
ಕನ್ನಡಪ್ರಭ ವಿಶೇಷ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ವರ್ಷ ಐಪಿಎಲ್ ಚಾಂಪಿಯನ್ ಆಗಿ ಕೋಟ್ಯಾಂತರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಕಳೆದ ವರ್ಷ ಆರ್‌ಸಿಬಿ ಟ್ರೋಫಿ ಗೆದ್ದಾಗ ಅದನ್ನು ಭಾವನಾತ್ಮಕವಾಗಿ ಕಾಣಲಾಗಿತ್ತು. ಆದರೆ ಈ ಸಲ ಆರ್‌ಸಿಬಿ ಗೆಲುವಿನ ಹಿಂದಿನ ಸೂತ್ರಗಳೇನು ಎನ್ನುವುದನ್ನು ಅವಲೋಕಿಸಿದಾಗ, ಹಲವು ಅಚ್ಚರಿಯ ವಿಚಾರಗಳು ತೆರೆದುಕೊಳ್ಳುತ್ತವೆ. ಅವುಗಳೆಲ್ಲದರ ವಿವರಣೆ, ವಿಶ್ಲೇಷಣೆ ಇಲ್ಲಿದೆ
ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಸಮತೋಲನ. ಪ್ರತಿ ಪಂದ್ಯದಲ್ಲೂ 8 ಬ್ಯಾಟಿಂಗ್, 6 ಬೌಲಿಂಗ್ ಆಯ್ಕೆಗಳು. ಬೌಲರ್‌ಗಳಿಗೂ ಬ್ಯಾಟ್ ಮಾಡುವ ಸಾಮರ್ಥ್ಯ. ರಾಯ್ಪುರದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ನಿರ್ಣಾಯಕ ಪಂದ್ಯವನ್ನು ಭುವನೇಶ್ವರ್, ರಸಿಕ್ ಗೆಲ್ಲಿಸಿಕೊಟ್ಟಿದ್ದೇ ಇದಕ್ಕೆ ಉದಾಹರಣೆ.
ಆರ್‌ಸಿಬಿ ಟೂರ್ನಿಯುದ್ದಕ್ಕೂ ರಕ್ಷಣಾತ್ಮಕ ಆಟವಾಡದೆ, ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡಿತು. ಹಲವು ಪಂದ್ಯಗಳಲ್ಲಿ ಒತ್ತಡಕ್ಕೆ ಒಳಗಾದರೂ, ತನ್ನ ಆಕ್ರಮಣಕಾರಿ ಆಟ ಬಿಡದ ತಂಡ. ಮುಂಬೈ, ಲಖನೌ ವಿರುದ್ಧದ ಪಂದ್ಯಗಳಲ್ಲಿ ತಂಡದ ತೋರಿದ ಹೋರಾಟವೇ ಇದಕ್ಕೆ ಸಾಕ್ಷಿ.
ಆರ್‌ಸಿಬಿಯ ಗೆಲುವಿನ ಸೂತ್ರ ಬಹಳ ಸರಳ. ಪವರ್-ಪ್ಲೇನಲ್ಲಿ ಎದುರಾಳಿ ಮೇಲೆ ಮೇಲುಗೈ ಸಾಧಿಸಿ, ಪಂದ್ಯ ತನ್ನತ್ತ ವಾಲುವಂತೆ ಮಾಡುವುದು. ಬ್ಯಾಟಿಂಗ್ ವೇಳೆ ಪವರ್-ಪ್ಲೇ (ಮೊದಲ 6 ಓವರ್)ನಲ್ಲಿ ಸರಾಸರಿ 10ಕ್ಕೂ ಹೆಚ್ಚು ರನ್‌ರೇಟ್‌ನಲ್ಲಿ 900ಕ್ಕೂ ಹೆಚ್ಚು ರನ್ ಗಳಿಸಿದರೆ, ಬೌಲಿಂಗ್‌ನಲ್ಲಿ ಮೊದಲ 6 ಓವರಲ್ಲಿ 33ಕ್ಕೂ ಹೆಚ್ಚು ವಿಕೆಟ್ ಉರುಳಿಸಿದೆ. ತಂಡದ ಯಶಸ್ಸಿಗೆ ಇದೂ ಪ್ರಮುಖ ಕಾರಣ. ಇನ್ನು, ಬಹುತೇಕ ತಂಡಗಳು ಸೋಲಲು 7-15ನೇ ಓವರ್‌ನಲ್ಲಿ ರನ್ ಗಳಿಕೆ ವೇಗ ಕಳೆದುಕೊಳ್ಳುವುದೇ ಕಾರಣ. ಆದರೆ ಆರ್‌ಸಿಬಿ ಈ ಹಂತದಲ್ಲೂ ಉತ್ತಮ ಆಟವಾಡಿ, ಡೆತ್ ಓವರ್‌ಗಳಲ್ಲಿ ಎದುರಾಳಿಗಳ ಮೇಲೆ ಸವಾರಿ ಮಾಡಿದೆ.
ಕಳೆದ ವರ್ಷ ಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಿಕೊಂಡಿದ್ದ ರಜತ್ ಪಾಟೀದಾರ್‌ಗೆ ಮೈದಾನದಲ್ಲಿ ವಿರಾಟ್ ಕೊಹ್ಲಿಯಿಂದ ಹಲವು ಸಲಹೆಗಳು ಸಿಗುತ್ತಿದ್ದನ್ನು ನೋಡಿದ್ದೆವು. ಆದರೆ, ಈ ವರ್ಷ ರಜತ್ ಅನುಭವಿ ನಾಯಕನಂತೆ ಕಾರ್ಯನಿರ್ವಹಿಸಿದರು. ಬೌಲರ್‌ಗಳ ನಿರ್ವಹಣೆ, ಫೀಲ್ಡ್ ಪ್ಲೇಸ್‌ಮೆಂಟ್, ಬ್ಯಾಟರ್‌ಗಳ ಬಳಕೆಗೆ ರಜತ್‌ಗೆ ಫುಲ್ ಮಾರ್ಕ್ಸ್ ಕೊಡಲೇಬೇಕು.
ಆರ್‌ಸಿಬಿ ಕೋಚಿಂಗ್ ಸಿಬ್ಬಂದಿ ಪ್ರಕಾರ, ರಜತ್ ಪಂದ್ಯಕ್ಕೆ ಮುನ್ನ ಹೆಚ್ಚು ಮಾತನಾಡುವುದಿಲ್ಲ. ಅತಿಯಾಗಿ ಆಲೋಚಿಸುವುದಿಲ್ಲ. ಕೋಚ್, ವಿಶ್ಲೇಷಕರ ಜೊತೆ ಅಗತ್ಯಕ್ಕಿಂತ ಹೆಚ್ಚು ರಣತಂತ್ರಗಳನ್ನು ನಿರ್ಧರಿಸುವುದಿಲ್ಲ. ಆದರೆ ಪಂದ್ಯ ಶುರುವಾದ ಬಳಿಕ ಅವರು ಪರಿಸ್ಥಿತಿಗೆ ತಕ್ಕಂತೆ ತಮ್ಮ ಯೋಜನೆಗಳನ್ನು ಬದಲಿಸುತ್ತಾರೆ. ತಮ್ಮ ನಿರ್ಧಾರಗಳಿಗೆ ಬದ್ಧರಾಗಿರುತ್ತಾರೆ. ಇದು ಅವರ ಯಶಸ್ವಿ ನಾಯಕತ್ವದ ಹಿಂದಿರುವ ಗುಟ್ಟು.
2-3 ಸೂಪರ್ ಸ್ಟಾರ್‌ಗಳ ಮೇಲೆ ಹೆಚ್ಚು ಅವಲಂಬನೆಗೊಳ್ಳುವುದು ಬಿಟ್ಟು, ಮ್ಯಾಚ್ ವಿನ್ನರ್‌ಗಳ ಪಡೆಯನ್ನೇ ಆರ್‌ಸಿಬಿ ಕಟ್ಟಿದೆ. ತಂಡದ ಪ್ರತಿಯೊಬ್ಬ ಆಟಗಾರನಲ್ಲೂ ಏಕಾಂಗಿಯಾಗಿ ಮ್ಯಾಚ್ ಗೆಲ್ಲಿಸಬಲ್ಲ. ಫೈನಲ್‌ಗೂ ಮುನ್ನ ಆರ್‌ಸಿಬಿ ಗೆದ್ದ 10 ಪಂದ್ಯಗಳಲ್ಲಿ 8 ಬೇರೆ ಬೇರೆ ಆಟಗಾರರು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದೇ ಇದಕ್ಕೆ ಸಾಕ್ಷಿ.
ಟಾಸ್ ನಿರ್ಣಾಯಕ ಎನ್ನುವ ಅಂಶವನ್ನೇ ಮರೆಯಾಗಿಸಿದ ಆರ್‌ಸಿಬಿ. ಟಾಸ್‌ಗೆ ಹೆಚ್ಚಿನ ಮಹತ್ವ ನೀಡದೆ, ತನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಯಶಸ್ಸು ಕಂಡ ತಂಡ.
ಯಾವುದೇ ಒಂದು ತಂಡ ಯಶಸ್ವಿ ತಂಡವಾಗಿ ಬದಲಾಗಬೇಕಿದ್ದರೆ, ತಂಡದ ಆಡಳಿತ ತನ್ನ ಆಟಗಾರರ ಮೇಲೆ ಸಂಪೂರ್ಣ ವಿಶ್ವಾಸವಿರಿಸಿ, ಅವರ ಬೆನ್ನಿಗೆ ನಿಲ್ಲಬೇಕು. ಈ ಆವೃತ್ತಿಯಲ್ಲಿ ಜಿತೇಶ್ ಶರ್ಮಾ, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ತಂಡ ಅವರನ್ನು ನಿರಂತರವಾಗಿ ಬೆಂಬಲಿಸಿತು. ಅಲ್ಲದೇ, ಯುವ ವೇಗಿ ರಸಿಕ್ ಸಲಾಂಗೆ ದೊಡ್ಡ ಜವಾಬ್ದಾರಿ ನೀಡಿದ್ದು ಸಹ, ತಂಡ ತನ್ನ ಆಟಗಾರರನ್ನು ಎಷ್ಟರ ಮಟ್ಟಿಗೆ ಬೆಂಬಲಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿ.
ಆರ್‌ಸಿಬಿ ಆಟಗಾರರ ಹರಾಜಿನಲ್ಲೇ ಅರ್ಧ ಚಾಂಪಿಯನ್‌ಶಿಪ್ ಗೆದ್ದಿತ್ತು ಎನ್ನುವುದಕ್ಕೆ ತಂಡದ ಬೆಂಚ್ ಬಲವೇ ಸಾಕ್ಷಿ. ಹೇಜಲ್‌ವುಡ್‌ಗೆ ಪರ್ಯಾಯವಾಗಿ ಜೇಕಬ್ ಡಫಿ, ದೇವದತ್ ಪಡಿಕ್ಕಲ್ ಲಯ ಕಳೆದುಕೊಂಡರೆ ಬೇಕಾಗಬಹುದು ಎಂದು ವೆಂಕಟೇಶ್ ಅಯ್ಯರ್, ಫಿಲ್ ಸಾಲ್ಟ್ ಫೇಲಾದರೆ ಅಥವಾ ಗಾಯಗೊಂಡರೆ ಆ ಜಾಗಕ್ಕೆ ಜೇಕಬ್ ಬೆಥೆಲ್, ಅವರೂ ಫೇಲಾದರೆ ಆಗ ಆತಂಕಕ್ಕೆ ಒಳಗಾಗುವುದನ್ನು ತಪ್ಪಿಸಲು ಜಾರ್ಡನ್ ಕಾಕ್ಸ್, ಅಭಿನಂದನ್ ಸಿಂಗ್ ನಿರೀಕ್ಷೆ ಉಳಿಸಿಕೊಳ್ಳದೆ ಇದ್ದಾಗ ಅವರ ಜಾಗಕ್ಕೆ ರಸಿಕ್ ಸಲಾಂ, ಎಡಗೈ ವೇಗಿತ ಅಗತ್ಯ ಎದುರಾದರೆ ಎಂಬ ಮುಂದಾಲೋಚನೆಯೊಂದಿಗೆ ಮಂಗೇಶ್ ಯಾದವ್. ಹೀಗೆ, ಬಹುತೇಕ ಎಲ್ಲ ಪ್ರಮುಖ ಆಟಗಾರರಿಗೂ ಅಷ್ಟೇ ಸಾಮರ್ಥ್ಯವುಳ್ಳ ಬದಲಿ ಆಟಗಾರರನ್ನು ಹೊಂದಿಸಿಕೊಂಡಿದ್ದು ಆರ್‌ಸಿಬಿಯ ಅತಿದೊಡ್ಡ ಪ್ಲಸ್ ಪಾಯಿಂಟ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.