
ಬ್ರಿಸ್ಟಲ್ (ಜು.10): ಇಂಗ್ಲೆಂಡ್ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 15 ವರ್ಷದ ಯುವ ಸೆನ್ಸೇಷನ್ ಆಟಗಾರ ವೈಭವ್ ಸೂರ್ಯವಂಶಿ ಆಟ ನೋಡಲು ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದರು. ಅದಕ್ಕೆ ಕಾರಣ, ಐಪಿಎಲ್‌ನಲ್ಲಿ ಅವರು ಆಡಿದ ಆಟ. ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಯಲ್ಲಿ ಪಾದಾರ್ಪಣೆಯೇನೋ ಮಾಡಿದರು. ಆದರೆ, ಅವರಿಂದ ನಿರೀಕ್ಷೆ ಮಾಡಲಾಗಿದ್ದ ಸ್ಫೋಟಕ ಇನ್ನಿಂಗ್ಸ್ ಬಂದಿರಲಿಲ್ಲ. ಮೂರೂ ಪಂದ್ಯಗಳಲ್ಲಿ ಅವರದು ದಯನೀಯ ಬ್ಯಾಟಿಂಗ್ ವೈಫಲ್ಯ. ಯುವ ಆಟಗಾರನ ಕಳಪೆ ಪ್ರದರ್ಶನದ ಕುರಿತು ಕ್ರಿಕೆಟ್ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ, ಇತ್ತ ಹೆಡ್ ಕೋಚ್ ಗೌತಮ್ ಗಂಭೀರ್ ಮಾತ್ರ ತೀವ್ರ ಅಸಮಾಧಾನಗೊಂಡಿದ್ದಾರೆ. ಬ್ರಿಸ್ಟಲ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ಬೆನ್ನಲ್ಲೇ, ಕೋಚ್ ಗಂಭೀರ್ ಮೈದಾನದಲ್ಲೇ ವೈಭವ್ ಅವರ ಕ್ಲಾಸ್ ತಗೆದುಕೊಂಡಿದ್ದಾರೆ ಎನ್ನಲಾಗಿದೆ.
ವೈಭವ್ ಅವರ ಈ ಕಳಪೆ ಆರಂಭವನ್ನು ಕೆಲವು ತಜ್ಞರು ಸಾಮಾನ್ಯ ಎಂದು ಹೇಳಿ ಬೆಂಬಲಿಸುತ್ತಿದ್ದರೆ, ಇನ್ನು ಕೆಲವು ವಿಶ್ಲೇಷಕರು ಈ ಯುವ ಓಪನರ್‌ನನ್ನು ತೀರಾ ಆತುರಪಟ್ಟು ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಹೆಡ್ ಕೋಚ್ ಗಂಭೀರ್ ಮತ್ತು ತಂಡದ ಮ್ಯಾನೇಜ್‌ಮೆಂಟ್ ಆಟಗಾರನ ಪ್ರದರ್ಶನದಿಂದ ತೃಪ್ತವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಪತ್ರಕರ್ತ ಅಂಕನ್ ಕಾರ್ ಅವರ ವರದಿಯ ಪ್ರಕಾರ, ನಾಲ್ಕನೇ ಪಂದ್ಯ ಮುಗಿದ ತಕ್ಷಣ ಕೋಚ್ ಗಂಭೀರ್ ಮೈದಾನದಲ್ಲೇ ಸುಮಾರು 10 ರಿಂದ 15 ನಿಮಿಷಗಳ ಕಾಲ ವೈಭವ್ ಸೂರ್ಯವಂಶಿ ಜೊತೆ ಗಂಭೀರವಾಗಿ ಮಾತನಾಡಿದ್ದಾರೆ.
ಪಂದ್ಯ ಮುಗಿದು ಬಹುಮಾನ ವಿತರಣಾ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿ, ಟೀಮ್ ಇಂಡಿಯಾ ಡಗೌಟ್‌ನಲ್ಲಿ ಗಂಭೀರ್ ಮತ್ತು ವೈಭವ್ ನಡುವೆ ಸುದೀರ್ಘ ಸಂಭಾಷಣೆ ನಡೆಯುತ್ತಿತ್ತು. ಅದು ಕೇವಲ ಸಾಮಾನ್ಯ ಚರ್ಚೆಯಾಗಿರದೆ, ಗುರು ಗಂಭೀರ್ ಶಿಷ್ಯನಿಗೆ ಬಿಸಿ ಮುಟ್ಟಿಸುತ್ತಿರುವಂತಿತ್ತು. ತಮ್ಮ ಹೆಸರಿಗೆ ತಕ್ಕಂತೆಯೇ ಅತ್ಯಂತ ಗಂಭೀರ ಮುಖಭಾವದಲ್ಲಿದ್ದ ಕೋಚ್, ಹಾವಭಾವಗಳ ಮೂಲಕವೇ ಯುವ ಓಪನರ್ ಬ್ಯಾಟಿಂಗ್ ಶೈಲಿಯ ಬಗ್ಗೆ ತಮಗಿರುವ ಅಸಮಾಧಾನವನ್ನು ನೇರವಾಗಿಯೇ ವ್ಯಕ್ತಪಡಿಸುತ್ತಿದ್ದರು.
ಕೋಚ್ ಗಂಭೀರ್ ಕೇವಲ ವೈಭವ್ ಸೂರ್ಯವಂಶಿ ಅವರನ್ನಷ್ಟೇ ಅಲ್ಲದೆ, ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನೂ ಕರೆದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ವೈಭವ್ ಅವರ ಕ್ಲಾಸ್ ತಗೆದುಕೊಳ್ಳುವ ಮುನ್ನ ಗಂಭೀರ್ ಮತ್ತು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅದೇ ಡಗೌಟ್‌ನಲ್ಲಿ ನಾಯಕ ಅಯ್ಯರ್ ಜೊತೆ ದೀರ್ಘಕಾಲದ ಚರ್ಚೆ ನಡೆಸಿದ್ದರು. ಈ ಚರ್ಚೆಯೂ ಅಷ್ಟೇ ತೀಕ್ಷ್ಣವಾಗಿ ಕೂಡಿತ್ತು ಮತ್ತು ಇದರಲ್ಲಿ ಕೋಚ್ ಗಂಭೀರ್ ಅವರ ತೀವ್ರ ಆಕ್ರೋಶ ಎದ್ದು ಕಾಣುತ್ತಿತ್ತು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಯ್ಯರ್ ಅವರ ನಾಯಕತ್ವ ಮತ್ತು ಇಡೀ ತಂಡದ ಒಟ್ಟಾರೆ ಪ್ರದರ್ಶನದಿಂದ ಗಂಭೀರ್ ಭಾರೀ ಬೇಸರಗೊಂಡಿದ್ದಾರೆ ಮತ್ತು ಆಕ್ರೋಶವನ್ನು ಅವರು ಮುಚ್ಚಿಡದೆ ಬಹಿರಂಗವಾಗಿಯೇ ತೋರ್ಪಡಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಇಂಗ್ಲೆಂಡ್ ಪ್ರವಾಸದ ಆರಂಭಿಕ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದಿದ್ದಾಗ, ಗೌತಮ್ ಗಂಭೀರ್ ಸೇರಿದಂತೆ ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶ್ನೆಗಳು ಎದ್ದಿದ್ದವು. ಆದರೆ, ತದನಂತರ ಸತತ ಮೂರು ಪಂದ್ಯಗಳಲ್ಲಿ ಅವಕಾಶ ನೀಡಿದಾಗಲೂ ವೈಭವ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದೆ, ಕ್ರೀಸ್‌ಗೆ ಬಂದ ತಕ್ಷಣವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರುತ್ತಿರುವುದು ಈಗ ಮ್ಯಾನೇಜ್‌ಮೆಂಟ್ ತಲೆನೋವಿಗೆ ಕಾರಣವಾಗಿದೆ.
After losing the match, a very animated conversation is taking place between Gautam Gambhir, Sitanshu Kotak, and Shreyas Iyer.
- Gautam Gambhir is talking to Vaibhav Sooryavanshi in front of everyone in the field for 10-15 minutes and is looking very angry.
- Ankan Kar , Ray… pic.twitter.com/rxGVa8wjbX— Indian Cricket 🏏 (@navshar54008403) July 10, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.