
ಮುಲ್ಲನ್‌ಪುರ್: ಶುಭ್‌ಮನ್ ಗಿಲ್, ಕೆ ಎಲ್ ರಾಹುಲ್ ಆಕರ್ಷಕ ಶತಕ ಹಾಗೂ ಪಾದಾರ್ಪಣೆ ಪಂದ್ಯದಲ್ಲೇ ಮಾರಕ ದಾಳಿ ನಡೆಸಿದ ಮಾನವ್ ಸುತಾರ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಆಫ್ಘಾನಿಸ್ತಾನ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಆಫ್ಘಾನ್ ಎದುರು ಭಾರತ ತಂಡವು ಇನ್ನಿಂಗ್ಸ್ ಹಾಗೂ 300 ರನ್‌ಗಳ ಗೆಲುವು ಸಾಧಿಸುವ ಮೂಲಕ ಟೆಸ್ಟ್ ಇತಿಹಾಸದಲ್ಲೇ ಭಾರತ ತಂಡವು ದೊಡ್ಡ ಗೆಲುವು ದಾಖಲಿಸಿದ ಸಾಧನೆ ಮಾಡಿದೆ.
ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡವು ಕನ್ನಡಿಗ ಕೆ ಎಲ್ ರಾಹುಲ್(100), ನಾಯಕ ಶುಭ್‌ಮನ್ ಗಿಲ್(126) ಆಕರ್ಷಕ ಶತಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್(81) ಮತ್ತು ವಾಷಿಂಗ್ಟನ್ ಸುಂದರ್(52*) ಸಮಯೋಚಿತ ಅರ್ಧಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 564 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಆಫ್ಘಾನಿಸ್ತಾನ ಪರ ಮೊಹಮ್ಮದ್ ಸಲೀಂ ಶಫಿ 140 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.
ಭಾರತ ನೀಡಿದ ದೊಡ್ಡ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು, ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಮಾನವ್ ಸುತಾರ್ ಸ್ಪಿನ್ ದಾಳಿಗೆ ತಬ್ಬಿಬ್ಬಾಗಿ ಹೋಯಿತು. ಆಫ್ಘಾನಿಸ್ತಾನ ಪರ ರೆಹಮತ್ ಶಾ(60) ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಕೂಡಾ ಕನಿಷ್ಠ 25 ರನ್ ಬಾರಿಸಲು ಯಶಸ್ವಿಯಾಗಲಿಲ್ಲ. ಪರಿಣಾಮ ಆಫ್ಘಾನಿಸ್ತಾನ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 152 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಾಗಿ ಭಾರತ ತಂಡವು ಆಫ್ಘಾನಿಸ್ತಾನ ಮೇಲೆ ಫಾಲೋ ಆನ್ ಹೇರಿತು. ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ ಮಾರಕ ದಾಳಿ ನಡೆಸಿದ ಮಾನವ್ ಸುತಾರ್ ಕೇವಲ 37 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಪ್ರಸಿದ್ದ್ ಕೃಷ್ಣ 3 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
𝗪.𝗜.𝗡.𝗡.𝗘.𝗥.𝗦 🏆#TeamIndia clinch victory in the @IDFCFIRSTBank Only Test against Afghanistan and get their hands on the trophy with a strong show 👏
Scorecard ▶️ https://t.co/Au50EfVM30#INDvAFG pic.twitter.com/3E6bJC4eEo— BCCI (@BCCI) June 8, 2026
ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ಘಾನಿಸ್ತಾನ ತಂಡವು ಮತ್ತೊಮ್ಮೆ ಭಾರತದ ಸಂಘಟಿತ ಬೌಲಿಂಗ್ ಎದುರು ತಬ್ಬಿಬ್ಬಾಗಿ ಹೋಯಿತು. ಆರಂಭಿಕ ಬ್ಯಾಟರ್ ಸೇದಿಕುಲ್ಲಾ ಅಥಲ್ 42 ರನ್ ಬಾರಿಸಿದ್ದು ಬಿಟ್ಟರೇ ಉಳಿದ್ಯಾವ ಬ್ಯಾಟರ್‌ಗಳು ಪ್ರತಿರೋಧ ತೋರಲಿಲ್ಲ. ಅಂತಿಮವಾಗಿ ಆಫ್ಘಾನಿಸ್ತಾನ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 112 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಇನ್ನಿಂಗ್ಸ್ ಹಾಗೂ 300 ರನ್‌ಗಳ ಸೋಲು ಅನುಭವಿಸಿತು.
All smiles and silverware! 📸
Skipper Shubman Gill receives the @IDFCFIRSTBank trophy as #TeamIndia celebrate after a massive win in New Chandigarh 🏆#INDvAFG | @ShubmanGill pic.twitter.com/rcHFZin7Sc— BCCI (@BCCI) June 8, 2026
ಭಾರತ ಕ್ರಿಕೆಟ್ ತಂಡವು ಇದೀಗ ಇನ್ನಿಂಗ್ಸ್ ಹಾಗೂ 300 ರನ್ ಅಂತರದ ಗೆಲುವು ಸಾಧಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ಸಾಧನೆ ಮಾಡಿದೆ. ಈ ಮೊದಲು 2018ರಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ಎದುರು ರಾಜ್‌ಕೋಟ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 272 ರನ್‌ಗಳ ಗೆಲುವು ದಾಖಲಿಸಿದ್ದು, ಇಲ್ಲಿಯವರೆಗಿನ ದಾಖಲೆಯಾಗಿತ್ತು. ಆ ದಾಖಲೆ ಇದೀಗ ಬ್ರೇಕ್ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.