
ಅಹಮದಾಬಾದ್ (ಮೇ.31): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಮುಕುಟ ಧರಿಸುತ್ತಿದ್ದಂತೆ ಕ್ರಿಕೆಟ್ ಇತಿಹಾಸದ ಹಳೆಯ ಪುಟಗಳು ಪುನಃ ಬರೆಯಲಾಗಿದೆ. 18 ವರ್ಷಗಳ ಕಾಲ ಚೊಚ್ಚಲ ಕಪ್‌ಗಾಗಿ ಕಾಯ್ದಿದ್ದ ಆರ್‌ಸಿಬಿ, ಈಗ ಎರಡೇ ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳ ಎಲೈಟ್ ಪಟ್ಟಿಗೆ ಲಗ್ಗೆ ಇಟ್ಟಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಆರ್‌ಸಿಬಿ ಸಾಲು ಸಾಲು ಹೊಸ ದಾಖಲೆಗಳನ್ನು ಬರೆದಿದೆ.
ಸತತ ಎರಡನೇ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಆರ್‌ಸಿಬಿ ಈಗ ಒಟ್ಟು 2 ಕಪ್‌ಗಳ ಒಡೆಯನಾಗಿದೆ. ಈ ಮೂಲಕ ರಾಜಸ್ಥಾನ, ಹೈದರಾಬಾದ್ ತಂಡಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಐಪಿಎಲ್ ಗೆದ್ದ ತಂಡಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ತಲಾ 5 ಟ್ರೋಫಿ ಗೆದ್ದಿದ್ದರೆ, ಕೋಲ್ಕತ್ತಾ ನೈಟ್‌ರೈಡರ್ಸ್ 3 ಟ್ರೋಫಿ ಜಯಿಸಿದೆ. ಉಳಿದಂತೆ ರಾಜಸ್ಥಾನ ರಾಯಲ್ಸ್ , ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್ (ಹೈದರಾಬಾದ್ ಫ್ರಾಂಚೈಸಿ ಲೆಕ್ಕದಲ್ಲಿ 2 ಟ್ರೋಫಿ), ಗುಜರಾತ್ ಟೈಟಾನ್ಸ್ ತಲಾ 1 ಟ್ರೋಫಿ ಗೆದ್ದಿದೆ.
ಐಪಿಎಲ್ ಇತಿಹಾಸದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಟ್ರೋಫಿ ಗೆದ್ದ ನಾಯಕರ ಪಟ್ಟಿಗೆ ಆರ್‌ಸಿಬಿಯ ರಜತ್ ಪಟೀದಾರ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಆದರೆ ಇಲ್ಲಿ ಅತ್ಯಂತ ವಿಚಿತ್ರ ಹಾಗೂ ರೋಚಕ ಸಂಗತಿಯೆಂದರೆ—ರಜತ್ ಪಟೀದಾರ್ ನಾಯಕನಾಗಿ 2 ಐಪಿಎಲ್ ಟ್ರೋಫಿ ಗೆದ್ದಿದ್ದರೂ, ಅವರು ಈವರೆಗೂ ಭಾರತ ತಂಡದ ಪರ ಅಂತರರಾಷ್ಟ್ರೀಯ ಟಿ20 (T20I) ಕ್ರಿಕೆಟ್‌ಗೆ ಪದಾರ್ಪಣೆ (Debut) ಮಾಡಿಲ್ಲ. ರೋಹಿತ್ ಶರ್ಮ ಹಾಗೂ ಎಂಎಸ್ ಧೋನಿ ನಾಯಕರಾಗಿ ತಲಾ 5 ಟ್ರೋಫಿ ಗೆದ್ದಿದ್ದರೆ, ಗೌತಮ್ ಗಂಭೀರ್ ಹಾಗೂ ರಜತ್ ಪಟೀದಾರ್ ತಲಾ 2 ಟ್ರೋಫಿ ಜಯಿಸಿದ್ದಾರೆ. ಉಳಿದಂತೆ ಶೇನ್ ವಾರ್ನ್, ಆಡಮ್ ಗಿಲ್‌ಕ್ರಿಸ್ಟ್ , ಡೇವಿಡ್ ವಾರ್ನರ್, ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ತಲಾ 1 ಟ್ರೋಫಿ ಗೆದ್ದಿದ್ದಾರೆ.
ನಾಯಕನಾಗಿ ಅತಿವೇಗವಾಗಿ ಎರಡು ಐಪಿಎಲ್ ಟ್ರೋಫಿ ಗೆದ್ದ ದಾಖಲೆಯನ್ನು ರಜತ್ ಪಟೀದಾರ್ ಮಾಡಿದ್ದಾರೆ. ನಾಯಕನಾಗಿ ತಂಡ ಮುನ್ನಡೆಸಿದ ಕೇವಲ 28 ಪಂದ್ಯಗಳಲ್ಲಿಯೇ ರಜತ್ 2ನೇ ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ರೋಹಿತ್ ಶರ್ಮ ಇದಕ್ಕಾಗಿ 44 ಪಂದ್ಯ ಆಡಿದ್ದರೆ, ಎಂಎಸ್ ಧೋನಿ 59 ಪಂದ್ಯ ಹಾಗೂ ಗೌತಮ್ ಗಂಭೀರ್ 79 ಪಂದ್ಯ ನಾಯಕನಾಗಿ ಆಡಿದ್ದರು.
ಟಿ20 ಟೂರ್ನಮೆಂಟ್‌ಗಳ ವಿಚಾರಕ್ಕೆ ಬಂದರೆ ವಿರಾಟ್ ಕೊಹ್ಲಿ ಕಿಂಗ್ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. 2026ರ ಐಪಿಎಲ್ ಫೈನಲ್ ಪಂದ್ಯ ಸೇರಿದಂತೆ ವಿರಾಟ್ ಕೊಹ್ಲಿ ಟಿ20 ಟೂರ್ನಮೆಂಟ್‌ಗಳ ಫೈನಲ್‌ನಲ್ಲಿ 4 ಹಾಗೂ ಅದಕ್ಕಿಂತ ಹೆಚ್ಚು ಅರ್ಧಶತಕ ಬಾರಿಸಿದ ಭಾರತದ ಏಕೈಕ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಇದಕ್ಕೂ ಮುನ್ನ ಅವರು 2014ರ ಐಸಿಸಿ ಟಿ20 ವಿಶ್ವಕಪ್ ಫೈನಲ್, 2016ರ ಐಪಿಎಲ್ ಫೈನಲ್ ಹಾಗೂ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲೂ ಅರ್ಧಶತಕ ಬಾರಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.