈಕ ತಜ್ಞ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. 

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಎರಡು ತಂಡಗಳು ಫೈನಲ್‌ ಆಡಲಿವೆ: ಭವಿಷ್ಯ ನುಡಿದ ನಾಸಿರ್ ಹುಸೇನ್

ಸಂಜು, ಸಿರಾಜ್, ಕರುಣ್‌ಗೆ ಶಾಕ್: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಇಬ್ಬರು ಆಟಗಾರರನ್ನು ಆಯ್ಕೆ ಸಮಿತಿ ತಂಡದಿಂದ ಕೈಬಿಟ್ಟಿದೆ. ಇನ್ನು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ವಿದರ್ಭ ತಂಡದ ನಾಯಕರಾಗಿ ಅಮೋಘ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಬಾಗಿಲು ಬಡಿಯುತ್ತಿರುವ ಕನ್ನಡಿಗ ಕರುಣ್ ನಾಯರ್‌ಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಕರುಣ್ ನಾಯರ್, ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯಕ್ಕೂ ಮುನ್ನ ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ 752 ರನ್ ಕಲೆಹಾಕಿದ್ದಾರೆ. ಹೀಗಿದ್ದೂ ಕರುಣ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಆರ್ಶದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!