IPL ಪ್ರಸಾರಕ್ಕೆ 1000 ಮಂದಿ ಶ್ರಮ: ತಂತ್ರಜ್ಞಾನ, ಕಾಮೆಂಟ್ರಿ ಮತ್ತು ₹48,000 ಕೋಟಿ ಬ್ಯುಸಿನೆಸ್!

Published : May 07, 2025, 09:08 AM ISTUpdated : May 07, 2025, 11:07 AM IST
IPL ಪ್ರಸಾರಕ್ಕೆ 1000 ಮಂದಿ ಶ್ರಮ: ತಂತ್ರಜ್ಞಾನ, ಕಾಮೆಂಟ್ರಿ ಮತ್ತು ₹48,000 ಕೋಟಿ ಬ್ಯುಸಿನೆಸ್!

ಸಾರಾಂಶ

ಐಪಿಎಲ್ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಲೀಗ್ ಆಗಿದೆ. ತೆರೆಮರೆಯಲ್ಲಿ ಸಾವಿರಾರು ಸಿಬ್ಬಂದಿ ಈ ಲೀಗ್‌ನ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಕನ್ನಡಪ್ರಭ ತಂಡವು ಸ್ಟಾರ್ ಸ್ಪೋರ್ಟ್ಸ್ ಕಚೇರಿಗೆ ಭೇಟಿ ನೀಡಿ ಐಪಿಎಲ್ ಪ್ರಸಾರದ ಹಿಂದಿರುವ ತಾಂತ್ರಿಕತೆಯನ್ನು ಅರಿತುಕೊಂಡಿದೆ.

- ಸ್ಪಂದನ್ ಕಣಿಯಾ‌ರ್, ಕನ್ನಡಪ್ರಭ

ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ನಡೆಸುವ ವಿಶ್ವ ಶ್ರೇಷ್ಠ ಕ್ರೀಡಾ ಲೀಗ್‌ಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇಡೀ ಕ್ರಿಕೆಟ್ ಜಗತ್ತನ್ನೇ ತನ್ನತ್ತ ಸೆಳೆಯುತ್ತದೆ. ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಎರಡು ತಿಂಗಳಿಗೂ ಹೆಚ್ಚು ಕಾಲ, ತಮ್ಮ ತಮ್ಮ ನೆಚ್ಚಿನ ತಂಡಗಳು, ಆಟಗಾರರನ್ನು ಬೆಂಬಲಿಸುತ್ತಾ ತಮ್ಮ ಇಡೀ ಗಮನ, ಉತ್ಸಾಹವನ್ನು ಐಪಿಎಲ್ ಮೇಲೆ ಕೇಂದ್ರೀಕೃತಗೊಳಿಸುತ್ತಾರೆ. 

ಮೈದಾನದಲ್ಲಿ ಆಟಗಾರರು, ಕೆಲವೊಂದಷ್ಟು ಸಹಾಯಕ ಸಿಬ್ಬಂದಿ ಉತ್ಕೃಷ್ಟ ಗುಣಮಟ್ಟದ ಕ್ರಿಕೆಟ್ ಆಡುತ್ತಾ, ಅಭಿಮಾನಿಗಳನ್ನು ರಂಜಿಸಲು ಪ್ರಯತ್ನಿಸಿದರೆ ತೆರೆ ಮರೆಯಲ್ಲಿ ಏನಿಲ್ಲವೆಂದರೂ 1000 ಸಿಬ್ಬಂದಿ, ಒಂದೇ ಬಿಲ್ಡಿಂಗ್‌ನೊಳಗೆ ಕೂತು ಇಡೀ ಜಗತ್ತಿಗೆ ಆಟದ ದೃಶ್ಯಗಳನ್ನು ತಲುಪಿಸಲು ಕೆಲಸ ಮಾಡುತ್ತಿರುತ್ತಾರೆ. ಇತ್ತೀಚೆಗೆ ಮುಂಬೈನಲ್ಲಿರುವ ಐಪಿಎಲ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್, ಜಿಯೋ ಸ್ಟಾರ್'ನ ಕೇಂದ್ರ ಕಚೇರಿಗೆ 'ಕನ್ನಡಪ್ರಭ' ಭೇಟಿ ನೀಡಿತ್ತು. ಅಲ್ಲಿ, ಐಪಿಎಲ್ ಪ್ರಸಾರದ ಹಿಂದಿರುವ ತಾಂತ್ರಿಕ ವರ್ಗವನ್ನು ಭೇಟಿ ಮಾಡಿ, ಪ್ರಸಾರದ ಇಂಚಿಂಚು ಮಾಹಿತಿಯನ್ನು ಕಲೆಹಾಕಿತು. ಒಂದು ಪಂದ್ಯ ಟೀವಿ, ಆನ್‌ಲೈನ್‌ನಲ್ಲಿ ಪ್ರಸಾರಗೊಳ್ಳುವಾಗ ಎಷ್ಟೆಲ್ಲಾ ಶ್ರಮ ಇರುತ್ತದೆ ಎನ್ನುವ ಕುರಿತು ಸಂಕ್ಷಿಪ್ತ ವಿವರಗಳನ್ನು ಪತ್ರಿಕೆ ತನ್ನ ಓದುಗರ ಮುಂದಿಡುತ್ತಿದೆ. 

ಐಪಿಎಲ್: ಸಾವಿರಾರು ಕೋಟಿ ರು. ವ್ಯವಹಾರ!
ಐಪಿಎಲ್ ಪ್ರಸಾರ ಹೇಗೆ ನಡೆಯಲಿದೆ ಎನ್ನುವುದನ್ನು ತಿಳಿದುಕೊಳ್ಳುವ ಮೊದಲು, ಅದರ ಹಿಂದಿರುವ ಹಣದ ಲೆಕ್ಕಾಚಾರವೇನು ಎನ್ನುವುದನ್ನೊಮ್ಮೆ ನೆನಪಿಸಿಕೊಳ್ಳಬೇಕು. 2022ರಲ್ಲಿ 5 ವರ್ಷಗಳ ಅವಧಿಗೆ ಐಪಿಎಲ್ ಪ್ರಸಾರ ಹಕ್ಕನ್ನು ಬಿಸಿಸಿಐ ಬರೋಬ್ಬರಿ 48,390 ಕೋಟಿ ರು.ಗೆ ಮಾರಾಟ ಮಾಡಿದಾಗ, ಎಲ್ಲರೂ ಹುಬ್ಬೇರಿಸಿದ್ದರು. ಐಪಿಎಲ್ ಆರಂಭಗೊಂಡಾಗ, ಲೀಗ್ ದೊಡ್ಡದಾಗಿ ಬೆಳೆಯಲಿದೆ ಎನ್ನುವ ವಿಶ್ವಾಸ ಬಿಸಿಸಿಐಗೆ ಇತ್ತಾದರೂ, ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ವ್ಯಾಪಕವಾಗಿ ಎದ್ದು ನಿಲ್ಲಲಿದೆ ಎನ್ನುವ ಅಂದಾಜನ್ನು ಸ್ವತಃ ಬಿಸಿಸಿಐ ಕೂಡ ಮಾಡಿರಲಿಕ್ಕಿಲ್ಲ.

ಟೀವಿ ಹಕ್ಕು 23,575 ಕೋಟಿ ರು.ಗೆ ಸ್ಟಾರ್ ಇಂಡಿಯಾ ಪಾಲಾಗಿತ್ತು. 23,758 ಕೋಟಿ ರು. ನೀಡಿ ವಯಕಾಮ್ 18 (ಜಿಯೋ) ಡಿಜಿಟಲ್ ಹಕ್ಕು ಖರೀದಿಸಿತ್ತು. ಕಳೆದ ವರ್ಷ ಸ್ಟಾರ್ ಸಂಸ್ಥೆಯನ್ನು ಜಿಯೋ ತನ್ನ ತೆಕ್ಕೆಗೆ ತೆಗೆದುಕೊಂಡಾಗ, ಇಡೀ ಐಪಿಎಲ್ ಸಾಮ್ರಾಜ್ಯವೇ ಜಿಯೋ ಪಾಲಾಯಿತು. ಇಷ್ಟು ದೊಡ್ಡ ಮೊತ್ತವನ್ನು ವೆಚ್ಚ ಮಾಡಬೇಕಾದರೆ, ಐಪಿಎಲ್ ನಿರ್ವಹಣೆಯನ್ನು ಎಷ್ಟು ದೊಡ್ಡ ಮಟ್ಟದಲ್ಲಿ ನಡೆಸಬಹುದು ಎನ್ನುವ ಕುತೂಹಲ ಸಹಜವಾಗಿಯೇ ಇತ್ತು. ಅದೇ ಕುತೂಹಲದೊಂದಿಗೆ ಮುಂಬೈನ ಲೋಯರ್ ಪರೇಲ್ ನಲ್ಲಿರುವ ಸ್ಟಾರ್ ಸ್ಪೋರ್ಟ್ಸ್ ಕಚೇರಿಗೆ 'ಕನ್ನಡಪ್ರಭ' ಕಾಲಿಟ್ಟಿತು.

12 ಭಾಷೆಯಲ್ಲಿ ಕಾಮೆಂಟ್ರಿ, 12ಕ್ಕೂ ಹೆಚ್ಚು ಸ್ಟುಡಿಯೋ!
ಐಪಿಎಲ್‌ ಟೀವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್, ಡಿಜಿಟಲ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರಗೊಳ್ಳುತ್ತಿದೆ. ಟೀವಿಯಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತಿದೆ. ಡಿಜಿಟಲ್‌ನಲ್ಲಿ ಈ 5 ಭಾಷೆಗಳೊಂದಿಗೆ ಹರ್ಯಾಣಿ, ಪಂಜಾಬಿ, ಭೋಜ್‌ಪುರಿ, ಮಲಯಾಳಂ, ಬಂಗಾಳಿ, ಮರಾಠಿ, ಗುಜರಾತಿಯಲ್ಲೂ ಕಾಮೆಂಟ್ರಿ ಇರಲಿದೆ. ಇಷ್ಟೂ ಭಾಷೆಗಳಿಗೆ ಬೇರೆ ಬೇರೆ ಸ್ಟುಡಿಯೋ, ಬೇರೆ ಬೇರೆ ವೀಕ್ಷಕ ವಿವರಣೆಗಾರರು, ನಿರೂಪಕರು ಇದ್ದಾರೆ. ಏನಿಲ್ಲವೆಂದರೂ ಒಟ್ಟು 12ಕ್ಕೂ ಹೆಚ್ಚು ಸ್ಟುಡಿಯೋಗಳು ಪಂದ್ಯಕ್ಕೂ ಮುನ್ನ, ಇನ್ನಿಂಗ್ಸ್ ಮಧ್ಯೆ ಹಾಗೂ ಪಂದ್ಯದ ನಂತರ ನಡೆಯುವ ವಿಶ್ಲೇಷಣಾ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತವೆ. ಅಲ್ಲದೇ, ಇಂಗ್ಲಿಷ್ ಹಾಗೂ ಹಿಂದಿ ಹೊರತುಪಡಿಸಿ, ಇನ್ನುಳಿದ ಭಾಷೆಗಳ ವೀಕ್ಷಕ ವಿವರಣೆಯನ್ನು ಸ್ಟುಡಿಯೋದಿಂದಲೇ ನಿಭಾಯಿಸಲಾಗುತ್ತದೆ. ಸ್ಟಾರ್ ಇಂಡಿಯಾದ ಕಟ್ಟದಲ್ಲಿರುವ ಸ್ಟುಡಿಯೋಗಳಲ್ಲಿ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳ ತಂಡಗಳು ಪ್ರಸಾರ ತಂಡಗಳು ಕಾರ್ಯನಿರ್ವಹಿಸಿದರೆ, ಜಿಯೋ ಕಟ್ಟಡದಲ್ಲಿರುವ ಸ್ಟುಡಿಯೋಗಳಲ್ಲಿ ಉಳಿದ ಭಾಷೆಗಳ ತಂಡಗಳು ಕೆಲಸ ಮಾಡಲಿವೆ. ವಿಶೇಷ ಎಂದರೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಕಾಮೆಂಟ್ರಿಗೆ ಟೀವಿಗೆ ಪ್ರತ್ಯೇಕ, ಡಿಜಿಟಲ್‌ಗೆ ಪ್ರತ್ಯೇಕ ತಂಡಗಳಿವೆ. ಏಕಕಾಲಕ್ಕೆ ಅಷ್ಟೂ ಭಾಷೆಗಳ ತಂಡಗಳು ಶೇ.100ಕ್ಕೆ 100ರಷ್ಟು ಸಮನ್ವಯ ಕಾಯ್ದುಕೊಂಡು ಕೆಲಸ ನಿರ್ವಹಿಸಲಿವೆ.

150ಕ್ಕೂ ಹೆಚ್ಚು ಕಾಮೆಂಟೇಟರ್‌ಗಳು!
ಮೊದಲೇ ತಿಳಿಸಿದಂತೆ ಐಪಿಎಲ್ ವೀಕ್ಷಕ ವಿವರಣೆಯನ್ನು ವಿವಿಧ ಭಾಷೆಗಳಲ್ಲಿ ನಿರ್ವಹಿಸಲಾಗುತ್ತಿದೆ. ಇದಕ್ಕೆಂದೇ 150ಕ್ಕೂ ಹೆಚ್ಚು ನುರಿತ ಕಾಮೆಂಟೇಟರ್‌ಗಳಿದ್ದಾರೆ. ಇವರೆಲ್ಲಾ ಒಂದಲ್ಲ ಒಂದು ಹಂತದಲ್ಲಿ ಕ್ರಿಕೆಟ್ ಆಡಿದವರು. ಬಹುತೇಕರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಆಟಗಾರರು. ಇನ್ನೂ ಅನೇಕರು ನಿವೃತ್ತಿ ಬಳಿಕ ಆಯ್ಕೆಗಾರ, ಆಡಳಿತಗಾರ, ಅಂಪೈರ್ ಹೀಗೆ ಕ್ರಿಕೆಟ್‌ನ ವಿವಿಧ ಮಜಲುಗಳನ್ನು ಕಂಡವರು. ಸಾಧ್ಯವಾದಷ್ಟು ಎಲ್ಲಾ ಆಯಾಮಗಳಿಂದಲೂ ಆಟವನ್ನು ವಿಶ್ಲೇಷಿಸಿ. ನೋಡುಗರಿಗೆ ಹೊಸ ಮಾಹಿತಿ, ಅನುಭವವನ್ನು ಒದಗಿಸುವುದು ಪ್ರಸಾರಕರ ಉದ್ದೇಶ.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಉಪಕರಣ ಬಳಕೆ
ಐಪಿಎಲ್ ಪ್ರಸಾರಕ್ಕೆ ಜಿಯೋ ಸ್ಟಾರ್ ಸಂಸ್ಥೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಉಪಕರಣಗಳನ್ನು ಬಳಕೆ ಮಾಡುತ್ತಿದೆ. 4k ಗುಣಮಟ್ಟದಲ್ಲಿ ಪಂದ್ಯಗಳು ಪ್ರಸಾರಗೊಳ್ಳುತ್ತಿದೆ. Dolby Atmos ಧ್ವನಿ ತಂತ್ರಜ್ಞಾನ ಬಳಕೆಯಾಗುತ್ತಿದ್ದು, ಕ್ರೀಡಾಂಗಣದಲ್ಲಿ ಆಟಗಾರರ ನಡುವಿನ ಸಂಭಾಷಣೆ, ಪ್ರೇಕ್ಷಕರ ಕೂಗು, ಸಂಭ್ರಮಾಚರಣೆಯ ತೀವ್ರತೆ ಸ್ವಲ್ಪವೂ ಕಡಿಮೆಯಾಗದಂತೆ ಟೀವಿ ಅಥವಾ ಮೊಬೈಲ್‌ನಲ್ಲಿ ಪ್ರಸಾರಗೊಳ್ಳಲಿದೆ. ಇದಷ್ಟೇ ಅಲ್ಲ, ಸ್ಟುಡಿಯೋಗಳಲ್ಲಿ ಬಳಸುವ ಕ್ಯಾಮೆರಾಗಳು, ಗ್ರಾಫಿಕ್ಸ್, ಎಲ್‌ಇಡಿ ಪರದೆಗಳು ಎಲ್ಲವೂ ಉತ್ಕೃಷ್ಟ ಗುಣಮಟ್ಟದ್ದಾಗಿವೆ.

ಸ್ಟೇಡಿಯಂನಿಂದ ಸ್ಟೀನ್‌ಗೆ ದಶ್ಯಗಳ ಪ್ರಸಾರ ಹೇಗೆ?
ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ದೃಶ್ಯಗಳನ್ನು ಬಿಸಿಸಿಐನ ಕ್ಯಾಮೆರಾಗಳು ಸೆರೆ ಹಿಡಿಯುತ್ತವೆ. ಇದಕ್ಕೆ ಅಂದಾಜು 36-38 ಕ್ಯಾಮೆರಾಗಳು ಬಳಕೆಯಾಗುತ್ತವೆ. ಜಿಯೋ ಸ್ಟಾರ್‌ನ ಎಲ್ಲಾ ಭಾಷೆಗಳ ಸ್ಟುಡಿಯೋದಲ್ಲಿ ಅಷ್ಟೂ ಕ್ಯಾಮೆರಾಗಳ ದೃಶ್ಯಗಳು ದೊಡ್ಡ ಪರದೆಯ ಮೇಲೆ ಏಕಕಾಲಕ್ಕೆ ಪ್ರಸಾರವಾಗುತ್ತಿರುತ್ತದೆ. ಇದರ ಜೊತೆಗೆ ಕ್ರೀಡಾಂಗಣದಲ್ಲಿ ಸ್ಟಾರ್ ಸಂಸ್ಥೆಯ 4 ಕ್ಯಾಮೆರಾಗಳು ಇರಲಿವೆ. ಆ ಕ್ಯಾಮೆರಾಗಳನ್ನು ನಿರ್ವಹಿಸುವ ಸಿಬ್ಬಂದಿ ಸ್ಟುಡಿಯೋದಲ್ಲಿರುವ ಸಿಬ್ಬಂದಿ ಜೊತೆ ನೇರ ಸಂಪರ್ಕದಲ್ಲಿರುತ್ತಾರೆ. ಪ್ರತಿ ಭಾಷೆಯ ಸ್ಟುಡಿಯೋದಲ್ಲಿ ಏನಿಲ್ಲವೆಂದರೂ 10-20 ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಕ್ರೀಡಾಂಗಣದಲ್ಲಿ ನಾಯಕನಿದ್ದಂತೆ ಸ್ಟುಡಿಯೋದಲ್ಲಿ ಡೈರೆಕ್ಟರ್ ಹಾಗೂ ಪ್ರೊಡ್ಯೂಸ‌ರ್ ಇರುತ್ತಾರೆ. ಇವರು ಇಡೀ ತಂಡವನ್ನು ನಿಯಂತ್ರಿಸುತ್ತಿರುತ್ತಾರೆ. ಪರದೆ ಮೇಲೆ ಯಾವ ದೃಶ್ಯಗಳು ಬರಬೇಕು. ರೀಪ್ಲೇ ಪ್ರಸಾರ ಯಾವಾಗ ಮಾಡಬೇಕು, ಕಾಮೆಂಟೇಟರ್‌ಗಳು ಯಾವ ವಿಷಯದ ಬಗ್ಗೆ ಚರ್ಚಿಸಬೇಕು. ಹೀಗೆ ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಅಲ್ಲದೇ ಯಾವ ದೃಶ್ಯಗಳನ್ನು ಬೇಕಿದ್ದರೂ ಕ್ರೀಡಾಂಗಣದಲ್ಲಿರುವ ಕ್ಯಾಮೆರಾಮನ್‌ಗಳಿಗೆ ಹೇಳಿ ಕ್ಷಣ ಮಾತ್ರದಲ್ಲಿ ಸೆರೆ ಹಿಡಿದು ತರಿಸಿಕೊಳ್ಳಬಹುದು. ಇವಿಷ್ಟು ಒಂದು ಕಡೆಯಾದರೆ, ಮತ್ತೊಂದೆಡೆ ಗ್ರಾಫಿಕ್ಸ್ ಆರ್ಕೈವ್, ಅಂಕಿ-ಅಂಶ (ಸ್ಟ್ಯಾಟಿಸ್ಟಿಕ್ಸ್) ಹೀಗೆ ಬೇರೆ ಬೇರೆ ತಂಡಗಳು ತಮ್ಮ ತಮ್ಮ ಕೆಲಸಗಳನ್ನು ನಿಭಾಯಿಸುತ್ತಿರುತ್ತವೆ. ಐಪಿಎಲ್‌ಗೆ ಸಂಬಂಧಪಟ್ಟ ಯಾವುದೇ ಮಾಹಿತಿ ಕ್ಷಣ ಮಾತ್ರದಲ್ಲಿ ಕಾಮೆಂಟೇಟರ್ ಗಳಿಗೆ ಲಭ್ಯವಾಗುತ್ತದೆ. ಯಾವುದೇ ಆಟಗಾರನ ಹಿಂದಿನ ದಾಖಲೆ, ಒಬ್ಬ ಬೌಲರ್ ಎದುರು ಆತನ ದಾಖಲೆ, ಒಂದು ನಿರ್ದಿಷ್ಟ ಕ್ರೀಡಾಂಗಣದಲ್ಲಿ ಆತನ ಅಂಕಿ-ಅಂಶ ಹೀಗೆ ಏನು ಮಾಹಿತಿ ಬೇಕಿದ್ದರೂ ಎಲ್ಲವೂ ಬೆರಳ ತುದಿಯಲ್ಲಿ ಸಿಗುತ್ತದೆ. ಇದೆಲ್ಲವನ್ನೂ ತಂತ್ರಜ್ಞಾನ ಬಳಸಿಕೊಂಡು ನುರಿತ ಸಿಬ್ಬಂದಿ ಒದಗಿಸುತ್ತಾರೆ.

ಇನ್ನು ಪ್ರತಿಯೊಂದು ಎಸೆತವನ್ನೂ ವೀಕ್ಷಕ ವಿವರಣೆ ಸಹಿತ ಸಂಗ್ರಹಿಸಲಾಗುತ್ತದೆ. ದೃಶ್ಯಗಳನ್ನು ಒಂದು ದೊಡ್ಡ ತಂಡ ಸರ್ವ‌್ರನಲ್ಲಿ ಜೋಪಾನ ಮಾಡುತ್ತದೆ. ಎಷ್ಟೇ ವರ್ಷ ಬಿಟ್ಟು ಯಾವುದೇ ಪಂದ್ಯದ ಯಾವುದೇ ನಿರ್ದಿಷ್ಟ ದೃಶ್ಯ ಬೇಕಿದ್ದರೂ ಸಣ್ಣ ಹುಡುಕಾಟದೊಂದಿಗೆ ಕೆಲವೇ ಸೆಕೆಂಡ್‌ಗಳಲ್ಲಿ ಲಭ್ಯವಾಗುತ್ತದೆ.

2 ತಿಂಗಳ ಟೂರ್ನಿಗೆ 10 ತಿಂಗಳ ಸಿದ್ಧತೆ!
ಐಪಿಎಲ್ ಪ್ರತಿ ವರ್ಷ ಮಾರ್ಚ್‌ನಿಂದ ಮೇ ವರೆಗೂ 2 ತಿಂಗಳು ಕಾಲ ನಡೆಯುತ್ತದೆ. ಆದರೆ ಇದಕ್ಕೆ ಬರೋಬ್ಬರಿ 10 ತಿಂಗಳ ಸಿದ್ಧತೆ ಇರುತ್ತದೆ ಎನ್ನುತ್ತಾರೆ ಜಿಯೋ ಸ್ಟಾರ್‌ನ ಸ್ಪೋರ್ಟ್ಸ್‌ ಕಂಟೆಂಟ್ ಹೆಡ್ ಸಿದ್ದಾರ್ಥ್ ಶರ್ಮಾ. 'ಪ್ರತಿ ವರ್ಷ ಐಪಿಎಲ್ ಫೈನಲ್ ಮುಗಿದ ಮಾರನೇ ದಿನವೇ ಮುಂದಿನ ಆವೃತ್ತಿಯ ಸಿದ್ಧತೆ ಶುರುವಾಗಲಿದೆ. ಮುಂದಿನ ವರ್ಷ ಯಾವ ಹೊಸ ವಿಷಯವನ್ನು ಪರಿಚಯಿಸಬೇಕು. ಅದಕ್ಕೆ ಬೇಕಿರುವ ತಂತ್ರಜ್ಞಾನ, ಅದನ್ನು ನಿರ್ವಹಿಸಲು ಬೇಕಿರುವ ಸೂಕ್ತ ಪ್ರತಿಭೆಗಳು, ಮಾನವ ಸಂಪನ್ಮೂಲ, ಜಾಹೀರಾತುದಾರರು, ಪ್ರಾಯೋಜಕರು, ಆಟಗಾರರ ಹರಾಜು ಪ್ರಕ್ರಿಯೆ. ಹೀಗೆ ನಿರಂತರವಾಗಿ ಸಿದ್ಧತೆ ನಡೆಯುತ್ತಲೇ ಇರುತ್ತದೆ. ಅಭಿಮಾನಿಗಳಿಲ್ಲದೆ ಆಟವಿಲ್ಲ. ಹೀಗಾಗಿ, ಅಭಿಮಾನಿಗಳಿಗೆ ವರ್ಷದಿಂದ ವರ್ಷಕ್ಕೆ ವಿಭಿನ್ನ, ಅತ್ಯುತ್ತಮ ಗುಣಮಟ್ಟದ ಅನುಭವ ನೀಡಬೇಕು ಎನ್ನುವುದೇ ನಮ್ಮ ಗುರಿ' ಎಂದು ಸಿದ್ಧಾರ್ಥ್, 'ಕನ್ನಡಪ್ರಭ'ದೊಂದಿಗೆ ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಹೆಚ್ಚುತ್ತಿದೆ ಕನ್ನಡ ಕಾಮೆಂಟ್ರಿ ಜನಪ್ರಿಯತೆ!
ಕನ್ನಡ ಪ್ರಸಾರ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಯನ್ನು ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿದೆ. ವೀಕ್ಷಕರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ರಾಜ್ಯದ ಹಲವು ಮಾಜಿ ಆಟಗಾರರು ಕಾಮೆಂಟೇಟರ್‌ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋಗೆ 'ಕನ್ನಡಪ್ರಭ' ಭೇಟಿ ನೀಡಿದಾಗ, ವೀಕ್ಷಕ ವಿವರಣೆಗಾರರಾದ ಜಿ.ಕೆ.ಅನಿಲ್ ಕುಮಾರ್, ವೇದಾ ಕೃಷ್ಣಮೂರ್ತಿ, ಭರತ್ ಚಿಪ್ಲಿ ಹಾಗೂ ಶ್ರೀನಿವಾಸಮೂರ್ತಿ ಮಾತಿಗೆ ಸಿಕ್ಕರು. ಎಲ್ಲರೂ ತಮ್ಮ ಅನುಭವವನ್ನು ಹಂಚಿಕೊಂಡರು.

ಸಿದ್ಧತೆಯೊಂದಿಗೆ ಸ್ಟುಡಿಯೋಗೆ: ನಾಲ್ಕೂ ಜನ ಕಾಮೆಂಟೇಟರ್‌ಗಳು ತಮ್ಮ ಸಿದ್ದತೆ ಬಗ್ಗೆ ಮಾತನಾಡಿದರು. 'ಪ್ರತಿ ಮ್ಯಾಚ್‌ಗೆ ವೀಕ್ಷಕ ವಿವರಣೆ ಮಾಡಲು ಸ್ಟುಡಿಯೋಗೆ ಕಾಲಿಡುವ ಮುನ್ನ ಬಹಳಷ್ಟು ಸಿದ್ಧತೆ ಮಾಡಿಕೊಂಡಿರುತ್ತೇವೆ. ಸಂಸ್ಥೆಯವರು ಒದಗಿಸುವ ಮಾಹಿತಿಯ ಜತೆ ನನ್ನದೇ ರೀತಿಯಲ್ಲಿ ಸಿದ್ಧತೆ ನಡೆಸುತ್ತೇವೆ. ದೇಸಿ ಋತುವಿನ ವೇಳೆ ಬೇರೆ ಬೇರೆ ರಾಜ್ಯಗಳ ತಂಡಗಳೊಂದಿಗೆ ಕೆಲಸ ಮಾಡುವುದರಿಂದ ಆಟಗಾರರ ಬಗ್ಗೆ ಆಸಕ್ತಿದಾಯಕ ಮಾಹಿತಿ ಸಿಗುತ್ತದೆ. ಕಾಮೆಂಟ್ರಿ ವೇಳೆ ಹೆಚ್ಚು ಜನಪ್ರಿಯವಲ್ಲದ ಆಟಗಾರರ ಬಗ್ಗೆ ವೀಕ್ಷಕರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ. ಇದು ವೀಕ್ಷಕರಿಗೆ ಬಹಳ ಇಷ್ಟವಾಗುತ್ತದೆ. ಕೇವಲ ಕ್ರೀಡಾಂಗಣದಲ್ಲಿ ಆಗುತ್ತಿರುವ ಸನ್ನಿವೇಶಗಳನ್ನು ವಿವರಿಸುವುದಲ್ಲದೇ, ಕುತೂಹಲಕಾರಿ ಕಥೆಗಳು, ತಾಂತ್ರಿಕ ವಿಚಾರಗಳನ್ನೂ ಕಾಮೆಂಟ್ರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ವೀಕ್ಷಕರನ್ನು ಸೆಳೆಯಲು ಅನುಕೂಲವಾಗುತ್ತದೆ' ಎಂದು ತಿಳಿಸಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ