ವಿಶ್ವಕಪ್‌ನಲ್ಲಿ ಎಂದೂ ಕಂಡರಿಯದ ಆಟವಾಡಿದ RCB ಪ್ಲೇಯರ್‌, ಸೋಲಿನಂಚಿನಲ್ಲಿದ್ದ ಆಸೀಸ್‌ ಗೆಲ್ಲಿಸಿದ ಮ್ಯಾಕ್ಸ್‌ವೆಲ್‌!

Published : Nov 07, 2023, 10:16 PM ISTUpdated : Nov 07, 2023, 11:00 PM IST
 ವಿಶ್ವಕಪ್‌ನಲ್ಲಿ ಎಂದೂ ಕಂಡರಿಯದ ಆಟವಾಡಿದ RCB ಪ್ಲೇಯರ್‌, ಸೋಲಿನಂಚಿನಲ್ಲಿದ್ದ ಆಸೀಸ್‌ ಗೆಲ್ಲಿಸಿದ ಮ್ಯಾಕ್ಸ್‌ವೆಲ್‌!

ಸಾರಾಂಶ

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಆಸೀಸ್‌ ಸ್ಮರಣೀಯ ಗೆಲುವುಗಳಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಖಂಡಿತವಾಗಿ ಸೇರಿಕೊಳ್ಳುತ್ತದೆ. ಇನ್ನೇನು ಸೋಲು ಹಾದಿಯಲ್ಲಿದ್ದ ತಂಡ ಗೆಲುವು ಕಸಿದುಕೊಂಡ ರೀತಿ ಅಮೋಘವಾಗಿತ್ತು. ಅದಕ್ಕೆ ಕಾರಣರಾಗಿದ್ದು ಗ್ಲೆನ್‌ ಮ್ಯಾಕ್ಸ್‌ವೆಲ್‌.

ಮುಂಬೈ (ನ.7): ಅದು ಅಂತಿಂತ ಗೆಲುವಲ್ಲ.. ಆಸ್ಟ್ರೇಲಿಯಾ ಕ್ರಿಕೆಟ್‌ನ ಸ್ಮರಣೀಯ ಗೆಲುವುಗಳಲ್ಲಿ ಒಂದು. ಇನ್ನೇನು ತಂಡ ಅಫ್ಘಾನಿಸ್ತಾನದ ವಿರುದ್ಧ ದೊಡ್ಡ ಅಂತರದ ಸೋಲು ಕಂಡೇಬಿಟ್ಟಿತು ಎನ್ನುವ ಹಂತದಲ್ಲಿ ಬಿರುಗಾಳಿಯಂತೆ ಅಪ್ಪಳಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಏಕಾಂಗಿಯಾಗಿ ಹೋರಾಟ ನಡೆಸಿ ಆಸ್ಟ್ರೇಲಿಯಾ ತಂಡದ 3 ವಿಕೆಟ್‌ ಗೆಲುವಿಗೆ ಕಾರಣರಾದರು. ಕೊನೆಯ ಕ್ಷಣಗಳಲ್ಲಿ ನೋವಿನಿಂದ ನರಳುತ್ತಿದ್ದರೂ, ಒಂಚೂರು ಫುಟ್‌ವರ್ಕ್‌ ಬಳಸದೇ ಸಿಕ್ಸರ್‌, ಬೌಂಡರಿಗಳ ಮಳೆಗೆರೆದ ಮ್ಯಾಕ್ಸ್‌ವೆಲ್‌ ತಂಡ 6ನೇ ಗೆಲುವಿಗೆ ಕಾರಣರಾದರು. ಅದರೊಂದಿಗೆ ಆಸೀಸ್‌ ತಂಡ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ 5 ವಿಕೆಟ್‌ಗೆ 291 ರನ್‌ ಪೇರಿಸಿತು.ಪ್ರತಿಯಾಗಿ ಆಸ್ಟ್ರೇಲಿಯಾ ತಂಡ  ಒಂದು ಹಂತದಲ್ಲಿ 91 ರನ್‌ಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ಆಸೀಸ್‌ 46.5 ಓವರ್‌ಗಳಲ್ಲಿ 7 ವಿಕೆಟ್‌ಗೆ 193 ರನ್ ಬಾರಿಸಿ ಗೆಲುವು ಕಂಡಿತು.ವೇಳೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಡಿದ ಸಾಹಸಿಕ ಇನ್ನಿಂಗ್ಸ್‌ ಆಸೀಸ್‌ನ ಮಹಾನ್‌ ಗೆಲುವಿಗೆ ಕಾರಣವಾಯಿತು. 128 ಎಸೆತ ಎದುರಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ 10 ಸಿಕ್ಸರ್‌, 21 ಬೌಂಡರಿಗಳೊಂದಿಗೆ 201 ರನ್‌ ಬಾರಿಸಿ ಅಜೇಯರಾಗುಳಿದರು.

ಬಹುಶಃ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಡಿದ ಈ ಇನ್ನಿಂಗ್ಸ್‌ ಸದ್ಯದ ದಿನಗಳಲ್ಲಿ ಸಲೀಸಾಗಿ ಮರೆತುಹೋಗುವಂತ ಆಟ ಖಂಡಿತಾ ಅಲ್ಲ. ಅವರು ದ್ವಿಶತಕ ಬಾರಿಸಿದ್ದಕ್ಕಿಂತ ಹೆಚ್ಚಾಗಿ, ತಂಡದ ಅತ್ಯಂತ ಸಂಕಷ್ಟದ ಸಮಯದಲ್ಲಿ ಅವರು ಏಕಾಂಗಿಯಾಗಿ ಆಡಿದ ರೀತಿ ವರ್ಷಗಳ ಕಾಲ ಆಸೀಸ್‌ ನೆನಪಿಸಿಕೊಳ್ಳುತ್ತದೆ. ಈ ಇನ್ನಿಂಗ್ಸ್‌ನೊಂದಿಗೆ ಆಸ್ಟ್ರೇಲಿಯಾದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಖ್ಯಾತಿ ಇನ್ನಷ್ಟು ಉತ್ತುಂಗಕ್ಕೇರುವುದು ನಿಶ್ಚಿತ. ಇಂಥ ಅಸಾಧಾರಣ ಗೆಲುವಿನೊಂದಿಗೆ ಆಸೀಸ್‌ ಕೂಡ ವಿಶ್ವಕಪ್‌ನ ಸೆಮಿಫೈನಲ್‌ ಟಿಕೆಟ್‌ ಗಿಟ್ಟಿಸಿಕೊಂಡಿದೆ.

ಇದು ಏಕದಿನ ಕ್ರಿಕೆಟ್‌ ಹಾಗೂ ವಿಶ್ವಕಪ್‌ನ ಸರ್ವಶ್ರೇಷ್ಠ ಇನ್ನಿಂಗ್ಸ್‌ ಆಗುವ ಎಲ್ಲಾ ಮೌಲ್ಯಗಳನ್ನು ಹೊಂದಿದೆ. ಇನ್ನೇನು ಶತಕ ದಾಟಿದ ಬೆನ್ನಲ್ಲಿಯೇ ಎಡಗಾಲಿನ ಸಮಸ್ಯೆಗೆ ತುತ್ತಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸ್ವಲ್ಪ ಹೊತ್ತಿನಲ್ಲಿಯೇ ಬೆನ್ನುನೋವಿನ ಸಮಸ್ಯೆ ಕೂಡ ಬಾಧಿಸಿತು. ಆದರೂ, ಕೊನೆಯ ಕ್ಷಣಗಳಲ್ಲಿ ಅವರು ಕುಂಟುತ್ತಲೇ ಬ್ಯಾಟಿಂಗ್‌ ನಡೆಸಿದರು. ಮ್ಯಾಕ್ಸ್‌ವೆಲ್‌ಗೆ ಮೂರು ಬಾರಿ ಜೀವದಾನ ನೀಡಿದ ಅಫ್ಘಾನಿಸ್ತಾನ ತಂಡಕ್ಕೆ ಈ ಒಂದು ಸೋಲು ಅರಗಿಸಿಕೊಳ್ಳುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. 91 ರನ್‌ ಬಾರಿಸುವ ವೇಳೆಗೆ ಆಸೀಸ್‌ನ ಏಳು ಮಂದಿ ಆಟಗಾರರನ್ನು ಪೆವಿಲಿಯನ್‌ಗಟ್ಟಿದ್ದ ಅಫ್ಘಾನಿಸ್ತಾನ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿತ್ತು. ಡೇವಿಡ್‌ ವಾರ್ನರ್‌ (18), ಟ್ರಾವಿಸ್‌ ಹೆಡ್‌ (0), ಮಿಚೆಲ್‌ ಮಾರ್ಷ್‌ (24), ಮಾರ್ನಸ್‌ ಲಬುಶೇನ್‌ (14), ಜೋಸ್‌ ಇಂಗ್ಲಿಸ್‌ (0), ಮಾರ್ಕಸ್‌ ಸ್ಟೋಯಿನಿಸ್‌ (6) ಹಾಗೂ ಮಿಚೆಲ್‌ ಸ್ಟಾರ್ಕ್‌ (3) ವಿಕೆಟ್‌ಗಳನ್ನು ಆಸೀಸ್‌ ಕಳೆದುಕೊಂಡಿತ್ತು.

ತನ್ನ ತಾಯಿಗೆ ಇರೋ ಕೊರಗು ಇದೊಂದೇ, ಕೆಎಲ್‌ ರಾಹುಲ್‌ ಹೀಗಂದಿದ್ದೇಕೆ!

8ನೇ ವಿಕೆಟ್‌ಗೆ ಮ್ಯಾಕ್ಸ್‌ವೆಲ್‌ ಹಾಗೂ ನಾಯಕ ಪ್ಯಾಟ್‌ ಕಮ್ಮಿನ್ಸ್‌ 202 ರನ್‌ಗಳ ಅದ್ಭುತ ಜೊತೆಯಾಟವಾಡಿದರು. ಇದರಲ್ಲಿ ಕಮ್ಮಿನ್ಸ್‌ ಪಾಲು ಬರೀ 12 ರನ್‌ ಆಗಿದ್ದವು. ಇದಕ್ಕಾಗಿ 68 ಎಸೆತ ಎದುರಿಸಿದ ಕಮ್ಮಿನ್ಸ್‌, ಅತ್ಯಂತ ಎಚ್ಚರಿಕೆಯಿಂದ ಸ್ಟ್ರೈಕ್‌ಅನ್ನು ಮ್ಯಾಕ್ಸ್‌ವೆಲ್‌ಗೆ ಬಿಟ್ಟುಕೊಡುತ್ತಾ ತಂಡದ ಗೆಲುವಿಗೆ ಶ್ರಮಿಸಿದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಾರಿಸಿರುವ 201 ರನ್‌, ಏಕದಿನ ಕ್ರಿಕೆಟ್‌ನಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ ಒಬ್ಬರ ಗರಿಷ್ಠ ಸ್ಕೋರ್‌ ಎನಿಸಿದೆ. 

ವಿರಾಟ್‌ ಕೊಹ್ಲಿ ಬಾರಿಸಿದ ಸಿಕ್ಸರ್‌ಅನ್ನು Shot of the Century ಎಂದು ಘೋಷಿಸಿದ ಐಸಿಸಿ!

ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಾರಿಸಿದ ಅಜೇಯ 201 ರನ್‌, ವಿಶ್ವಕಪ್‌ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ನ ಮೂರನೇ ಗರಿಷ್ಠ ಮೊತ್ತ ಎನಿಸಿದೆ. 2015ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನ್ಯೂಜಿಲೆಂಡ್‌ನ ಮಾರ್ಟಿನ್‌ ಗುಪ್ಟಿಲ್‌ ಬಾರಿಸಿದ ಅಜೇಯ 237 ರನ್‌ ಮೊದಲ ಸ್ಥಾನದಲ್ಲಿದ್ದರೆ, 2015ರಲ್ಲಿ ಜಿಂಬಾಬ್ವೆ ವಿರುದ್ಧ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಬಾರಿಸಿದ 215 ರನ್‌ ನಂತರದ ಸ್ಥಾನದಲ್ಲಿದೆ.
 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್