
ಮುಲ್ಲಾನ್‌ಪುರ: ಬ್ಯಾಟರ್‌ಗಳ ಅಮೋಘ ಪ್ರದರ್ಶನದ ಬಳಿಕ ಯುವ ಸ್ಪಿನ್ನರ್ ಮಾನವ್ ಸುತಾರ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸಿದ್ದು, ಇದರೊಂದಿಗೆ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟದಲ್ಲಿ 564 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿದರೆ, ಪ್ರವಾಸಿ ಅಫ್ಘಾನಿಸ್ತಾನ ದಿನದಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 113 ರನ್ ಗಳಿಸಿದೆ. ತಂಡ ಇನ್ನೂ 451 ರನ್ ಹಿನ್ನಡೆಯಲ್ಲಿದ್ದು, ಫಾಲೋ-ಆನ್‌ಗೆ ಸಿಲುಕುವ ಭೀತಿಯಲ್ಲಿದೆ.
ಮೊದಲ ದಿನ 3 ವಿಕೆಟ್‌ಗೆ 368 ರನ್ ಕಲೆಹಾಕಿದ್ದ ಭಾರತಕ್ಕೆ ಭಾನುವಾರವೂ ನಾಯಕ ಶುಭ್‌ಮನ್ ಗಿಲ್-ರಿಷಭ್ ಪಂತ್ ಆಸರೆಯಾದರು. ಈ ಜೋಡಿ 4ನೇ ವಿಕೆಟ್‌ಗೆ 216 ಎಸೆತಗಳಲ್ಲಿ 169 ರನ್ ಕಲೆಹಾಕಿತು. ತಂಡದ ಮೊತ್ತ 416 ರನ್ ಆಗಿದ್ದಾಗ ಗಿಲ್(126 ರನ್) ಔಟಾದರು. ಶತಕದತ್ತ ಮುನ್ನುಗ್ಗುತ್ತಿದ್ದ ರಿಷಭ್ ಪಂತ್ 81 ರನ್ ಗಳಿಸಿ ನಿರ್ಗಮಿಸಿದರು. ಆ ಬಳಿಕ ತಂಡಕ್ಕೆ ನೆರವಾಗಿದ್ದು ವಾಷಿಂಗ್ಟನ್ ಸುಂದರ್. ಅವರು 52 ರನ್ ಗಳಿಸಿ ಔಟಾಗದೆ ಉಳಿದರು. ಧ್ರುವ್ ಜುರೆಲ್ 19, ಮಾನವ್ ಸುತಾರ್ 28, ಮೊಹಮ್ಮದ್ ಸಿರಾಜ್ 22 ರನ್ ಕೊಡುಗೆ ನೀಡಿದರು. ಮೊಹಮ್ಮದ್ ಸಲೀಂ 6 ವಿಕೆಟ್ ಪಡೆದರು.
ಬಳಿಕ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನಕ್ಕೆ 6ನೇ ಓವರ್‌ನಲ್ಲಿ ಆಘಾತ ಎದುರಾಯಿತು. ತಮ್ಮ ಮೊದಲ ಓವರ್‌ನಲ್ಲೇ ಮಾನವ್ ಅವರು ಅಬ್ದುಲ್ ಮಲಿಕ್(16)ರನ್ನು ಔಟ್ ಮಾಡಿದರು. ಆ ಬಳಿಕ ರಹ್ಮತ್ ಶಾ(ಔಟಾಗದೆ 43) ಹೊರತಾಗಿ ಬೇರೆ ಯಾರಿಗೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ. ಮಲಿಕ್ ಬಳಿಕ ರಹ್ಮಾನುಲ್ಲಾ ಗುರ್ಬಾಜ್ ಹಾಗೂ ಅಫ್ಸರ್ ವಿಕೆಟನ್ನೂ ಮಾನವ್ ಪಡೆಯುವ ಮೂಲಕ ಆಫ್ಘನ್ ಆಟಕ್ಕೆ ಕಡಿವಾಣ ಹಾಕಿದರು. ಮತ್ತೊಂದೆಡೆ ಬಿಗಿ ದಾಳಿ ನಡೆಸಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಸೆದಿಕುಲ್ಲಾ ಅತಲ್ ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿಗೆ ಪೆವಿಲಿಯನ್ ಹಾದಿ ತೋರಿದರು.
ಟೆಸ್ಟ್‌ನಲ್ಲಿ ಪಾದಾರ್ಪಣೆ ಪಂದ್ಯದ ಮೊದಲ ಓವರ್‌ನಲ್ಲೇ ವಿಕೆಟ್ ಕಿತ್ತ ಭಾರತದ 8ನೇ ಬೌಲರ್ ಎಂಬ ಹೆಗ್ಗಳಿಕೆಗೆ ಮಾನವ್ ಸುತಾರ್ ಪಾತ್ರರಾಗಿದ್ದಾರೆ. ಈ ಮೊದಲು ಮೋಂಟು ಬ್ಯಾನರ್ಜಿ(1948), ಮನೊಹರ್ ಹಾರ್ದಿಕರ್(1958), ವಮನ್ ಕುಮಾರ್(1961), ಚೇತನ್ ಶರ್ಮಾ(1984), ಡಬ್ಲ್ಯುವಿ ರಾಮನ್(1988), ನಿಲೇಶ್ ಕುಲ್ಕರ್ಣಿ(1997), ಟಿನು ಯೋಹನ್ನಾನ್(2001) ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದಿದ್ದರು.
ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್ 564/8 ಡಿಕ್ಲೇರ್(ಗಿಲ್ 126, ರಾಹುಲ್ 100, ರಿಷಭ್ 81, ವಾಷಿಂಗ್ಟನ್ ಔಟಾಗದೆ 52, ಸಲೀಂ 6/140), ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್ 113/5(2ನೇ ದಿನದಂತ್ಯಕ್ಕೆ) (ರಹ್ಮತ್ ಔಟಾಗದೆ 43, ಮಾನವ್ 3-21, ಪ್ರಸಿದ್ಧ್ 2-27)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.