ಭಾರತ ತಂಡದಿಂದ ಹೊರ ಬಿದ್ದವನು ನಾಯಕನಾಗಿ ಮರಳಿದ.. ಕಮ್‌ಬ್ಯಾಕ್ ಎಂದರೆ ಹೀಗಿರಬೇಕು..!

Published : Jun 07, 2026, 12:54 PM IST
Shreyas Iyer

ಸಾರಾಂಶ

915 ದಿನಗಳ ಹಿಂದೆ ಭಾರತ ಟಿ20 ತಂಡದಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್, ಐಪಿಎಲ್‌ನಲ್ಲಿ ತಮ್ಮ ನಾಯಕತ್ವ ಮತ್ತು ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇದೀಗ, ಎಲ್ಲ ಅಡೆತಡೆಗಳನ್ನು ಮೀರಿ, ತಂಡಕ್ಕೆ ಕೇವಲ ಆಟಗಾರನಾಗಿ ಅಲ್ಲ, ನಾಯಕನಾಗಿಯೇ ಭರ್ಜರಿ ಪುನರಾಗಮನ ಮಾಡಿದ್ದಾರೆ.

ಸುದರ್ಶನ್‌, ಏಷ್ಯಾನೆಟ್ ಸುವರ್ಣ ನ್ಯೂಸ್

"ನೀನು ಬೇಡ" ಎಂದವರೇ ರತ್ನಗಂಬಳಿ ಹಾಸಿ "ನೀನೇ ಬೇಕು" ಎಂದು ವಾಪಸ್ ಕರೆದುಕೊಳ್ಳುವುದಿದೆಯಲ್ಲಾ. ಅದು ಸಾಧನೆ. 915 ದಿನಗಳ ಹಿಂದೆ.

ಅಂದರೆ ಇವತ್ತಿಗೆ ಸರಿಯಾಗಿ ಎರಡೂವರೆ ವರ್ಷ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಕಾಂಗಿಯಾಗಿ ನಿಂತು ಅಬ್ಬರಿಸಿದ್ದ ಶ್ರೇಯಸ್ ಅಯ್ಯರ್. ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಅಗ್ರಕ್ರಮಾಂಕ ಕುಸಿದು ಬಿದ್ದಾಗ ಏಕೈಕ ಭರವಸೆಯಾಗಿ ನಿಂತವನು ಅಯ್ಯರ್. 37 ಎಸೆತಗಳಲ್ಲಿ 53 ರನ್. ಭಾರತ ಪಂದ್ಯ ಗೆದ್ದಿತ್ತು.

ಆಗ ಭಾರತ ತಂಡದ ಕೋಚ್ ಆಗಿದ್ದವರು ರಾಹುಲ್ ದ್ರಾವಿಡ್. ಯಾವುದೇ ಪೂರ್ವಾಗ್ರಹವಿಲ್ಲ, ಪಕ್ಷಪಾತವಿಲ್ಲ. ಪ್ರತಿಭೆ, ಸಾಮರ್ಥ್ಯ, ಪಂದ್ಯ ಗೆಲ್ಲಿಸುವ ತಾಕತ್ತು. ಇಷ್ಟೇ ಮಾನದಂಡವಾಗಿತ್ತು ಅಲ್ಲಿ. 2023, ಡಿಸೆಂಬರ್ 3. ಆ ದಿನ ಶ್ರೇಯಸ್ ಅಯ್ಯರ್ ಭಾರತ ಪರ ಕೊನೆಯ ಟಿ20 ಪಂದ್ಯವಾಡಿದ್ದ. ಅಮೋಘ ಅರ್ಧಶತಕ ಬಾರಿಸಿ ಪಂದ್ಯ ಗೆಲ್ಲಿಸಿ ಕೊಟ್ಟಿದ್ದ. ಅಲ್ಲಿಂದ ಮುಂದೆ ಭಾರತ ಆಡಿದ್ದು 63 ಟಿ20 ಪಂದ್ಯಗಳು. ಎಲ್ಲಿಯಾದರೂ ಶ್ರೇಯಸ್ ಅಯ್ಯರ್ ಹೆಸರು ಕಾಣಿಸಿತ್ತೇ..? ಸಾಧ್ಯವೇ ಇಲ್ಲ.. ಕಾರಣ, ಅವನನ್ನು ತಂಡದಿಂದ ಹೊರ ಹಾಕಲಾಗಿತ್ತು.

ಶ್ರೇಯಸ್ ಅಯ್ಯರ್ ಪಾಲಿಗೆ ನಿಜವಾದ 'ರಾಹು'ಕಾಲ ಶುರುವಾಗಿದ್ದು ಗಂಭೀರ್ ಕೋಚ್ ಆದ ಮೇಲೆ!

ರಾಹುಲ್ ದ್ರಾವಿಡ್ ಭರವಸೆ ಇಟ್ಟಿದ್ದ ಹುಡುಗನಿಗೆ ನಿಜವಾದ ‘ರಾಹು'ಕಾಲ ಆರಂಭವಾಗಿದ್ದು ಗೌತಮ್ ಗಂಭೀರ್ ಕೋಚ್ ಆದ ನಂತರ. 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 10 ವರ್ಷಗಳ ನಂತರ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದಾಗ ತಂಡದ ನಾಯಕನಾಗಿದ್ದವನು ಇದೇ ಶ್ರೇಯಸ್ ಅಯ್ಯರ್. ಆದರೆ ಗೆಲುವಿನ ಶ್ರೇಯ ನಾಯಕನಿಗೆ ಸಿಕ್ಕಿತ್ತೇ? ಖಂಡಿತಾ ಇಲ್ಲ. ಆ ಶ್ರೇಯದ ಅಭಿಷೇಕವಾಗಿದ್ದು ತಂಡದ ಮೆಂಟರ್ ಆಗಿದ್ದ ಗಂಭೀರನ ತಲೆಗೆ. ಕೋಲ್ಕತಾ ತಂಡದಲ್ಲಿ ತನ್ನನ್ನು ನಡೆಸಿಕೊಂಡ ರೀತಿಗೆ ಕೆರಳಿದ ಅಯ್ಯರ್ ಪಂಜಾಬ್ ತಂಡ ಸೇರಿ ಬಿಟ್ಟ.

ಅಸಲಿಗೆ ಶ್ರೇಯಸ್ ಅಯ್ಯರ್ ಜೊತೆ ಗೌತಮ್ ಗಂಭೀರನ ಬಾಂಧವ್ಯವೇ ಸರಿ ಇರಲಿಲ್ಲವಂತೆ. ‘ನಾನು, ಎಲ್ಲವೂ ನನ್ನಿಂದಲೇ' ಎಂಬ ಶುದ್ಧ ಅಹಂನ ಮನುಷ್ಯ ಗಂಭೀರ್ . ಈ ಅಯ್ಯರ್ ತನ್ನತನವನ್ನು ಯಾವತ್ತೂ ಬಿಟ್ಟುಕೊಡದ ಪರಮ ಸ್ವಾಭಿಮಾನಿ. ಬಾಂಧವ್ಯ ಬೆಸೆಯುವುದಾದರೂ ಹೇಗೆ..? ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆದ ನಂತರ ಶ್ರೇಯಸ್ ಅಯ್ಯರ್ ಏಕೆ ಕಡೆಗಣಿಸಲ್ಪಟ್ಟ ಎಂಬ ಪ್ರಶ್ನೆಗೆ ಇದೇ ಉತ್ತರ.

ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ 22 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದವನಿಗೆ ಗಂಭೀರ್ ಗರಡಿಯಲ್ಲಿ ಒಂದೇ ಒಂದು ಅವಕಾಶ ಸಿಗಲಿಲ್ಲ. ಅವನನ್ನು ಭಾರತ ಟಿ20 ತಂಡದಿಂದ ಹೊರಗಿಟ್ಟದ್ದು ಆಟದ ಕಾರಣಕ್ಕೆ ಅಲ್ಲವೇ ಅಲ್ಲ. ಆಟದ ಆಚೆಗಿನ ‘ಕಾರಣವೇ ಅಲ್ಲದ ಕಾರಣಕ್ಕೆ'.

ಶ್ರೇಯಸ್ ಅಯ್ಯರ್ ಘಾಸಿಗೊಂಡಿದ್ದ. ಹಾಗೆಂದು ಜಗ್ಗಲಿಲ್ಲ, ಕುಗ್ಗಲಿಲ್ಲ.. ಅವನು ಬಿದ್ದಿರಲಿಲ್ಲ, ಬೀಳಿಸಿದ್ದರು.. ಇಲ್ಲಿ ಬಿದ್ದವನು ಮತ್ತೆಲ್ಲೋ ಎದ್ದು ನಿಲ್ಲಲು ನಿರ್ಧರಿಸಿದ. ತಾನೇನು ಎಂಬುದನ್ನು ತೋರಿಸಲು ನಿಂತ. ಹಾಗೆ ಸಟೆದು ನಿಂತವನ ಬೆನ್ನಿಗಿದ್ದದ್ದು ಅವನೇ ಕಟ್ಟಿದ ತಾಕತ್ತಿನ ಕೋಟೆ.

ಶ್ರೇಯಸ್ ಅಯ್ಯರ್ ಆಟದ ಜತೆಗೆ ನಾಯಕತ್ವಕ್ಕೂ ಫುಲ್ ಮಾರ್ಕ್ಸ್‌

ಟೀಮ್ ಇಂಡಿಯಾದಲ್ಲಿ ಕಳೆದುಕೊಂಡದ್ದನ್ನು ಇಂಡಿಯನ್ ಪ್ರೀಮಿಯರ್ ಲೀಗ್'ನಲ್ಲಿ ಹುಡುಕಲು ನಿಂತು ಬಿಟ್ಟ ಶ್ರೇಯಸ್ ಅಯ್ಯರ್. ಸತತ ಎರಡು ಐಪಿಎಲ್ ಟೂರ್ನಿಗಳು.. ಒಮ್ಮೆ ಚಾಂಪಿಯನ್, ಮತ್ತೊಮ್ಮೆ ಫೈನಲ್.. ಅದು ಅವನ ನಾಯಕತ್ವದ ಕೌಶಲ್ಯದ ಅನಾವರಣ.

2025ರ ಐಪಿಎಲ್'ನಲ್ಲಿ 175ರ ಸ್ಟ್ರೈಕ್'ರೇಟ್'ನಲ್ಲಿ 604 ರನ್..

2026ರ ಐಪಿಎಲ್'ನಲ್ಲಿ 168.81ರ ಸ್ಟ್ರೈಕ್'ರೇಟ್'ನಲ್ಲಿ 498 ರನ್..

ನಾಯಕತ್ವದ ಜೊತೆಗೆ ಆಟಕ್ಕೂ ಫುಲ್ ಮಾರ್ಕ್ಸ್..

ಈ ವರ್ಷದ ಐಪಿಎಲ್'ನ ದ್ವಿತೀಯಾರ್ಧದಲ್ಲಿ ಪಂಜಾಬ್ ತಂಡ ನಂಬಲಸಾಧ್ಯ ರೀತಿಯಲ್ಲಿ ಅಧಃಪತನ ಕಂಡರೂ ಅಷ್ಟರಲ್ಲಾಗಲೇ ಶ್ರೇಯಸ್ ಅಯ್ಯರ್ ಗೆದ್ದು ಬಿಟ್ಟಿದ್ದ.

ರಜತ್ ಪಾಟಿದಾರ್ ಹೊರತು ಪಡಿಸಿದರೆ ಕಳೆದ ಎರಡು ವರ್ಷಗಳಲ್ಲಿ ಐಪಿಎಲ್'ನ ಅತ್ಯುತ್ತಮ ನಾಯಕ ಶ್ರೇಯಸ್ ಅಯ್ಯರ್. ಬ್ಯಾಟಿಂಗ್'ನಲ್ಲಿ ಬೆಂಕಿ.. ಈ ಬಾರಿ ಅವನನ್ನು ಭಾರತ ತಂಡದಿಂದ ಹೊರಗಿಡಲು ಕಾರಣಗಳೇ ಇರಲಿಲ್ಲ. ಯಾರೆಷ್ಟೇ ವಿರೋಧ ಮಾಡಿದರೂ ಆಟವೇ ಮಾತಾಡುತ್ತಿತ್ತು.

ಎರಡೂವರೆ ವರ್ಷಗಳ ಹಿಂದೆ ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದವನು ನಾಯಕನಾಗಿ ಮರಳಿದ್ದಾನೆ. ಹೊಸ ಹುಡುಗರ ಆರ್ಭಟದ ಮಧ್ಯೆ.. ನಾಯಕತ್ವ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದವರ ನಡುವೆ ತಂಡದಲ್ಲೇ ಇಲ್ಲದ ಒಬ್ಬ ಇದ್ದಕ್ಕಿದ್ದಂತೆ ನುಗ್ಗಿ ನಾಯಕ ಪಟ್ಟವೇರಿ ಕುಳಿತುಕೊಳ್ಳುತ್ತಾನೆ ಎಂದರೆ.. ತಂಡಕ್ಕೇ ಬೇಡವಾಗಿದ್ದ ಆಟಗಾರನೊಬ್ಬ ಅದೇ ತಂಡಕ್ಕೆ ನಾಯಕನಾಗಿ ಮರಳುತ್ತಾನೆ ಎಂದರೆ.. ಇದಲ್ಲವೇ ತಾಕತ್ತು..!

COMEBACK is always greater than SETBACK

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್‌ನಲ್ಲಿ 732 ರನ್, ಆದ್ರೂ ಟಿ20 ತಂಡದಿಂದ ಶುಭ್‌ಮನ್‌ ಗಿಲ್‌ಗೆ ಗೇಟ್‌ಪಾಸ್! ಕೊನೆಗೂ ಇಂಟ್ರೆಸ್ಟಿಂಗ್ ಕಾರಣ ಬಿಚ್ಚಿಟ್ಟ BCCI
ಭಾರತ ಟಿ20 ತಂಡ, ನಾಯಕತ್ವದಿಂದ ಹೊರಬಿದ್ದ ಬೆನ್ನಲ್ಲೇ ಆಯ್ಕೆ ಸಮಿತಿಗೆ ಖಡಕ್ ವಾರ್ನಿಂಗ್ ಕೊಟ್ಟ ಸೂರ್ಯಕುಮಾರ್ ಯಾದವ್..!