
ಬೆಂಗಳೂರು: ಬಹುನಿರೀಕ್ಷಿತ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 22ರಿಂದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.
ಇನ್ನು ಈ ಟೂರ್ನಿ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಮತ್ತೊಮ್ಮೆ ಆರ್‌ಸಿಬಿ ತಂಡದ ಮೇಲೆ ವಿಷಕಾರಿದ್ದಾರೆ. ಈ ಬಾರಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕಪ್ ಗೆಲ್ಲುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಪಾಲ್ಗೊಳ್ಳುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಆರ್‌ಸಿಬಿ ತಂಡವು ಕಪ್ ಗೆಲ್ಲುವುದಿಲ್ಲ ಎಂದಿರುವ ರಾಯುಡು, ಧೋನಿ ಪಾಲಿಗೆ ಕೊನೆಯ ಟೂರ್ನಿ ಎನಿಸಿರುವ ಚೆನ್ನೈ ಈ ಬಾರಿ ಮತ್ತೊಮ್ಮೆ ಐಪಿಎಲ್ ಕಪ್ ಗೆಲ್ಲುವ ಸಾಧ್ಯತೆಯಿದೆ ಎಂದು ಸುಳಿವು ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ: ಕಿವೀಸ್ ಎದುರಿನ 25 ವರ್ಷ ಹಿಂದಿನ ಲೆಕ್ಕ ಚುಕ್ತಾ ಮಾಡಿದ ಭಾರತ!
'ಸಮಯ ಬಂದಾಗ ಆರ್‌ಸಿಬಿ ತಂಡವು ಕಪ್ ಗೆಲ್ಲಲಿದೆ, ಆದರೆ ಈ ವರ್ಷ ಮಾತ್ರ ಅವರು ಕಪ್ ಗೆಲ್ಲಬಾರದು ಎಂದು ಪ್ರಾರ್ಥಿಸುತ್ತೇನೆ' ಎಂದು ಅಂಬಟಿ ರಾಯುಡು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕೋಟ್ಯಾಂತರ ನಂಬಿಗಸ್ಥ ಫ್ಯಾನ್ ಬೇಸ್ ಹೊಂದಿದೆ. ತಂಡದ ಸೋಲು ಗೆಲುವಿನ ಪ್ರತಿ ಸಂದರ್ಭದಲ್ಲೂ ಆರ್‌ಸಿಬಿ ಫ್ಯಾನ್ಸ್ ತಮ್ಮ ತಂಡವನ್ನು ಬಿಟ್ಟುಕೊಟ್ಟಿಲ್ಲ. ಆರ್‌ಸಿಬಿ ತಂಡವು ಮೂರು ಬಾರಿ ಫೈನಲ್‌ಗೇರಿದ್ದೇ ಶ್ರೇಷ್ಠ ಸಾಧನೆ ಎನಿಸಿಕೊಂಡಿದೆ. ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಆರ್‌ಸಿಬಿ ಫ್ರಾಂಚೈಸಿಯು ಹೊಸ ಹುರುಪಿನೊಂದಿಗೆ ಸಜ್ಜಾಗಿದೆ. ಇದರ ಭಾಗವಾಗಿ ಮಧ್ಯಪ್ರದೇಶ ಮೂಲದ ರಜತ್ ಪಾಟೀದಾರ್‌ಗೆ ಆರ್‌ಸಿಬಿ ತಂಡದ ನಾಯಕತ್ವ ಪಟ್ಟ ಕಟ್ಟಿದೆ. ಈ ಬಾರಿ ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಅಂಬಟಿ ರಾಯುಡು ಬಹಿರಂಗವಾಗಿಯೇ ಆರ್‌ಸಿಬಿ ಕಪ್ ಗೆಲ್ಲಬಾರದೆಂದು ಪ್ರಾರ್ಥಿಸುತ್ತೇನೆ ಎಂದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಭಾರತ ಎದುರು ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋತಿದ್ದೇಕೆ? ಅಚ್ಚರಿ ಕಾರಣ ಕೊಟ್ಟ ಕಿವೀಸ್ ನಾಯಕ ಸ್ಯಾಂಟ್ನರ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜೋಶ್ ಹೇಜಲ್‌ವುಡ್, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಖರೀದಿಸಿದೆ. ಇದರ ಜತೆಗೆ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಹಾಗೂ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿದೆ. ಮೇಲ್ನೋಟಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಕಷ್ಟು ಸಮತೋಲಿತವಾಗಿ ಗುರುತಿಸಿಕೊಂಡಿದೆ. ಈ ಬಾರಿಯಾದರೂ ಆರ್‌ಸಿಬಿ ತಂಡವು ಕಪ್ ಗೆಲ್ಲುವ ಮೂಲಕ ಅಭಿಮಾನಿಗಳ ಕನಸನ್ನು ನನಸು ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.