
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ (Team India star cricketer Virat Kohli) ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ರೋಹಿತ್ ಶರ್ಮಾ (Rohit Sharma) ನಂತ್ರ ವಿರಾಟ್ ಕೊಹ್ಲಿ, ಟೆಸ್ಟ್ (Test) ಆವೃತ್ತಿಗೆ ವಿದಾಯ ಹೇಳ್ತಾರೆ ಎನ್ನುವ ಸಂಶಯ ವ್ಯಕ್ತವಾಗಿತ್ತು. ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ (Team India) ಟೆಸ್ಟ್ ಪಂದ್ಯಗಳನ್ನು ಆಡ್ತಿರುವ ಕಾರಣ, ಟೀಂ ಇಂಡಿಯಾ ಆಯ್ಕೆಯಾಗುವ ಮುನ್ನವೇ ಕೊಹ್ಲಿ ಈ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದ್ದರು. ಆದ್ರೆ ಬಿಸಿಸಿಐ, ಕೊಹ್ಲಿಗೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೇಳಿತ್ತು. ಇಂದು ಕೊಹ್ಲಿ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನಿವೃತ್ತಿ ಘೋಷಿಸಿದ್ದಾರೆ. 14 ವರ್ಷ ಟೆಸ್ಟ್ ಆಡಿದ್ದ ಕೊಹ್ಲಿ, ಇದು ಸಾಕಷ್ಟು ಕಲಿಸಿದೆ ಎಂದು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಟೀಂ ಇಂಡಿಯಾದ ಭರವಸೆ ಆಟಗಾರ ಕೊಹ್ಲಿ, ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡ್ತಿದ್ದಂತೆ ಬಿಸಿಸಿಐ ಅವರ ಸಂಬಳದಲ್ಲಿ ಕಡಿತ ಮಾಡುತ್ತಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡೋದು ಸಹಜ. 2024ರಲ್ಲೇ ವಿರಾಟ್ ಕೊಹ್ಲಿ ಟಿ – 20 ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈಗ ಟೆಸ್ಟ್ ಆವೃತ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಏಕದಿನ ಪಂದ್ಯಗಳನ್ನು ಮಾತ್ರ ಕೊಹ್ಲಿ ಆಡ್ತಿರುವ ಕಾರಣ ಬಿಸಿಸಿಐ ಅವರಿಗೆ ನೀಡುವ ಸಂಬಳ ಇನ್ಮುಂದೆ ಬದಲಾಗುತ್ತಾ? ಅದಕ್ಕೆ ಉತ್ತರ ಇಲ್ಲಿದೆ.
ಕೊಹ್ಲಿಗೆ ಬಿಸಿಸಿಐ ನೀಡುವ ಸಂಬಳ ಎಷ್ಟು? : ಬಿಸಿಸಿಐ ಪ್ರತಿ ವರ್ಷ, ಆಟಗಾರರ ಸಂಬಳದಲ್ಲಿ ಬದಲಾವಣೆ ಮಾಡುತ್ತದೆ. ಆಟಗಾರರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಗುಂಪಿಗೆ ತಕ್ಕಂತೆ ಸಂಬಳ ನೀಡಲಾಗುತ್ತದೆ. ಎ+ ಗ್ರೇಡ್ ನಲ್ಲಿರುವ ಆಟಗಾರರಿಗೆ ವಾರ್ಷಿಕ 7 ಕೋಟಿ ರೂಪಾಯಿ ಸಂಭಾವನೆ ಇದೆ. ಎ ಗ್ರೇಡ್ ಆಟಗಾರರಿಗೆ ಬಿಸಿಸಿಐ ವಾರ್ಷಿಕ 5 ಕೋಟಿ ರೂಪಾಯಿ ನೀಡುತ್ತದೆ. ಬಿ ಗ್ರೇಡ್ ಆಟಗಾರರಿಗೆ ವಾರ್ಷಿಕ 3 ಕೋಟಿ ರೂಪಾಯಿ ಸಂಬಳ ಸಿಕ್ರೆ, ಸಿ ಗ್ರೇಡ್ ಆಟಗಾರರು ವಾರ್ಷಿಕ 1 ಕೋಟಿ ರೂಪಾಯಿ ಪಡೆಯುತ್ತಾರೆ.
ವಿರಾಟ್ ಕೊಹ್ಲಿ ಪ್ರಸ್ತುತ ಬಿಸಿಸಿಐನ ಎ+ ಗ್ರೇಡ್ ಪಟ್ಟಿಯಲ್ಲಿದ್ದಾರೆ. ಅಂದ್ರೆ ಅವರಿಗೆ ಪ್ರತಿ ವರ್ಷ 7 ಕೋಟಿ ರೂಪಾಯಿ ವೇತನ ಸಿಗ್ತಿದೆ. ಇದಲ್ಲದೆ ಪ್ರತಿ ಪಂದ್ಯಕ್ಕೆ ಪ್ರತ್ಯೇಕ ಪಂದ್ಯ ಶುಲ್ಕ ನೀಡಲಾಗುತ್ತದೆ. ಟೆಸ್ಟ್ ಪಂದ್ಯಗಳಿಗೆ 15 ಲಕ್ಷ ರೂಪಾಯಿ ನೀಡಿದ್ರೆ, ಏಕದಿನ ಪಂದ್ಯಕ್ಕೆ 6 ಲಕ್ಷ ರೂಪಾಯಿ ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ನೀಡಲಾಗುತ್ತದೆ.
ಟೆಸ್ಟ್ ನಿವೃತ್ತಿಯಿಂದ ಸಂಬಳದ ಮೇಲೆ ಪರಿಣಾಮ : ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ, ಹಾಗಾಗಿ ಅವರಿಗೆ ಟೆಸ್ಟ್ ಪಂದ್ಯ ಶುಲ್ಕ ಸಿಗುವುದಿಲ್ಲ. ಅಲ್ಲದೆ ಟಿ20 ಪಂದ್ಯ ಶುಲ್ಕ ಕೂಡ ಸಿಗೋದಿಲ್ಲ. ಕೊಹ್ಲಿ ವಾರ್ಷಿಕ ಸಂಬಳದಲ್ಲಿ ಸದ್ಯ ಯಾವುದೆ ಬದಲಾವಣೆಯಾಗುವುದಿಲ್ಲ. ಬಿಸಿಸಿಐ ಪ್ರತಿ ವರ್ಷ ಆಟಗಾರರ ಪ್ರದರ್ಶನ ಮತ್ತು ಫಾರ್ಮ್ ಆಧರಿಸಿ ಒಪ್ಪಂದದಲ್ಲಿ ಬದಲಾವಣೆ ಮಾಡ್ತಿರುತ್ತದೆ. ವಿರಾಟ್ ಕೇವಲ ಏಕದಿನ ಪಂದ್ಯವನ್ನು ಮಾತ್ರ ಇನ್ಮುಂದೆ ಆಡುವ ಕಾರಣ ಅವರನ್ನು ಬಿಸಿಸಿಐ A+ ನಿಂದ A ದರ್ಜೆಗೆ ಇಳಿಸಬಹುದು. ಒಂದ್ವೇಳೆ ಮುಂದೆ ಹಾಗಾದಲ್ಲಿ ಕೊಹ್ಲಿ ಸಂಬಳ 7 ಕೋಟಿಯಿಂದ 5 ಕೋಟಿಗೆ ಇಳಿಯಲಿದೆ.
ಕೊಹ್ಲಿ ಮುಂದಿನ ಗುರಿ ಏನು? : ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಮೇಲೆ ತಮ್ಮ ಸಂಪೂರ್ಣ ಗಮನ ಕೇಂದ್ರೀಕರಿಸಲು ಮುಂದಾಗಿದ್ದಾರೆ. 2027ರಲ್ಲಿ ನಡೆಯುವ ವಿಶ್ವಕಪ್ ಅವರ ಮುಂದಿನ ಗುರಿ ಎನ್ನಲಾಗ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.