IPL 2026 ಕಪ್‌ ಮೇಲೆ ಕಪ್‌ ಗೆದ್ದ ಆರ್‌ಸಿಬಿ! ಬೆಂಗಳೂರಿಗೆ ಮತ್ತೊಂದು ಕಿರೀಟ

Kannadaprabha News   | Kannada Prabha
Published : Jun 01, 2026, 07:22 AM IST
IPL 2026 Champions

ಸಾರಾಂಶ

2026ರ ಐಪಿಎಲ್ ಫೈನಲ್‌ನಲ್ಲಿ, ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್‌ಗಳ ಜಯ ಸಾಧಿಸಿ ಚಾಂಪಿಯನ್ ಆಗಿದೆ. 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ವಿರಾಟ್ ಕೊಹ್ಲಿಯವರ ಅಜೇಯ 75 ರನ್‌ಗಳ ನೆರವಿನಿಂದ 18 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.

ಅಹಮದಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕಪ್‌ ಮೇಲೆ ಕಪ್‌ ಗೆದ್ದಿದೆ. ಎಲ್ಲರ ನಿರೀಕ್ಷೆಯಂತೆ 2026ರ ಐಪಿಎಲ್‌ನಲ್ಲೂ ಚಾಂಪಿಯನ್‌ ಆಗಿದೆ. ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ 5 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ, ಹಾಲಿ ಚಾಂಪಿಯನ್‌ ಪಟ್ಟ ಉಳಿಸಿಕೊಂಡಿತು.

ಟಾಸ್‌ ಗೆದ್ದು ಮೊದಲು ಫೀಲ್ಡ್‌ ಮಾಡಿದ ಆರ್‌ಸಿಬಿ, ಗುಜರಾತ್‌ ಅನ್ನು 20 ಓವರಲ್ಲಿ 8 ವಿಕೆಟ್‌ಗೆ 155 ರನ್‌ಗೆ ನಿಯಂತ್ರಿಸಿತು. ಆರ್‌ಸಿಬಿಯ ಮೊನಚಾದ ಬೌಲಿಂಗ್‌ ಎದುರು ಗುಜರಾತ್‌ ರನ್‌ ಗಳಿಸಲು ಪರದಾಡಿದ್ದಲ್ಲದೇ, ನಿರಂತರವಾಗಿ ವಿಕೆಟ್‌ ಸಹ ಕಳೆದುಕೊಂಡಿತು.

ಗೆಲ್ಲಲು 156 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ತಂಡ ಕೇವಲ 18 ಓವರಲ್ಲಿ ಪಂದ್ಯ ಮುಗಿಸಿ ಸಂಭ್ರಮಿಸಿತು.

ಪವರ್‌-ಪ್ಲೇನಲ್ಲೇ ಗುಜರಾತ್‌ನ ಆರಂಭಿಕರಾದ ಶುಭ್‌ಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ ವಿಕೆಟ್‌ ಕಳೆದುಕೊಂಡರು. ಈ ಆವೃತ್ತಿಯಲ್ಲಿ 700ಕ್ಕೂ ಹೆಚ್ಚು ರನ್‌ ಗಳಿಸಿರುವ ಉಭಯ ಬ್ಯಾಟರ್‌ಗಳನ್ನು ಆರಂಭದಲ್ಲೇ ಪೆವಿಲಿಯನ್‌ಗಟ್ಟಿದ ಆರ್‌ಸಿಬಿ, ಪಂದ್ಯದ ಮೇಲೆ ಹಿಡಿತ ಸಾಧಿಸಿತು. 6 ಓವರ್‌ ಮುಕ್ತಾಯಕ್ಕೆ ಗುಜರಾತ್‌ 2 ವಿಕೆಟ್‌ಗೆ ಕೇವಲ 45 ರನ್‌ ಗಳಿಸಿತು.

ಪವರ್‌-ಪ್ಲೇ ಬಳಿಕವೂ ಜಿಟಿಗೆ ವೇಗವಾಗಿ ರನ್‌ ಗಳಿಸಲು ಆಗಲಿಲ್ಲ. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಿಶಾಂತ್‌ ಸಿಂಧು ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. 10 ಓವರ್‌ ಅಂತ್ಯಕ್ಕೆ ಗುಜರಾತ್‌ 3 ವಿಕೆಟ್‌ಗೆ 63 ರನ್‌ ಗಳಿಸಿತು.

13ನೇ ಓವರಲ್ಲೇ ಮೊದಲ ಸಿಕ್ಸರ್‌: 

ಗುಜರಾತ್‌ ಬೌಂಡರಿ, ಸಿಕ್ಸರ್‌ಗಳ ಗಳಿಕೆಯಲ್ಲೂ ಹಿಂದೆ ಬಿತ್ತು. ತಂಡ ಇನ್ನಿಂಗ್ಸ್‌ನ 13ನೇ ಓವರ್‌ನ 4ನೇ ಎಸೆತದಲ್ಲಿ ಮೊದಲ ಸಿಕ್ಸರ್‌ ಬಾರಿಸಿತು. ಅಲ್ಲದೇ 5.5 ಓವರ್‌ನಿಂದ 12.4 ಓವರ್‌ ನಡುವೆ ಗುಜರಾತ್‌ ಸತತ 40 ಎಸೆತಗಳಲ್ಲಿ ಒಂದೂ ಬೌಂಡರಿ ದಾಖಲಿಸಲಿಲ್ಲ. ಇದು ತಂಡಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿತು.

ಈ ಮಧ್ಯೆ, ಅಪಾಯಕಾರಿ ಬಟ್ಲರ್‌ರನ್ನು ಕೃನಾಲ್‌ ಸ್ಟಂಪ್‌ ಔಟ್‌ ಮಾಡಿದರೆ, ತೆವಾಟಿಯಾ ಆಟ ನಡೆಯಲು ರಸಿಕ್‌ ಬಿಡಲಿಲ್ಲ. ಹೋಲ್ಡರ್‌ಗೆ ಭುವನೇಶ್ವರ್‌ ಪೆವಿಲಿಯನ್‌ ದಾರಿ ತೋರಿಸಿದರು. ಏಕಾಂಗಿ ಹೋರಾಟ ನಡೆಸಿದ ವಾಷಿಂಗ್ಟನ್‌ ಸುಂದರ್‌ 37 ಎಸೆತದಲ್ಲಿ 50 ರನ್‌ ಗಳಿಸಿ ಔಟಾಗದೆ ಉಳಿದರು.

ಮೊದಲ 10 ಓವರಲ್ಲಿ 63 ರನ್‌ ಗಳಿಸಿದ್ದ ಗುಜರಾತ್‌, ಕೊನೆ 10 ಓವರಲ್ಲಿ 92 ರನ್‌ ಗಳಿಸಿತು. ತಂಡದ ಇನ್ನಿಂಗ್ಸ್‌ನಲ್ಲಿ ಒಟ್ಟು 15 ಬೌಂಡರಿ, ಕೇವಲ 3 ಸಿಕ್ಸರ್‌ಗಳಿದ್ದವು.

ಪವರ್‌-ಪ್ಲೇನಲ್ಲಿ ಅಬ್ಬರ: 

ಆರ್‌ಸಿಬಿ ಪವರ್‌-ಪ್ಲೇನಲ್ಲೇ ಪಂದ್ಯವನ್ನು ತನ್ನತ್ತ ವಾಲಿಸಿಕೊಂಡಿತು. ವೆಂಕಟೇಶ್‌ ಅಯ್ಯರ್‌ ಹಾಗೂ ವಿರಾಟ್‌ ಕೊಹ್ಲಿ, ಗುಜರಾತ್ ಬೌಲಿಂಗ್‌ ದಾಳಿಯನ್ನು ಪುಡಿಗುಟ್ಟಿದರು. ಪ್ರಮುಖವಾಗಿ ರಬಾಡಗೆ ಚಳಿ ಬಿಡಿಸಿದರು. 3 ಓವರಲ್ಲಿ ರಬಾಡ 44 ರನ್‌ ಚಚ್ಚಿಸಿಕೊಂಡರು. ವೆಂಕಿ 16 ಎಸೆತದಲ್ಲಿ 32 ರನ್‌ ಚಚ್ಚಿ ಔಟಾದರೆ, ಪಡಿಕ್ಕಲ್‌ ಹೆಚ್ಚು ಸದ್ದು ಮಾಡಲಿಲ್ಲ. ಪವರ್‌-ಪ್ಲೇನಲ್ಲೇ ಆರ್‌ಸಿಬಿ 2 ವಿಕೆಟ್‌ಗೆ 70 ರನ್‌ ದಾಖಲಿಸಿತು.

ಕೊಹ್ಲಿ ಜೊತೆಯಾದ ನಾಯಕ ಪಾಟೀದಾರ್‌, ಸಿರಾಜ್‌ರ ಎಸೆತವೊಂದನ್ನು ದೊಡ್ಡ ಸಿಕ್ಸರ್‌ ಬಾರಿಸಿ ತಮ್ಮ ಉದ್ದೇಶ ಸ್ಪಷ್ಟಪಡಿಸಿದರು. ಆದರೆ, ರಶೀದ್‌ ಖಾನ್‌ರ ಮೊದಲ ಓವರಲ್ಲೇ ರಜತ್‌ ಹಾಗೂ ಕೃನಾಲ್‌ ಔಟಾದರು. 91 ರನ್‌ಗೆ 4 ವಿಕೆಟ್‌ ಕಳೆದುಕೊಂಡ ಆರ್‌ಸಿಬಿ ಕೊಂಚ ಒತ್ತಡಕ್ಕೆ ಸಿಲುಕಿತು. ಆದರೆ, ಕ್ರೀಸ್‌ನಲ್ಲಿ ಚೇಸ್‌ ಮಾಸ್ಟರ್‌ ವಿರಾಟ್‌ ಇನ್ನೂ ಇದ್ದಿದ್ದರಿಂದ ಆರ್‌ಸಿಬಿ ಕಪ್‌ ಆಸೆ ಕೈಚೆಲ್ಲಲಿಲ್ಲ. ಕೊಹ್ಲಿ ಅಜೇಯ 75 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL Final: ಧೋನಿ, ರೋಹಿತ್‌ ಶರ್ಮ ಮೀರಿ ನಿಂತ ರಜತ್‌ ಪಟೀದಾರ್‌, ದಾಖಲೆಗಳೊಂದಿಗೆ 2ನೇ ಬಾರಿ ಚಾಂಪಿಯನ್‌ ಆದ ಆರ್‌ಸಿಬಿ!
Breaking: ಇತಿಹಾಸ ಸೃಷ್ಟಿಸಿದ ರಾಯಲ್ ಚಾಲೆಂಜರ್ಸ್: ಈ ಸಲನೂ ಕಪ್ ನಮ್ದೆ ಎಂದ RCB; ಸತತ 2ನೇ ಬಾರಿ ಬೆಂಗ್ಳೂರಿಗೆ ಐಪಿಎಲ್ ಟ್ರೋಫಿ