
ಬೆಂಗಳೂರು: 15 ವರ್ಷದ ಪ್ರತಿಭಾನ್ವಿತ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವುದು ಯಾವಾಗ ಎನ್ನುವ ಕುತೂಹಲ ಜೋರಾಗಿದೆ. ಈಗಾಗಲೇ ಭಾರತ ತಂಡಕ್ಕೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಕಳೆದ ಮೂರು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದಾರೆ. ಅಗ್ರಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಬೆನ್ನಲ್ಲೇ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಬೇಕು ಎನ್ನುವ ಆಗ್ರಹ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ. ಇದೀಗ ಆರ್‌ಸಿಬಿ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ಟೀಂ ಇಂಡಿಯಾ ಕೋಚ್ ಮೇಲೆ ತಿರುಗಿ ಬಿದ್ದಿದ್ದಾರೆ. ವೈಭವ್ ಸೂರ್ಯವಂಶಿಯನ್ನು ಆಡಿಸದೇ ಬೆಂಚ್ ಕಾಯಿಸುವಂತೆ ಮಾಡಿರುವ ರೀತಿ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
'ವೈಭವ್ ಸೂರ್ಯವಂಶಿ ಅಕ್ಷರಶಃ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ರೆಡಿಯಾಗಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇದೇ ವೇಳೆ ಸಂಜು ಸ್ಯಾಮ್ಸನ್ ಕೂಡಾ ಮೂರು ತಿಂಗಳ ಹಿಂದಷ್ಟೇ ನಾವು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಟೀಂ ಇಂಡಿಯಾ ಸಹಾಯಕ ಕೋಚ್ ರಿಯಾನ್ ಟೆನ್ ಡೆಸ್ಕ್ಯಾಟ್ ಹೇಳಿದ್ದರು.
'ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಅದ್ಭುತವಾಗಿ ಆಡಿದ್ದಾರೆ. ಐಪಿಎಲ್ ಆಡಿ ಆತ್ಮವಿಶ್ವಾಸದಲ್ಲಿರುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ನಾವು ನಿಮ್ಮ ಜತೆಗಿದ್ದೇವೆ ಎನ್ನುವ ಸಂದೇಶವನ್ನು ನೀಡಬೇಕಾಗುತ್ತದೆ. ನಾವೆಲ್ಲರೂ ವೈಭವ್ ಆಡುವುದನ್ನು ನೋಡಲು ತುದಿಗಾಲಿನಲ್ಲಿದ್ದೇವೆ. ಆದರೆ ಎಲ್ಲದಕ್ಕೂ ಒಂದು ಪ್ರೊಸೆಸ್ ಎನ್ನುವುದು ಇರುತ್ತದೆ' ಎಂದು ಟೀಂ ಇಂಡಿಯಾ ಸಹಾಯಕ ಕೋಚ್ ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮುನ್ನ ಹೇಳಿದ್ದರು.
ಇದೀಗ ಈ ವಿಚಾರವಾಗಿ ಎಬಿ ಡಿವಿಲಿಯರ್ಸ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಎಲ್ಲಿಯವರೆಗೆ ಅವರನ್ನು ಹೊರಗಿಡುತ್ತೀರಿ? ನನ್ನ ಪ್ರಕಾರ ಐರ್ಲೆಂಡ್ ಎದುರಿನ ಸರಣಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವೈಭವ್ ಪಾದಾರ್ಪಣೆ ಮಾಡಲು ಉತ್ತಮ ವೇದಿಕೆಯಾಗಿತ್ತು. ಆದರೆ ದುರಾದೃಷ್ಟವಶಾತ್ ಅವರಿಗೆ ಅಲ್ಲಿ ಅವಕಾಶ ಸಿಗಲಿಲ್ಲ. ಎಲ್ಲಾ ಆಟಗಾರರಂತೆ ವೈಭವ್ ಸೂರ್ಯವಂಶಿ ಕೂಡಾ ಒಂದು ಪ್ರಕ್ರಿಯೆಯ ಭಾಗವಾಗಿರಬೇಕು ಎನ್ನುವ ಡೆಸ್ಕ್ಯಾಟ್ ಮಾತನ್ನು ನಾನು ಒಪ್ಪುವುದಿಲ್ಲ ಎಂದು ಎಬಿಡಿ ಹೇಳಿದ್ದಾರೆ.
ಸಂಜು ಸ್ಯಾಮ್ಸನ್ ಐರ್ಲೆಂಡ್ ಎದುರಿನ ಎರಡು ಟಿ20 ಪಂದ್ಯಗಳಲ್ಲಿ ಹಾಗೂ ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇನ್ನು ಇಶಾನ್ ಕಿಶನ್ ಕೂಡಾ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಹೀಗಾಗಿ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಮೈಕಲ್ ವಾನ್ ಹಾಗೂ ಅಲಿಸ್ಟರ್ ಕುಕ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ವೈಭವ್ ಸೂರ್ಯವಂಶಿ, ಐರ್ಲೆಂಡ್ ಎದುರಿನ ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದರು.
ಇನ್ನೊಂದೆಡೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಸಬಾ ಕರೀಂ ಸೇರಿದಂತೆ ಇನ್ನೊಂದಷ್ಟು ಮಾಜಿ ಕ್ರಿಕೆಟಿಗರು ವೈಭವ್ ಸೂರ್ಯವಂಶಿಗೆ ಅವಕಾಶ ನೀಡುವ ಉದ್ದೇಶದಿಂದ ಈಗಾಗಲೇ ಸಾಮರ್ಥ್ಯ ಸಾಬೀತು ಮಾಡಿರುವ ಆಟಗಾರರನ್ನು ಕಡೆಗಣಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.