
ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಮಧ್ಯಾಹ್ನ 2.30ಕ್ಕೆ ಹೈವೋಲ್ಟೇಜ್ ಪಂದ್ಯ ಆರಂಭವಾಗಲಿದೆ. ದುಬೈ ಅಂತಾರಾಷ್ಟ್ರೀಯ ಮೈದಾನವು ಈ ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ವೇದಿಕೆಯಾಗಲಿದೆ. ಈಗಾಗಲೇ ಎರಡೂ ತಂಡಗಳು ತಮ್ಮ ಸೆಮೀಸ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಒಂದು ರೀತಿಯಲ್ಲಿ ಈ ಪಂದ್ಯ ಔಪಚಾರಿಕ ಎನಿಸಿಕೊಂಡಿದೆಯಾದರೂ ಈ ಪಂದ್ಯದ ಸೋಲು-ಗೆಲುವು ಸೆಮೀಸ್‌ನಲ್ಲಿ ಯಾರ ಮೇಲೆ ಮುಖಾಮುಖಿಯಾಗಬಹುದು ಎನ್ನುವುದನ್ನು ನಿರ್ಧರಿಸಲಿದೆ ಇನ್ನು ಈ ಪಂದ್ಯದಲ್ಲಿ ಭಾರತ ತಂಡವು ಪ್ರಮುಖ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.
ಉಭಯ ತಂಡಗಳು ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಇದೀಗ ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಜಯಿಸುವ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿವೆ. ಇನ್ನು ಗ್ರೂಪ್ ಹಂತದ ಮುಕ್ತಾದ ಬಳಿಕ ಮೊದಲ ಸೆಮೀಸ್ ಪಂದ್ಯದಲ್ಲಿ ಭಾರತ ತಂಡವು ಕಾದಾಡಲಿದೆ. ಹೀಗಾಗಿ ಮೊದಲ ಸೆಮೀಸ್ ಪಂದ್ಯವು ಮಾರ್ಚ್ 04ರಂದು ನಡೆಯಲಿದೆ. ಗ್ರೂಪ್ ಹಂತದ ಕೊನೆಯ ಪಂದ್ಯಕ್ಕೂ ಹಾಗೂ ಮೊದಲ ಸೆಮೀಸ್ ಕದನಕ್ಕೆ ಕೇವಲ ಒಂದು ದಿನ ಅಂತರ ಇರುವುದರಿಂದಾಗಿ ಭಾರತ ತಂಡವು ಪ್ರಮುಖ ಮೂರು ಆಟಗಾರರಿಗೆ ವಿಶ್ರಾಂತಿ ನೀಡಿ ಕಿವೀಸ್ ಎದುರಿನ ಪಂದ್ಯಕ್ಕೆ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಪಾಕ್‌ಗೆ ಸಿಕ್ತು ಐಸಿಸಿಯಿಂದ ಕೋಟಿ-ಕೋಟಿ ನಗದು ಬಹುಮಾನ!
ಮಾಧ್ಯಮಗಳ ವರದಿಯ ಪ್ರಕಾರ ಸ್ವತಃ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ರೋಹಿತ್ ಶರ್ಮಾ ಮೊದಲೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿದ್ದಾರೆ. ಒಂದು ವೇಳೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಹೊರಗುಳಿದರೆ ಶುಭ್‌ಮನ್ ಗಿಲ್ ನಾಯಕರಾಗಿ ಕಾರ್ಯನಿರ್ವಹಿಸಲಿದ್ದು, ಕನ್ನಡಿಗ ಕೆ ಎಲ್ ರಾಹುಲ್, ಗಿಲ್ ಜತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ರಿಷಭ್ ಪಂತ್ ವಿಕೆಟ್ ಕೀಪರ್ ರೂಪದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನು ಆಲ್ರೌಂಡರ್ ರೂಪದಲ್ಲಿ ಕಣಕ್ಕಿಳಿದಿರುವ ಅನುಭವಿ ಆಟಗಾರರಾಗಿರುವ ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಈ ಇಬ್ಬರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡಿ ಟೀಂ ಮ್ಯಾನೇಜ್‌ಮೆಂಟ್ ವಾಷಿಂಗ್ಟನ್ ಸುಂದರ್‌ಗೆ ಆಡುವ ಹನ್ನೊಂದರ ಬಳಗಕ್ಕೆ ಮಣೆ ಹಾಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: 'ಇದು ನನ್ನ ಕೊನೆಯ ಐಸಿಸಿ ಟೂರ್ನಿ': ದಿಢೀರ್ ಎನ್ನುವಂತೆ ಅಚ್ಚರಿ ನಿರ್ಧಾರ ಪ್ರಕಟಿಸಿದ ಸ್ಟಾರ್ ಕ್ರಿಕೆಟಿಗ!
ಅಷ್ಟೇನು ಮಹತ್ವವಲ್ಲದ ಈ ಪಂದ್ಯಕ್ಕೆ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದ್ದು, ಶಮಿ ಬದಲಿಗೆ ಎಡಗೈ ವೇಗಿಯಾಗಿರುವ ಅರ್ಶದೀಪ್ ಸಿಂಗ್‌ಗೆ ಭಾರತ ತಂಡದೊಳಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಅರ್ಶದೀಪ್ ಸಿಂಗ್ ಕೂಡಾ ಇದುವರೆಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನಾಡಿಲ್ಲ. ಒಂದು ವೇಳೆ ಶಮಿ ತಂಡದಿಂದ ಹೊರಗುಳಿದರೆ, ಹರ್ಷಿತ್ ರಾಣಾ ಜತೆ ಅರ್ಶದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ದಾಳಿ ನಡೆಸುವ ಸಾಧ್ಯತೆಯಿದೆ. ಇನ್ನು ಕುಲ್ದೀಪ್ ಯಾದವ್ ಬದಲಿಗೆ ವರುಣ್ ಚಕ್ರವರ್ತಿಗೆ ಮಣೆ ಹಾಕಿದರೂ ಅಚ್ಚರಿಯೇನಿಲ್ಲ.
ನ್ಯೂಜಿಲೆಂಡ್ ಎದುರಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ:
ಶುಭ್‌ಮನ್ ಗಿಲ್(ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್/ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್/ವರುಣ್ ಚಕ್ರವರ್ತಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.