
ನವದೆಹಲಿ: ಟೀಂ ಇಂಡಿಯಾದ ಪ್ರಧಾನ ಕೋಚ್ ಗೌತಮ್ ಗಂಭೀರ್, ಪಾಕಿಸ್ತಾನ ವಿರುದ್ಧ ಭಾರತ ತಂಡ ಯಾವುದೇ ಕಾರಣಕ್ಕೂ ಕ್ರಿಕೆಟ್ ಆಡಬಾರದು. ಎರಡು ದೇಶಗಳ ನಡುವಿನ ಕ್ರಿಕೆಟ್ ಚಟುವಟಿಕೆ ಸಂಪೂರ್ಣವಾಗಿ ಬಂದ್ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಪಹಲ್ಗಾಮ್ ಉಗ್ರ ದಾಳಿ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿರುವ ಗಂಭೀರ್, ಏಷ್ಯಾಕಪ್ ಹಾಗೂ ಐಸಿಸಿ ಟೂರ್ನಿಗಳಲ್ಲೂ ಸಂಪೂರ್ಣವಾಗಿ ಪಾಕಿಸ್ತಾನ ವಿರುದ್ಧ ಪಂದ್ಯ ಬೇಡ ಎಂದು ತಾಕೀತು ಮಾಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಗಂಭೀರ್, ಪಾಕಿಸ್ತಾನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಯಾವುದೇ ಕ್ರಿಕೆಟ್ ಚಟುವಟಿಕೆ ಬೇಡ ಎಂದಿದ್ದಾರೆ. ಪಾಕ್ ವಿರುದ್ಧ ಕ್ರಿಕೆಟ್ ಪಂದ್ಯ ಆಯೋಜಿಸುವ ಬಗ್ಗೆ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ಗಂಭೀರ್, 'ಈ ಮೊದಲು ನಾನು ಹಲವು ಬಾರಿ ಪಾಕಿಸ್ತಾನ ವಿರುದ್ಧ ಪಂದ್ಯಕ್ಕೆ ವಿರೋಧಿಸಿದ್ದೇನೆ. ಅವರೊಂದಿಗೆ (ಪಾಕ್) ನಾವು ಆಡಬೇಕೋ ಬೇಡವೋ ಎನ್ನುವುದನ್ನು ಅಂತಿಮವಾಗಿ ನಿರ್ಧರಿಸುವುದು ಕೇಂದ್ರ ಸರ್ಕಾರ. ಭಾರತೀಯ ನಾಗರಿಕರು, ದೇಶದ ಸೈನಿಕರ ಜೀವಕ್ಕಿಂತ ಯಾವುದೋ ಕ್ರಿಕೆಟ್ ಪಂದ್ಯ, ಬಾಲಿವುಡ್ ಸಿನಿಮಾ ಅಥವಾ ಮತ್ತಿನ್ಯಾವುದೋ ಮನರಂಜನಾ ಚಟುವಟಿಕೆ ಮುಖ್ಯವಲ್ಲ ಎನ್ನುವುದು ನನ್ನ ಅಭಿಪ್ರಾಯ' ಎಂದರು.
ಪಾಕಿಸ್ತಾನ ವಿರುದ್ಧ ಈ ವರ್ಷ ಏಷ್ಯಾಕಪ್, ಮುಂದಿನ ವರ್ಷ ಭಾರತ-ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಪ್ರಶ್ನಿಸಿದಾಗ ಗಂಭೀರ್, 'ಇದು ನಾನು ನಿರ್ಧರಿಸುವ ವಿಚಾರವಲ್ಲ. ನನ್ನ ಅಭಿಪ್ರಾಯವನ್ನು ನಾನು ಹೇಳಬಹುದು ಅಷ್ಟೇ. ಆಡಬೇಕೋ ಬೇಡವೋ ಎನ್ನುವುದನ್ನು ಬಿಸಿಸಿಐ ಹಾಗೂ ಬಹು ಮುಖ್ಯವಾಗಿ ಕೇಂದ್ರ ಸರ್ಕಾರ ನಿರ್ಧರಿಸಬೇಕು. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವೆಲ್ಲ ಬದ್ದರಾಗಿರುತ್ತೇವೆ' ಎಂದರು.
ಸದ್ಯ ಪಹಲ್ಗಾಮ್ ನಲ್ಲಿ ಹೇಡಿಗಳಂತೆ ಕೆಲ ಉಗ್ರರು ಭಾರತೀಯ ಪ್ರವಾಸಿಗರನ್ನು ಗುರಿ ಮಾಡಿಕೊಂಡು 26 ಮಂದಿ ಅಮಾಯಕರ ಹತ್ಯ ಮಾಡಿದ್ದರು. ಇದಕ್ಕೆ ಪಾಕಿಸ್ತಾನ ಪ್ರೇರಿತ ಉಗ್ರರ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ದೇಶಾದ್ಯಂತ ಕೇಳಿ ಬಂದಿತ್ತು. ಇದರ ಭಾಗವಾಗಿ ಇಂದು ಮುಂಜಾನೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರನೆಲೆಗಳ ಮೇಲೆ ಅತ್ಯಾಧುನಿಕ ಕ್ಷಿಪಣಿಗಳನ್ನು ಬಳಸಿಕೊಂಡು ದಾಳಿ ನಡೆಸಿದ್ದು, ಹಲವು ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಲಯದಲ್ಲಿ ಇರುವಷ್ಟು ದಿನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಆಡಲಿ
ಭಾರತ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಲಯ ಕಾಯ್ದುಕೊಳ್ಳುವಷ್ಟು ದಿನ ತಂಡದಲ್ಲಿ ಆಡಲಿ. ಯಾವಾಗ ನಿವೃತ್ತಿ ಪಡೆಯಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರ ಎಂದು ಪ್ರಧಾನ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. ಕೊಹ್ಲಿ ಹಾಗೂ ರೋಹಿತ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗುವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, 'ತಂಡದ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ. ಆಟಗಾರರನ್ನು ಆಯ್ಕೆ ಮಾಡುವುದು ಆಯ್ಕೆಗಾರರ ಕೆಲಸ. ಆಡುವ ಹನ್ನೊಂದರ ಬಳಗವನ್ನಷ್ಟೇ ನಾನು ಆಯ್ಕೆ ಮಾಡುತ್ತೇನೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಲಯ ಕಾಯ್ದುಕೊಳ್ಳುವಷ್ಟು ದಿನ ಆಡಬಹುದು. ಲಯ, ಫಿಟ್ನೆಸ್ ಇದ್ದರೆ 40 ವರ್ಷದ ತನಕ ಏಕೆ, 45 ವರ್ಷದವರೆಗೂ ಆಡಬಹುದು. ಯಾರು ತಾನೆ ಬೇಡ ಎಂದು ಏಕೆ ಹೇಳಬೇಕು. ನಿವೃತ್ತಿ ನಿರ್ಧಾರ ಆಟಗಾರರದ್ದೇ ಆಗಿರಬೇಕು. ಅದರಲ್ಲಿ ಬೇರಾರೂ ತಲೆಹಾಕಬಾರದು' ಎಂದು ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.